ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಮುಂಗಾರು ಸಿಹಿ ತರಲಿ...

ಸೂಕ್ಷ್ಮ ಪ್ರದೇಶಕ್ಕೆ ಎನ್‌ಡಿಆರ್‌ಎಫ್‌ ಭೇಟಿ, ಪರಿಸ್ಥಿತಿ ಅವಲೋಕನ, ಸಜ್ಜಾದ ರಕ್ಷಣಾ ತಂಡಗಳು
Last Updated 14 ಜೂನ್ 2020, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮುಂಗಾರು ಅಬ್ಬರಿಸಲು ಆರಂಭಿಸಿದೆ. ಒಂದು ವಾರದಿಂದ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಹಳ್ಳ, ಕೊಳ್ಳ, ನದಿ ಹಾಗೂ ಭತ್ತದ ಗದ್ದೆಗಳಲ್ಲೂ ನೀರು ಆವರಿಸಿಕೊಳ್ಳುತ್ತಿದೆ.

ಇನ್ನು ಮೂರು ತಿಂಗಳು ಜಿಲ್ಲೆಯಲ್ಲಿ ಮಳೆಯ ವಾತಾವರಣ ಇರಲಿದೆ. ಆದರೆ, ಎಲ್ಲರ ಮನದ ಪ್ರಾರ್ಥನೆಯೂ ಈಗ ಒಂದೇ. ಕಹಿ ಘಟನೆ ಮತ್ತೆ ಮರುಕಳುಹಿಸುವುದು ಬೇಡ; ಈ ಬಾರಿಯ ಮುಂಗಾರು ಮಳೆ ಕಾಫಿ ಕಣಿವೆಗೆ ಸಿಹಿ ತರಲು ಎಂಬುದು.

2018ರಲ್ಲಿ ಮೇ ಅಂತ್ಯದಿಂದಲೇ ಜೋರು ಮಳೆ ಸುರಿಯಲು ಆರಂಭಿಸಿತ್ತು. ಜೂನ್‌, ಜುಲೈ ಹಾಗೂ ಅಗಸ್ಟ್‌ ನಿರಂತರ ಮಳೆಯಾಗಿ, ಆಗಸ್ಟ್‌ ಮಧ್ಯದಲ್ಲಿ ಭೂಕುಸಿತ, ಪ್ರವಾಹವೇ ಸೃಷ್ಟಿಯಾಗಿತ್ತು. ಸಾವು, ನೋವಿಗೂ ಮುಂಗಾರು ಮಳೆ ಕಾರಣವಾಗಿತ್ತು. ಕಣ್ಣೀರಿನ ಕೋಡಿಯನ್ನೇ ಹರಿಸಿತ್ತು.

ಆ ನೋವು ಮರೆಯುವಷ್ಟರಲ್ಲಿಯೇ 2019ರಲ್ಲೂ ಕಾವೇರಿ ನದಿಯು ಉಕ್ಕೇರಿ ಅನಾಹುತ ಸೃಷ್ಟಿಸಿತ್ತು. ದಕ್ಷಿಣ ಕೊಡಗಿನ ತೋರದಲ್ಲಿ ಭೂಕುಸಿತವಾಗಿ ಗಾಯದ ಮೇಲೆ ಬರೆ ಎಳೆದಿತ್ತು. ಈ ವರ್ಷ ಮುಂಗಾರು ಆಶಾದಾಯಕ ಆಗಿರಲಿ. ಯಾವುದೇ ಅನಾಹುತ ಸೃಷ್ಟಿಸುವುದು ಬೇಡ ಎಂಬುದು ಎಲ್ಲರ ಪ್ರಾರ್ಥನೆಯಾಗಿದೆ.

ಕಳೆದ ವರ್ಷಕ್ಕಿಂತ ಹೆಚ್ಚು ಮಳೆ

ಜನವರಿಯಿಂದ ಇದುವರೆಗೂ ಜಿಲ್ಲೆಯಲ್ಲಿ ಸರಾಸರಿ 150 ಮಿ.ಮೀ ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 90 ಮಿ.ಮೀ ಮಳೆ ಬಿದ್ದಿತ್ತು. ಕಳೆದ ವರ್ಷಕ್ಕಿಂತ 60 ಮಿ.ಮೀ ಜಾಸ್ತಿ ಮಳೆಯಾಗಿದೆ.

ಮಡಿಕೇರಿ ತಾಲ್ಲೂಕಿನಲ್ಲಿ ಜನವರಿಯಿಂದ ಇದುವರೆಗೂ 210 ಮಿ.ಮೀ ಮಳೆಯಾಗಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 100 ಮಿ.ಮೀ ಮಳೆಯಾಗಿತ್ತು.

ವಿರಾಜಪೇಟೆ ತಾಲ್ಲೂಕಿನಲ್ಲಿ ಇದುವರೆಗೆ 117 ಮಿ.ಮೀ ಮಳೆಯಾಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 110 ಮಿ.ಮೀ ಮಳೆಯಾಗಿತ್ತು. ಅದೇ ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಈವರೆಗೆ 71.16 ಮಿ.ಮೀ ಮಳೆಯಾಗಿದ್ದು ಕಳೆದ ವರ್ಷ ಇದೇ ಅವಧಿಯಲ್ಲಿ 40.64 ಮಿ.ಮೀ ಮಳೆಯಾಗಿತ್ತು. ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಹೆಚ್ಚು ಮಳೆಯಾಗಿದೆ. ಹೀಗಾಗಿ, ಜಿಲ್ಲಾಡಳಿತವು ಕಟ್ಟೆಚ್ಚರ ವಹಿಸಿದೆ.

ರಕ್ಷಣಾ ಸಿಬ್ಬಂದಿ ತಯಾರಿ

ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ (ಎನ್‌ಡಿಆರ್‌ಎಫ್‌) ಒಂದು ಬೆಟಾಲಿಯನ್‌ ಜಿಲ್ಲೆಗೆ ಆಗಮಿಸಿದೆ. ಸೂಕ್ಷ್ಮ ಹಾಗೂ ನದಿ ಪಾತ್ರದ ಗ್ರಾಮಗಳಿಗೆ ಎನ್‌ಡಿಆರ್‌ಎಫ್‌ ತಂಡವು ಭೇಟಿ ಪರಿಸ್ಥಿತಿ ಅವಲೋಕಿಸಿದೆ. ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ. ಇನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರೂ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿದ್ದಾರೆ. ಹಾರಂಗಿ ಹಿನ್ನೀರಿನಲ್ಲಿ ರಕ್ಷಣಾ ಕಾರ್ಯಾಚರಣೆ ಪೂರ್ವಾಭ್ಯಾಸ ನಡೆಸಿದ್ದಾರೆ.

ಹೊಸ ಮನೆಯತ್ತ ಜನರು

ಮಳೆ ಚುರುಕು ಪಡೆಯುತ್ತಿದ್ದಂತೆಯೇ ಮದೆ ಹಾಗೂ ಜಂಬೂರು ಬಾಣೆಯಲ್ಲಿ ಸಂತ್ರಸ್ತರಿಗೆ ನೀಡಿರುವ ಮನೆಗಳಿಗೆ ಸಂತ್ರಸ್ತರು ಸ್ಥಳಾಂತರಗೊಳ್ಳುತ್ತಿದ್ದಾರೆ.

ಭೂಕುಸಿತ ಸ್ಥಳದಲ್ಲಿ ಮತ್ತೆ ಆತಂಕ

ಎರಡು ವರ್ಷಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದ ಆತಂಕ ಜನರ ಮನಸ್ಸಿನಿಂದ ಇನ್ನೂ ದೂರವಾಗಿಲ್ಲ. ಭೂಕುಸಿತ ಸಂಭವಿಸಿದ್ದ ಸ್ಥಳಗಳಲ್ಲಿ ಮತ್ತೆ ಆತಂಕ ಶುರುವಾಗಿದೆ.

ಹೆಮ್ಮೆತಾಳು, ಮೇಘತ್ತಾಳು, ಜೋಡುಪಾಲ, ಮದೆನಾಡು, 2ನೇ ಮೊಣ್ಣಂಗೇರಿ, ಮಡಿಕೇರಿಯ ಚಾಮುಂಡೇಶ್ವರಿ ನಗರ ಸೇರಿದಂತೆ ಒಟ್ಟು 37 ಗ್ರಾಮಗಳು ಭೂಕುಸಿತಕ್ಕೆ ನಲುಗಿ ಹೋಗಿದ್ದವು.

2ನೇ ಮೊಣ್ಣಂಗೇರಿಯೂ ತೀವ್ರ ಸಮಸ್ಯೆ ಎದುರಿಸಿದ್ದ ಗ್ರಾಮಗಳಲ್ಲಿ ಒಂದು. ಸುತ್ತಲೂ ಬೆಟ್ಟಗುಡ್ಡಗಳ ಹೊದ್ದು, ಹಸಿರು ಕಾನನಗಳಿಂದ ಕಂಗೊಳಿಸುವ ಮೊಣ್ಣಂಗೇರಿ ಭೂಕುಸಿತದಿಂದ ಸ್ಮಶಾನ ಮೌನದಂತಾಗಿತ್ತು. ಮುಗಿಲೆತ್ತರದ ಬೆಟ್ಟಗಳು ಉರುಳಿದ್ದರಿಂದ 20ಕ್ಕೂ ಹೆಚ್ಚು ಮನೆಗಳು ಭೂಮಿಯಾಳಕ್ಕೆ ಸೇರಿ ಹೋಗಿದ್ದವು. ಉಳಿದ 50ಕ್ಕೂ ಹೆಚ್ಚು ಕುಟುಂಬಗಳು ಮಾತ್ರ ಯಾವುದಕ್ಕೂ ಅಂಜದೇ ಅಲ್ಲಿಯೇ ಕೃಷಿ ಮಾಡುತ್ತಾ ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಮಳೆಗಾಲಕ್ಕೂ ಮೊದಲು, ಗ್ರಾಮಸ್ಥರೇ ಶ್ರಮದಾನದ ಮೂಲಕ ರಸ್ತೆ, ಸೇತುವೆ ಅಭಿವೃದ್ಧಿ ಮಾಡಿಕೊಂಡಿದ್ದಾರೆ.

ಇದೀಗ ಮೊಣ್ಣಂಗೇರಿ ಸುತ್ತಮುತ್ತ ಪ್ರದೇಶದಲ್ಲಿ ಮತ್ತೆ ಆತಂಕವಿದೆ. ಮಳೆ ಜೋರಾದರೆ ಭೂಕುಸಿತ ಸಂಭವಿಸಿದ್ದ ಸ್ಥಳದಲ್ಲಿ ಮತ್ತೆ ಕುಸಿಯುವ ಸಾಧ್ಯತೆಯಿದೆ. ಮೊಣ್ಣಂಗೇರಿ ಗ್ರಾಮಕ್ಕೆ ಮದೆನಾಡಿನ ಮುಖ್ಯರಸ್ತೆಯಿಂದ 5 ಕಿ.ಮೀ ಸಾಗಬೇಕು. ಮಾರ್ಗ ಮಧ್ಯೆ ನಾಲ್ಕೈದು ತಿರುವುಗಳಲ್ಲಿ ಭಾರಿ ಭೂಕುಸಿತವಾಗಿದ್ದು, ಇಲ್ಲೆಲ್ಲವೂ ರಸ್ತೆ ಪುನರ್ ನಿರ್ಮಾಣ ಮಾಡಲಾಗಿತ್ತು. ಇದೀಗ ಮಳೆ ಆರಂಭವಾಗಿದ್ದು ಹಲವೆಡೆ ಭೂಮಿ ಬಿರುಕು ಕಾಣಿಸಿದೆ. ಗ್ರಾಮಸ್ಥರೂ ಆತಂಕ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT