ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಸುದ್ದಿಗೋಷ್ಠಿ: ಅಧಿಕಾರಿಗಳ ವಿರುದ್ಧ ಕಿಡಿ

ಸಾರ್ವಜನಿಕ ಹಿತ ರಕ್ಷಣಾ ಸಮಿತಿ ವತಿಯಿಂದ ಸುದ್ದಿಗೋಷ್ಠಿ
Published : 12 ಸೆಪ್ಟೆಂಬರ್ 2024, 4:34 IST
Last Updated : 12 ಸೆಪ್ಟೆಂಬರ್ 2024, 4:34 IST
ಫಾಲೋ ಮಾಡಿ
Comments

ಮಡಿಕೇರಿ: ‘ಕೊಡಗು ಜಿಲ್ಲೆಯಲ್ಲಿ ಅಧಿಕಾರಿಗಳು ಕನಿಷ್ಠ ಪಕ್ಷ ಸಂತೆಯ ದಿನವಾದರೂ ಕೇಂದ್ರ ಸ್ಥಾನದಲ್ಲಿರಬೇಕು’ ಎಂದು ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎ.ಎಸ್. ಕಟ್ಟಿಮಂದಯ್ಯ ಒತ್ತಾಯಿಸಿದರು.

ಸಂತೆ ದಿನ ಹೆಚ್ಚಿನ ಮಂದಿ ಪಟ್ಟಣ, ನಗರಗಳಿಗೆ ಬರುತ್ತಾರೆ. ದೂರದ ಊರುಗಳಿಂದ ಬರುವ ಅವರು ತಮ್ಮ ಕೆಲಸಗಳಿಗಾಗಿ ಅಧಿಕಾರಿಗಳನ್ನು ಅಂದು ಭೇಟಿ ಮಾಡುತ್ತಾರೆ. ಹಾಗಾಗಿ, ಕೊಡಗು ಜಿಲ್ಲೆಯ ಕೇಂದ್ರ ಸ್ಥಾನವಾದ ಮಡಿಕೇರಿ, ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಹಾಗೂ ಹೋಬಳಿ ಮಟ್ಟದ ಕೇಂದ್ರಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಆಯಾಯ ಊರಿನಲ್ಲಿ ನಡೆಯುವ ಸಂತೆಯ ದಿನ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಆಗಸ್ಟ್ 21ರಂದು ಬೆಳಿಗ್ಗೆ 11 ಗಂಟೆಗೆ ವಿರಾಜಪೇಟೆ ತಹಶೀಲ್ದಾರ್  ಅವರು ಕಚೇರಿ ಬಂದು ಭೇಟಿಯಾಗಲು ಸಮಯವನ್ನು ನೀಡಿದ್ದರು. ನಿಗದಿತ ಸಮಯಕ್ಕೆ ಹೋದರೆ ಅವರು ಕಚೇರಿಯಲ್ಲಿರಲಿಲ್ಲ. ಫೋನ್ ಮಾಡಿದಾಗ ಅವರು ಜಿಲ್ಲಾಧಿಕಾರಿ ಕಚೇರಿಗೆ ಹೋಗಿರುವುದಾಗಿ ತಿಳಿಸಿದರು. ಅವರು ಹೋಗುವಾಗ ಕನಿಷ್ಠ ಪಕ್ಷ ಪೂರ್ವನಿಗದಿತವಾಗಿ ಭೇಟಿಗೆ ಸಮಯ ಪಡೆದವರಿಗೆ ವಿಷಯ ತಿಳಿಸಲಿಲ್ಲ. ಇದರಿಂದ ಹಿರಿಯ ನಾಗರಿಕರಾದ ನಾವು ಅಷ್ಟು ದೂರು ಹೋಗಿ ವ್ಯರ್ಥವಾಗಿ ವಾಪಸ್ ಬಂದೆವು. ಇದು ತಹಶೀಲ್ದಾರ್‌ ಅವರ ನಿರ್ಲಕ್ಷ್ಯ’ ಎಂದು ಕಿಡಿಕಾರಿದರು.

ಕಾಫಿಗೆ ಸಿಗುತ್ತಿಲ್ಲ ನ್ಯಾಯಯುತ ಬೆಲೆ

ಸಮಿತಿಯ ಸಲಹೆಗಾರ ಸಿ.ಎನ್.ಬೋಸ್ ವಿಶ್ವನಾಥ್ ಮಾತನಾಡಿ, ‘ಕಾಫಿ ಫಸಲಿಗೆ ಅಂತರರಾಷ್ಟ್ರೀಯ ದರ ನೀಡದೆ ಮಧ್ಯವರ್ತಿಗಳು ವಂಚಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ತೂಕದಲ್ಲಿಯೂ ವಂಚನೆ ಮಾಡಲಾಗುತ್ತಿದೆ. ಮಾತ್ರವಲ್ಲ, ಹಿರಿಯ ನಾಗರಿಕರ ಬಳಿ ಖರೀದಿಸುವಾಗ ಅತೀವ ವಂಚನೆ ಎಸಗುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿದೆ ಎಂದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಎ.ಸತೀಶ್ ದೇವಯ್ಯ ಮಾತನಾಡಿ, ‘ಕಾಫಿ ಮಂಡಳಿಯು ಅಂತರರಾಷ್ಟ್ರೀಯ ಮಾರುಕಟ್ಟೆ ದರವನ್ನು ಬೆಳೆಗಾರರಿಗೆ ದೊರಕುವಂತೆ ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ದೈನಂದಿನ ಮಾರುಕಟ್ಟೆ ದರವನ್ನು ನಿಖರವಾಗಿ ಮಾಹಿತಿ ನೀಡುವ ವ್ಯವಸ್ಥೆ ರೂಪಿಸಬೇಕು’ ಎಂದು ಮನವಿ ಮಾಡಿದರು.

ಸಮಿತಿಯ ಉಪಾಧ್ಯಕ್ಷ ಎಸ್.ಎ.ರತನ್ ಸುಬ್ಬಯ್ಯ, ಸಹಕಾರ್ಯದರ್ಶಿ ಕೆ.ಎಸ್.ರಾಜಾ ನರೇಂದ್ರ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT