ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌.ಟಿ ಪಟ್ಟಿ: ಹೋರಾಟದಲ್ಲಿ ಯಶಸ್ವಿ ಸಿಗಲಿ- ಎಚ್.ವಿಶ್ವನಾಥ್‌

‘ಪರಿಶಿಷ್ಟ ಸ್ಥಾನಮಾನದ ಬೇಡಿಕೆ ವಿರೋಧಿಸಿ ಕೆಲವರಿಂದ ಪತ್ರ’: ಎಚ್.ವಿಶ್ವನಾಥ್‌ ಮಾಹಿತಿ
Last Updated 26 ನವೆಂಬರ್ 2020, 13:14 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡವ ಜನಾಂಗದವರ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು ಅವರಿಗೆ ಪರಿಶಿಷ್ಟ ಪಂಗಡದ (ಎಸ್‌.ಟಿ) ಸ್ಥಾನಮಾನ ನೀಡಬಾರದೆಂದು ಸ್ವಾಮೀಜಿಯೂ ಸೇರಿದಂತೆ ಕೆಲವರು ಮೈಸೂರಿನ ಬುಡಕಟ್ಟು ಅಧ್ಯಯನ ಸಂಸ್ಥೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್‌. ವಿಶ್ವನಾಥ್‌ ಇಲ್ಲಿ ಹೇಳಿದರು.

ನಗರ ಹೊರವಲಯದ ಕ್ಯಾಪಿಟಲ್‌ ವಿಲೇಜ್‌ನಲ್ಲಿ ಗುರುವಾರ ನಡೆದ ಕೊಡವ ನ್ಯಾಷನಲ್‌ ಕೌನ್ಸಿಲ್‌ ವತಿಯಿಂದ ಆಯೋಜಿಸಿದ್ದ ಕೊಡವ ರಾಷ್ಟ್ರೀಯ ದಿನದಲ್ಲಿ ಅವರು ಮಾತನಾಡಿದರು.

‘ಕೊಡಗಿಗೆ ಬರುವುದಕ್ಕೂ ಮೊದಲು ಸಂಸ್ಥೆಯ ನಿರ್ದೇಶಕರ ಬಳಿ ಕುಲಶಾಸ್ತ್ರ ಅಧ್ಯಯನದ ಮಾಹಿತಿ ಪಡೆದುಕೊಂಡಿದ್ದೇನೆ. ಕೆಲವರು ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿರುವ ಬಗ್ಗೆ ನಿರ್ದೇಶಕರು ಮಾಹಿತಿ ನೀಡಿದರು. ನನಗೂ ಕೆಲವರು ಕರೆ ಮಾಡಿ ಚಳವಳಿಗೆ ಬೆಂಬಲ ನೀಡದಂತೆ ಕೋರಿದ್ದರು’ ಎಂದು ವಿಶ್ವನಾಥ್‌ ಸ್ಫೋಟಕ ಮಾಹಿತಿ ಹೊರಹಾಕಿದರು.

‘ಕೊಡಗು ಭೌಗೋಳಿಕವಾಗಿ ಪ್ರತ್ಯೇಕ ಪ್ರದೇಶ. ಕೊಡವರು ವಿಶಿಷ್ಟ ಆಚರಣೆ, ಸಂಸ್ಕೃತಿ ಹೊಂದಿದ್ದಾರೆ. ಕೊಡವರಲ್ಲಿ ಕೆಲವರು ಹಿಂದುಳಿದ ಜನರಿದ್ದಾರೆ. ಅವರ ಎಳಿಗೋಸ್ಕರ ಈ ಹೋರಾಟ ನಡೆಯುತ್ತಿದೆ. ಕೊಡವರನ್ನು ಎಸ್‌.ಟಿ ಪಟ್ಟಿಗೆ ಸೇರಿಸುವ ಹೋರಾಟದಲ್ಲಿ ನಾವು ಯಶಸ್ವಿಯಾಗೋಣ’ ಎಂದು ಹೇಳಿದರು.

‘ಕುಲಶಾಸ್ತ್ರ ಅಧ್ಯಯನ ಪೂರ್ಣವಾದ ಮೇಲೆ ಸಂಸ್ಥೆಯ ನಿರ್ದೇಶಕರನ್ನೇ ಕೊಡಗಿಗೆ ಆಹ್ವಾನಿಸೋಣ. ಅದಕ್ಕೂ ಮೊದಲು ನಮ್ಮ ಹೋರಾಟದ ರೂಪುರೇಷೆ ಕುರಿತು ಚರ್ಚಿಸಿ ತಾರ್ತಿಕ ಅಂತ್ಯಕ್ಕೆ ಕೊಂಡೊಯ್ಯಲು ಪ್ರಯತ್ನ ಮಾಡೋಣ. ಕೆಲವರು ಈ ಹೋರಾಟ, ಚಳವಳಿಯನ್ನೇ ಸಂಶಯದಿಂದ ನೋಡುತ್ತಿದ್ದಾರೆ. ಈ ರೀತಿ ಆಗಬಾರದು’ ಎಂದು ಪ್ರತಿಪಾದಿಸಿದರು.

‘ಕೊಡವರು ಈ ಮಣ್ಣು ರಕ್ಷಣೆ ಮಾಡುತ್ತಿದ್ದಾರೆ. ಅಲ್ಪಸ್ವಲ್ಪ ಜಮೀನು ಹೊಂದಿದ್ದಾರೆ. ಟಾಟಾ ಎಸ್ಟೇಟ್‌, ಚಿದಂಬರ್‌ ಅವರಷ್ಟು ಯಾರಿಗೂ ಕಾಫಿ ತೋಟವಿಲ್ಲ. ಕೊಡವರ ಹೋರಾಟಕ್ಕೆ ಜಯ ಸಿಗಬೇಕು’ ಎಂದು ತಿಳಿಸಿದರು.

ಮತ್ತೊಬ್ಬ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್‌ ಮಾತನಾಡಿ, ‘ಈ ಚಳವಳಿ ಯಶಸ್ವಿ ಆಗಲಿದೆ. ಕೊಡವರ ಸಂಸ್ಕೃತಿ, ಸಂಸ್ಕಾರ ಹಾಗೂ ಭಾಷೆ ಉಳಿಸುವ ನಿಟ್ಟಿನಲ್ಲಿ ಈ ಹೋರಾಟ ನಡೆಯುತ್ತಿದೆ’ ಎಂದು ಹೇಳಿದರು.

‘ಕೊಡವ ಅಳಿವಿನಂಚಿನಲ್ಲಿರುವ ಸಮುದಾಯ. ಈ ವಿಶಿಷ್ಟ ಸಮುದಾಯವನ್ನು ಉಳಿಸದಿದ್ದರೆ, ಕೊಡವ ಉಡುಗೆ ತೊಡುಗೆಯನ್ನು ಫೋಟೊ ಹಾಗೂ ವಿಡಿಯೊದಲ್ಲಿ ನೋಡುವ ಸ್ಥಿತಿ ಬರಲಿದೆ’ ಎಂದು ಹರಿಪ್ರಸಾದ್ ಎಚ್ಚರಿಸಿದರು.

‘ಮೀಸಲಾತಿ ಎಂಬುದು ಉದ್ಯೋಗಕ್ಕೆ ಮಾತ್ರವಲ್ಲ. ಆ ಸಮುದಾಯದ ಉಳಿಸುವ ನಿಟ್ಟನಲ್ಲೂ ಮೀಸಲಾತಿ ಸೌಲಭ್ಯ ಪ್ರಮುಖ. ಕೊಡವರು ಬರೀ 2 ಲಕ್ಷ ಜನರಿದ್ದರೂ, 10 ಸಾವಿರ ಮಂದಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಭಿಕ್ಷೆ ಕೇಳುತ್ತಿಲ್ಲ. ಸಂವಿಧಾನ ದತ್ತವಾದ ಹಕ್ಕು ಕೇಳುತ್ತಿದ್ದಾರೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ’ವಿಧಾನ ಪರಿಷತ್‌ ಚಿಂತಕರ ಚಾವಡಿ. ಮೂವರು ವಿಧಾನ ಪರಿಷತ್‌ ಸದಸ್ಯರು ಈ ಹೋರಾಟಕ್ಕೆ ಬೆಂಬಲವಾಗಿ ನಿಂತಿರುವ ಕಾರಣಕ್ಕೆ ಬಲ ಬಂದಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ‘ ಎಂದು ಹೇಳಿದರು.

ಕೊಡವ ನ್ಯಾಷನಲ್‌ ಕೌನ್ಸಿಲ್‌ ಅಧ್ಯಕ್ಷ ಎನ್‌.ಯು.ನಾಚಪ್ಪ ಮಾತನಾಡಿ, ‘ಕುಲಶಾಸ್ತ್ರ ಅಧ್ಯಯನ ಆರಂಭವಾಗಿತ್ತು. ಅದಕ್ಕೂ ಕೆಲವರು ಆಕ್ಷೇಪಿಸಿದ್ದರು. ಮತ್ತೆ ‘ಮೈತ್ರಿ’ ಸರ್ಕಾರದ ಅವಧಿಯಲ್ಲಿ ಮನವಿ ಮಾಡಿ ಅಧ್ಯಯನ ಆರಂಭಿಸಲಾಗಿದೆ. ಅದು ಮುಕ್ತಾಯದ ಹಂತಕ್ಕೆ ಬಂದಿದೆ’ ಎಂದು ಹೇಳಿದರು.

‘ಕೊಡವರಿಗೆ ಪರಂಪರೆ ಹಾಗೂ ಇತಿಹಾಸವಿದೆ. ಅದಕ್ಕೆ ಸಾಕ್ಷಿಯಾಗಿ ಮಂದ್‌ ಹಾಗೂ ಐನ್‌ಮನೆಗಳಿವೆ. ನಾವು ಯಾರ ಮನೆಯ ಆಸ್ತಿಯನ್ನು ಕೇಳುತ್ತಿಲ್ಲ. ಸಂವಿಧಾನವನ್ನು ಅತ್ಯಂತ ಶ್ರೇಷ್ಠ ಹಾಗೂ ಗೌರವದಿಂದ ನೋಡುವ ನಾವು ಸಾಂವಿಧಾನಿಕ ಹಕ್ಕು ಕೇಳುತ್ತಿದ್ದೇವೆ’ ಎಂದು ಹೇಳಿದರು.

ಕೆಲವರು ಆಸ್ತಿಯ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಆಸ್ತಿ ನಮಗೆ ವಂಶ ಪಾರಂಪರ್ಯವಾಗಿ ಬಂದಿದೆ. ಕೆಲವರು ಇನ್ನೂ ಬೆಟ್ಟಗುಡ್ಡಗಳಲ್ಲಿ ವಾಸಿಸುತ್ತಿದ್ದಾರೆ. ಅವರ ಪರವಾಗಿ ಈ ಹೋರಾಟ ಎಂದು ಹೇಳಿದರು.

ವಕೀಲ ಎಂ.ಟಿ.ನಾಣಯ್ಯ ಮಾತನಾಡಿದರು.

ಮಹೇಶ್‌ ನಾಣಯ್ಯ, ಚಕ್ಕೇರ ತ್ಯಾಗರಾಜ್‌ ಮೊದಲಾದವರು ಹಾಜರಿದ್ದರು. ಮುಕ್ಕೊಡ್ಲು ವ್ಯಾಲಿಡ್ಯೂ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT