ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಕೂರ್ಗ್‌: ಕುತೂಹಲದ ಸೆಮಿಫೈನಲ್‌ ಪಂದ್ಯ

ಕೊಡವ ಕೌಟುಂಬಿಕ ಹಾಕಿ ಟೂರ್ನಿ
Last Updated 7 ಮೇ 2019, 13:46 IST
ಅಕ್ಷರ ಗಾತ್ರ

ವಿರಾಜಪೇಟೆ: ಸಮೀಪದ ಕಾಕೋಟುಪರಂಬು ಮೈದಾನದಲ್ಲಿ ‘ಹಾಕಿ ಕೂರ್ಗ್’ ಆಶ್ರಯದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ನಾಕೌಟ್ ಹಾಕಿ ಟೂರ್ನಿಯಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಚಂದುರ, ಕಾಳೇಂಗಡ, ಇಟ್ಟಿರ ಹಾಗೂ ಪುದಿಯೊಕ್ಕಡ ತಂಡಗಳು ಜಯಗಳಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟವು.

ಉತ್ತಮ ಹಣಾಹಣಿಯಿಂದ ಕೂಡಿದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ, ಚಂದುರ ತಂಡವು ‘ಟೈಬ್ರೇಕರ್‌’ನಲ್ಲಿ 3-2 ಗೋಲುಗಳಿಂದ ಕೋಟೆರ ತಂಡವನ್ನು ಮಣಿಸಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು.

ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತೀವ್ರ ಹೋರಾಟವನ್ನು ನಡೆಸಿದರೂ ಎರಡು ಕಡೆಯಿಂದಲೂ ಯಾವುದೇ ಗೋಲು ಗಳಿಸಲು ಸಫಲವಾಗಲಿಲ್ಲ. ಇದರಿಂದ ನಿಗದಿತ ಅವಧಿ ಆಟವು ಸಮಬಲದಲ್ಲಿ ಅಂತ್ಯಗೊಂಡಿತು.

ಫಲಿತಾಂಶಕ್ಕಾಗಿ ‘ಟೈಬ್ರೇಕರ್‌’ ಮೊರೆ ಹೋದಾಗ ಕೋಟೆರ ತಂಡದ ಪರ ಭರತ್ ಹಾಗೂ ದಿಲೀಪ್ ಗೋಲು ಗಳಿಸಿದರು. ಇದಕ್ಕೆ ಪ್ರತಿಯಾಗಿ ಚಂದುರ ತಂಡದ ದೇವಯ್ಯ, ಮುತ್ತಣ್ಣ ಹಾಗೂ ಶಶಿ ಗೋಲು ಗಳಿಸುವ ಮೂಲಕ ತಂಡವನ್ನು ಸೆಮಿಫೈನಲ್‌ಗೆ ಮುನ್ನಡೆಸಿದರು.

2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಾಳೇಂಗಡ ತಂಡವು 5-2 ಗೋಲುಗಳಿಂದ ತೀತಮಾಡ ತಂಡವನ್ನು ಮಣಿಸಿ ಮುನ್ನಡೆಯಿತು.

ಪಂದ್ಯದ ಆರಂಭದಲ್ಲಿಯೇ 4 ಹಾಗೂ 7ನೇ ನಿಮಿಷದಲ್ಲಿಯೇ ತೀತಮಾಡ ತಂಡದ ಪೊನ್ನಣ್ಣ ಸತತ ಎರಡು ಗೋಲು ದಾಖಲಿಸುವ ಮೂಲಕ ತಂಡಕ್ಕೆ ಭರ್ಜರಿ ಆರಂಭವೊದಗಿಸಿದರು. ಆರಂಭದ ಆಘಾತದಿಂದ ಎಚ್ಚೆತ್ತ ಕಾಳೇಂಗಡ ತಂಡವು ಮರುದಾಳಿಯನ್ನು ಸಂಘಟಿಸಿತು. ತಂಡದ ಮಹಿಳಾ ಆಟಗಾರ್ತಿ ಮೋನಿಷಾ 10 ಹಾಗೂ 11ನೇ ನಿಮಿಷದಲ್ಲಿ ಸತತ ಎರಡು ಗೋಲು ದಾಖಲಿಸಿ ತಂಡಕ್ಕೆ ಉತ್ಸಾಹ ತುಂಬುವುದರೊಂದಿಗೆ ಪಂದ್ಯ ಸಮಬಲ ಆಗುವಂತೆ ಮಾಡಿದರು.

ಬಳಿಕ ಕಾಳೇಂಗಡ ತಂಡದ ಪವನ್ 23, 30 ಹಾಗೂ 47ನೇ ನಿಮಿಷದಲ್ಲಿ ಸತತ ಮೂರು ಗೋಲುಗಳಿಸುವ ಮೂಲಕ ‘ಹ್ಯಾಟ್ರಿಕ್’ ಸಾಧನೆಯೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ತೀತಮಾಡ ತಂಡವು ಉತ್ತಮ ಹೋರಾಟವನ್ನು ನಡೆಸಿತಾದರೂ ಗೋಲುಗಳಿಸಬಹುದಾದ ಕೆಲ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.

ಮೂರನೇ ಕ್ವಾರ್ಟರ್ ಫೈನಲ್‌ನಲ್ಲಿ ಇಟ್ಟಿರ ತಂಡವು 2-1 ಗೋಲುಗಳಿಂದ ಕಂಬಿರಂಡ ತಂಡವನ್ನು ಮಣಿಸಿ ಮುನ್ನಡೆಯಿತು. ಉತ್ತಮ ಹೋರಾಟದಿಂದ ಕೂಡಿದ ಪಂದ್ಯದಲ್ಲಿ ಸಂಘಟಿತ ಆಟವನ್ನು ಪ್ರದರ್ಶಿಸಿದ ಇಟ್ಟಿರ ಕುಟುಂಬದ ಪರ 8ನೇ ನಿಮಿಷದಲ್ಲಿ ಕುಟ್ಟಪ್ಪ ಹಾಗೂ 12ನೇ ನಿಮಿಷದಲ್ಲಿ ಜಗನ್ ಗೋಲು ದಾಖಲಿಸಿದರು.

ಕಂಬಿರಂಡ ತಂಡದ ಪರ ಯೋಗೇಶ್ 6ನೇ ನಿಮಿಷದಲ್ಲಿ ಗೋಲು ಗಳಿಸಿ ಪ್ರತಿರೋಧ ತೋರಿದರು. ಕಂಬಿರಂಡ ತಂಡದ ಆಟಗಾರರು ಗೋಲು ಗಳಿಸಬಹುದಾದ ಕೆಲವು ಉತ್ತಮ ಅವಕಾಶಗಳನ್ನು ಕೈಚೆಲ್ಲಿದ್ದು ತಂಡಕ್ಕೆ ಮುಳುವಾಯಿತು. ಕಂಬೀರಂಡ ತಂಡವನ್ನು ಅಂತರರಾಷ್ಟ್ರೀಯ ಆಟಗಾರ್ತಿ ಪೊನ್ನಮ್ಮ ಪ್ರತಿನಿಧಿಸಿದರು.

ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪುದಿಯೊಕ್ಕಡ ತಂಡವು 1-0 ಗೋಲುಗಳಿಂದ ಅರೆಯಡ ತಂಡವನ್ನು ಮಣಿಸಿ ನಾಲ್ಕರ ಹಂತಕ್ಕೆ ಮುನ್ನಡೆಯಿತು. ಉತ್ತಮ ಹೋರಾಟದಿಂದ ಕೂಡಿದ ಪಂದ್ಯದಲ್ಲಿ ಪುದಿಯೊಕ್ಕಡ ತಂಡದ ಪರ ಅಂತರರಾಷ್ಟ್ರೀಯ ಆಟಗಾರ ಪ್ರಧಾನ್ ಸೋಮಣ್ಣ ಪಂದ್ಯದ 24ನೇ ನಿಮಿಷದಲ್ಲಿ ದೊರೆತ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಪಂದ್ಯದ ಏಕೈಕ ಗೋಲು ದಾಖಲಿಸಿದರು.

ಈ ಮೂಲಕ ತಂಡದ ಗೆಲುವಿನ ರೂವಾರಿ ಎನಿಸಿದರು. ಅರೆಯಡ ತಂಡವು ಉತ್ತಮ ಹೋರಾಟ ನಡೆಸಿತಾದರೂ ಗೋಲು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT