ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ ದಸರಾ: ಜನರ ದಸರ, ಸಾಮರಸ್ಯದ ಪ್ರತೀಕ

ಗೋಣಿಕೊಪ್ಪಲಿನಲ್ಲಿ ಭಾವೈಕ್ಯತೆ ಸಾರುವ ದಸರಾ
Last Updated 23 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಮಡಿಕೇರಿ: ದಸರೆಗೆ ಮೈಸೂರು ಸ್ವಾಗತ ಕೋರಿದರೆ, ಮಡಿಕೇರಿ ದಸರೆಯನ್ನು ಬೀಳ್ಕೊಡುತ್ತದೆ ಎಂಬ ಮಾತು ಅಕ್ಷರಶಃ ಸತ್ಯ. ಹಾಗೆಯೇ, ಮೈಸೂರು ದಸರಾಗೆ ಹೋಲಿಸಿದರೆ ಮಡಿಕೇರಿ ದಸರೆ ಜನರ ದಸರೆ ಎಂಬುದೂ ಅಷ್ಟೇ ಸತ್ಯ.

ಸಾಮಾನ್ಯವಾಗಿ ಮೈಸೂರು ದಸರೆ ಮಾತ್ರವಲ್ಲ ಬಹುತೇಕ ಎಲ್ಲ ಉತ್ಸವಗಳಲ್ಲೂ ಅಧಿಕಾರಿ ವರ್ಗ ಹಾಗೂ ರಾಜಕಾರಣಿಗಳ ಹಸ್ತಕ್ಷೇಪವೇ ಹೆಚ್ಚಿರುತ್ತದೆ. ಎಲ್ಲದ್ದಕ್ಕೂ ಅಧಿಕಾರಿಗಳ ಒಪ್ಪಿಗೆ ಬೇಕೇ ಬೇಕು. ಆದರೆ, ಮಡಿಕೇರಿ ದಸರೆಯಲ್ಲಿ ಅಧಿಕಾರಿಗಳ ಹಸ್ತಕ್ಷೇಪ ತೀರಾ ಕಡಿಮೆ. ಈ ಅರ್ಥದಲ್ಲಿ ಜನರ ಉತ್ಸವವಾಗಿ ವಿಜೃಂಭಿಸುತ್ತಿದೆ ಮಡಿಕೇರಿ ದಸರಾ.

ಮಡಿಕೇರಿ ದಸರಾ ಯಾವುದೋ ಒಂದು ಜಾತಿ ಸಮುದಾಯಕ್ಕೆ ಸೇರಿದ್ದಲ್ಲ. ಇಲ್ಲಿ ಎಲ್ಲ ಧರ್ಮ, ಜಾತಿ, ಜನಾಂಗದವರೂ ಒಟ್ಟಾಗಿ ಸೇರಿ ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಾರೆ. ಈ ಮೂಲಕ ಮಡಿಕೇರಿ ದಸರಾ ನಾಡಿಗೆ ಭಾವೈಕ್ಯತೆಯ, ಸಾಮರಸ್ಯದ ಸಂದೇಶವನ್ನೂ ನೀಡುತ್ತದೆ.

ಮಡಿಕೇರಿ ದಸರಾವನ್ನು ಬೆಳಕಿನ ದಸರಾ ಎಂದೂ ಕರೆಯುತ್ತಾರೆ. ಕರ್ನಾಟಕದಲ್ಲಿ ಮೈಸೂರು ದಸರೆಗೆ ಬರುವಂತೆ ಸಾಗರೋಪಾದಿಯಲ್ಲಿ ಜನರು ಇಲ್ಲಿಗೂ ಬರುತ್ತಾರೆ. ಆದರೆ, ಸರ್ಕಾರ ಮಾತ್ರ ತೀರಾ ನಗಣ್ಯ ಎನಿಸುವಷ್ಟು ಹಣ ಕೊಟ್ಟು ಕೈ ತೊಳೆದುಕೊಳ್ಳುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.

ಮೈಸೂರು ದಸರೆಗೆ ಇರುವಷ್ಟೇ ಇತಿಹಾಸ, ಐತಿಹ್ಯಗಳು ಮಡಿಕೇರಿ ದಸರೆಗೂ ಇವೆ. ಇಲ್ಲಿ ಆಳ್ವಿಕೆ ಮಾಡಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆ ಮಾಡುತ್ತಿದ್ದರು. ದೊಡ್ಡವೀರ ರಾಜೇಂದ್ರ ಒಡೆಯರ್ ಅವರು ನವರಾತ್ರಿ ಉತ್ಸವ ಆಚರಿಸುತ್ತಿದ್ದರು ಎಂಬ ಐತಿಹ್ಯಗಳಿವೆ.

1834ರ ಹೊತ್ತಿಗೆ ಕೊಡಗಿನಲ್ಲಿ ಅಧಿಕಾರ ಬ್ರಿಟಿಷರ ಕೈ ಸೇರುತ್ತಿದ್ದಂತೆ ದಸರಾ ಆಚರಣೆಯೂ ಜನರ ಕೈ ಸೇರಿತು. ಇಲ್ಲಿದ್ದ ಭಜನಾ ಮಂದಿರಗಳು ನವರಾತ್ರಿ ಉತ್ಸವವನ್ನು ಮುಂದುವರಿಸಿದವು. ಕಾಲಕ್ಕೆ ತಕ್ಕಂತೆ ತಂತ್ರಜ್ಞಾನದ ಹೊಸ ಸಾಧ್ಯತೆಗಳನ್ನು ದಸರೆಯಲ್ಲಿ ಅಳವಡಿಸಿಕೊಳ್ಳುತ್ತ, ಸ್ವರೂಪಗಳನ್ನೂ ಬದಲಿಸಿಕೊಳ್ಳುತ್ತಿರುವುದರಿಂದ ಮಡಿಕೇರಿ ದಸರೆ ದಿನೇ ದಿನೆ ತನ್ನ ಛಾಪನ್ನು ಹೆಚ್ಚಿಸಿಕೊಳ್ಳುತ್ತಿದೆ. ಲಕ್ಷಾಂತರ ಮಂದಿ ಪ್ರವಾಸಿಗರನ್ನೂ ತನ್ನತ್ತ ಸೆಳೆಯುತ್ತಿದೆ.

ನಾಳೆ: ದಸರೆಯಲ್ಲಿ ಕರಗೋತ್ಸವದ ಮೆರುಗು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT