ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಸುಡು ಬಿಸಿಲು, ಕೆಂಡದ ರಾಶಿಯಲ್ಲಿ ಕೋಲ

Published 4 ಮೇ 2024, 14:01 IST
Last Updated 4 ಮೇ 2024, 14:01 IST
ಅಕ್ಷರ ಗಾತ್ರ

ನಾಪೋಕ್ಲು: ಒಂದೆಡೆ ನೆತ್ತಿಯ ಮೇಲೆ ಸುಡು ಬಿಸಿಲು..ಮತ್ತೊಂದೆಡೆ ನಿಗಿನಿಗಿಸುವ ಕೆಂಡದ ರಾಶಿ.  ನಡುಮಧ್ಯಾಹ್ನ ವಿಷ್ಣುಮೂರ್ತಿ ಕೋಲ ಕೆಂಡದ ರಾಶಿಯ ಮೇಲೆ ಬಿದ್ದಾಗ ಅಸಂಖ್ಯ ಭಕ್ತರಲ್ಲಿ ರೋಮಾಂಚನ. ಕೈ ಮುಗಿದು ಭಕ್ತರು ಹರಕೆ ಸಲ್ಲಿಸಿದರು. ಪೂಜೆ ಪುನಸ್ಕಾರಗಳಲ್ಲಿ ಪಾಲ್ಗೊಂಡರು. ಮಳೆ, ಬೆಳೆ ಸಕಾಲದಲ್ಲಿ ಆಗಿ ಸಿರಿ-ಸಂಪತ್ತು ಕರುಣಿಸುವಂತೆ ಪ್ರಾರ್ಥಿಸಿಕೊಂಡರು.

ಇಲ್ಲಿಗೆ ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇಗುಲದಲ್ಲಿ ಕಂಡ ದೃಶ್ಯ ಇದು.  ಶನಿವಾರ ನಡೆದ ಮಕ್ಕಿ ಶಾಸ್ತಾವಿನ ವಾರ್ಷಿಕ ಉತ್ಸವ ಭಕ್ತರ ಸಂಭ್ರಮವನ್ನು ಹೆಚ್ಚಿಸಿತು.

ಶುಕ್ರವಾರ ಸಂಜೆ ಮಳೆಯ ಸಿಂಚನವಾಗಿದ್ದು ಭಕ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತು. ನಾಪೋಕ್ಲು ಪಟ್ಟಣ, ಬೇತು, ನೆಲಜಿ, ಬಲ್ಲಮಾವಟಿ, ಪಾರಾಣೆ, ಹೊದ್ದೂರು ಮತ್ತಿತರ ಗ್ರಾಮಗಳಿಂದ, ದೂರದ ನಗರಗಳಿಂದಲೂ ಅಧಿಕ ಸಂಖ್ಯೆಯ ಭಕ್ತರು ದೇವಾಲಯದಲ್ಲಿ ಜಮಾಯಿಸಿದ್ದರು. ದೇವಾಲಯದ ಆವರಣದಲ್ಲಿ ನಡೆದ ಎರಡು ಪ್ರಮುಖ ಕೋಲಗಳೊಂದಿಗೆ ಉತ್ಸವ ಕೊನೆಗೊಂಡಿತು.

ಶಾಸ್ತಾವು ಸನ್ನಿಧಿಯಲ್ಲಿ ಬೆಳಗ್ಗಿನಿಂದಲೇ ವಿವಿಧ ಕೋಲಗಳು ಸೇವೆ ಸಲ್ಲಿಸಿದವು. ಬೆಳಿಗ್ಗೆ ಅಜ್ಜಪ್ಪ ಕೋಲ , ಮಧ್ಯಾಹ್ನ ವಿಷ್ಣುಮೂರ್ತಿ ಕೋಲಗಳನ್ನು ಭಕ್ತರು ಅಧಿಕ ಸಂಖ್ಯೆಯಲ್ಲಿ ವೀಕ್ಷಿಸಿದರು. ಹರಕೆಗಳನ್ನು ಸಲ್ಲಿಸಿದರು. ದೇವಾಲಯದ ವತಿಯಿಂದ ಉತ್ಸವ ವೀಕ್ಷಿಸಲು ಬಂದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ಶುಕ್ರವಾರ  ರಾತ್ರಿ ದೀಪಾರಾಧನೆ ನಡೆಯಿತು. ಅಂದಿಬೊಳಕ್ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಭಕ್ತರು ಭಾಗವಹಿಸಿದ್ದರು. ಕೇರಳದ ಚೆಂಡೆಯೊಂದಿಗೆ ತಿರುವಾಳ ನೃತ್ಯ ಭಕ್ತರನ್ನು ಸೆಳೆಯಿತು. ಶನಿವಾರ ಸಂಜೆ ಬೆಳ್ಳಿಯ ಮುಖವಾಡ ಧರಿಸಿ ವಿಷ್ಣುಮೂರ್ತಿ ಕೋಲದೊಂದಿಗೆ ಉತ್ಸವಕ್ಕೆ ತೆರೆ ಬಿತ್ತು.

ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಚೆಟ್ಟೀರ ಶ್ಯಾಂ ಬೋಪಣ್ಣ,ತಕ್ಕಮುಖ್ಯಸ್ಥ ಕೊಂಡೀರ ಪೊನ್ನಣ್ಣ ವಾರ್ಷಿಕ ಉತ್ಸವದ ನೇತೃತ್ವ ವಹಿಸಿದ್ದರು.ಅರ್ಚಕ ಮಕ್ಕಿ ದಿವಾಕರ ಪೂಜಾ ವಿಧಿಗಳನ್ನು ನೆರವೇರಿಸಿದರು.

ನಾಪೋಕ್ಲು ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದಲ್ಲಿ.ಶನಿವಾರ  ನಡೆದ ವಾರ್ಷಿಕ ಉತ್ಸವದಲ್ಲಿ ಅಜ್ಜಪ್ಪ ಕೋಲ ಭಕ್ತರನ್ನು ಹರಸಿದ ಕ್ಷಣ.
ನಾಪೋಕ್ಲು ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದಲ್ಲಿ.ಶನಿವಾರ  ನಡೆದ ವಾರ್ಷಿಕ ಉತ್ಸವದಲ್ಲಿ ಅಜ್ಜಪ್ಪ ಕೋಲ ಭಕ್ತರನ್ನು ಹರಸಿದ ಕ್ಷಣ.
ನಾಪೋಕ್ಲು ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದಲ್ಲಿ  ವಾರ್ಷಿಕ ಉತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ದೀಪಾರಾಧನೆ ನಡೆಯಿತು.
ನಾಪೋಕ್ಲು ಸಮೀಪದ ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದಲ್ಲಿ  ವಾರ್ಷಿಕ ಉತ್ಸವದ ಅಂಗವಾಗಿ ಶುಕ್ರವಾರ ರಾತ್ರಿ ದೀಪಾರಾಧನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT