‘ಚಿಕ್ಕ’ ರೇಷ್ಮೆ ನೀರಿನದ್ದೇ ‘ದೊಡ್ಡ’ ಸಮಸ್ಯೆ

ಭಾನುವಾರ, ಮೇ 26, 2019
26 °C
ಇದ್ದೂ ಇಲ್ಲದಂತಾಗಿರುವ ಕೊಳವೆ ಬಾವಿ: ಕುಸಿಯುವ ಹಂತದಲ್ಲಿ ಮನೆಗಳು

‘ಚಿಕ್ಕ’ ರೇಷ್ಮೆ ನೀರಿನದ್ದೇ ‘ದೊಡ್ಡ’ ಸಮಸ್ಯೆ

Published:
Updated:

ಸಿದ್ದಾಪುರ: ಮೂಲಸೌಕರ್ಯವಾದ ಕುಡಿಯುವ ನೀರು ಲಭ್ಯವಾಗದೆ ಹಾಡಿಯ ನಿವಾಸಿಗಳು ಕಂಗಾಲಾಗಿದ್ದು ಕುಡಿಯುವ ನೀರಿಗಾಗಿ ಕಿಲೋಮೀಟರ್‌ಗಟ್ಟಲೇ ಸಂಚರಿಸಬೇಕಾದ ಸ್ಥಿತಿ ಚಿಕ್ಕರೇಷ್ಮೆ ಗಿರಿಜನ ಹಾಡಿಯ ನಿವಾಸಿಗಳದ್ದು.

ಸಿದ್ದಾಪುರ ಸಮೀಪ ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಯ ಚಿಕ್ಕರೇಷ್ಮೆ ಹಾಡಿಯಲ್ಲಿ ಸುಮಾರು 35 ಗಿರಿಜನ ಕುಟುಂಬಗಳು ವಾಸವಾಗಿದ್ದು, ಕಳೆದ ಹಲವು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೂರಿದೆ.

ಪ್ರತಿ ಬೇಸಿಗೆಯಲ್ಲೂ ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ದೂರ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ವ್ಯಾಪ್ತಿಯಲ್ಲಿ ಸುಮಾರು 7 ಕೊಳವೆಬಾವಿಯನ್ನು ಕೊರೆಸಿದ್ದು, ಸರಿಯಾದ ನಿರ್ವಹಣೆ ಇಲ್ಲದೇ ಕೊಳವೆಬಾವಿ ಇದ್ದು ಇಲ್ಲದಂತಾಗಿದೆ. ಬಹುತೇಕ ಕೊಳವೆ ಬಾವಿಯಲ್ಲಿ ನೀರು ಇಲ್ಲವಾಗಿದ್ದು, ನೀರು ಇರುವ ಕೊಳವೆ ಬಾವಿಯ ನಿರ್ವಹಣೆ ಇಲ್ಲದೇ ಪೈಪುಗಳು ತುಕ್ಕು ಹಿಡಿದು ಅನುಪಯುಕ್ತವಾಗಿವೆ. 

ಹಾಡಿಯಲ್ಲಿರುವ ಕುಟುಂಬಗಳು ಈ ಹಿಂದೆ ಇರುವ ಏಕೈಕ ತೆರೆದ ಬಾವಿಯಿಂದ ಕುಡಿಯುವ ನೀರನ್ನು ಉಪಯೋಗಿಸುತ್ತಿದ್ದರು. ಆದರೆ, ಇದೀಗ ಬಿಸಿಲಿನ ತಾಪದಿಂದ ಅಂತರ್ಜಲ ಮಟ್ಟ ಕಸಿದಿದ್ದು, ಇರುವ ಬಾವಿಯಲ್ಲೂ ನೀರು ಪೂರ್ಣವಾಗಿ ಬತ್ತಿ ಹೋಗಿದೆ.

ಹಾಗಾಗಿ, ದೂರದ ಪ್ರದೇಶದಿಂದ ನೀರನ್ನು ತರಬೇಕಾದ ಸ್ಥಿತಿ ಎದುರಾಗಿದ್ದು ಖಾಸಗಿ ತೋಟಗಳಲ್ಲಿರುವ ಕೊಳವೆ ಬಾವಿಯಿಂದ ನೀರು ಪಡೆದು, ನಡೆದುಕೊಂಡೇ ಬರಬೇಕಾಗಿದೆ. ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತ ಹಾಡಿಯಲ್ಲಿರುವ ಕೊಳವೆ ಬಾವಿಗಳನ್ನು ಸೂಕ್ತ ನಿರ್ವಹಣೆ ಮಾಡದಿರುವ ಬಗ್ಗೆ ಹಾಡಿಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ ತೋಟ ಕೆಲಸಕ್ಕೆ ತೆರಳಿ ಸಂಜೆ ಮರಳಿ ತಮ್ಮ ಮನೆಗಳಿಗೆ ಹಿಂತಿರುಗಿ ಕುಡಿಯುವ ನೀರಿಗಾಗಿ ದೂರದ ಪ್ರದೇಶಕ್ಕೆ ತೆರಳಬೇಕಾದ ಅನಿವಾರ್ಯತೆ ಹಾಡಿಯ ನಿವಾಸಿಗಳದ್ದಾಗಿದೆ. ಆದರೆ, ಕಾಡಾನೆ ಉಪಟಳದಿಂದಾಗಿ ಸಂಜೆ ವೇಳೆಯಲ್ಲಿ ನೀರಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು ಸಂಜೆಯ ಬಳಿಕ ಹಾಡಿಯ ನಿವಾಸಿಗಳು ಮನೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದ್ದ ಸಂದರ್ಭ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಟ್ಯಾಂಕರ್ ಮೂಲಕ ಹಾಡಿಯ ನಿವಾಸಿಗಳಿಗೆ ನೀರನ್ನು ಪೂರೈಸುತ್ತಿತ್ತು. ಪ್ರಸ್ತುತ ಆಡಳಿತ ಮಂಡಳಿಯು ಹಾಡಿಯ ಸಮೀಪದಲ್ಲಿನ ಖಾಸಗಿ ತೋಟದಲ್ಲಿರುವ ಕೊಳವೆಬಾವಿಯ ಮೂಲಕ ಹಾಡಿಯ ನಿವಾಸಿಗಳಿಗೆ ನೀರು ಪೂರೈಸುವ ಪ್ರಯತ್ನವನ್ನು ಮಾಡುತ್ತಿದೆ. ಆದರೆ, ಹಾಡಿಯ ನಿವಾಸಿಗಳು ದೂರದಲ್ಲಿರುವ ಖಾಸಗಿ ಕಾಫಿ ತೋಟದಲ್ಲಿರುವ ಕೊಳವೆ ಬಾವಿಯಿಂದ ನೀರು ಹೊತ್ತು ತರಬೇಕಾಗಿದ್ದು, ಟ್ಯಾಂಕರ್ ಮೂಲಕ ಮನೆ ಮನೆಗೆ ನೀರನ್ನು ಒದಗಿಸಲು ಒತ್ತಾಯಿಸಿದ್ದಾರೆ.

ಹಾಡಿಯ ಸಮೀಪದ ಖಾಸಗಿ ತೋಟದಲ್ಲಿ ಕೊಳವೆ ಬಾವಿಗಳಿದ್ದು, ಆ ಕೊಳವೆ ಬಾವಿಗಳಲ್ಲಿ ಸೂಕ್ತ ನೀರು ಲಭ್ಯವಾಗುತ್ತಿದೆ. ಆದರೆ, ಸರ್ಕಾರ ಕೊರೆಸಿದ ಕೊಳವೆ ಬಾವಿಗಳಲ್ಲಿ ಏಕೆ ನೀರು ಲಭ್ಯವಾಗುತ್ತಿಲ್ಲ ಎಂದು ಹಾಡಿಯ ಮುಖಂಡರೊಬ್ಬರು ಪ್ರಶ್ನಿಸುತ್ತಾರೆ.

ಮನೆಗಳೂ ಕುಸಿಯುವ ಹಂತದಲ್ಲಿ...
ಚಿಕ್ಕರೇಷ್ಮೆ ಹಾಡಿಯ ನಿವಾಸಿಗಳು ವಾಸಿಸುತ್ತಿರುವ ಮನೆಗಳು ಹಲವಾರು ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಮಣ್ಣಿನ ಗೋಡೆಯಾಗಿದೆ. ಮೇಲ್ಛಾವಣಿಯು ಕೂಡ ಬಿದಿರಿನ ಕೋಲುಗಳನ್ನಿಟ್ಟು ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಕಲಾಗಿದೆ. ರಭಸವಾದ ಗಾಳಿ, ಮಳೆ ಬಂದಲ್ಲಿ ಮನೆಗಳು ಕುಸಿದು ಬೀಳುವ ಹಂತದಲ್ಲಿವೆ. ಹಾಡಿಯಲ್ಲಿ ಬಹುತೇಕ ಮನೆಗಳು ಕೂಡ ಇದೇ ರೀತಿಯಲ್ಲಿದ್ದು, ಗಿರಿಜನರ ಬದುಕು ಶೋಚನೀಯವಾಗಿದೆ ಎಂದು ಸ್ಥಳೀಯರು ನೋವು ತೋಡಿಕೊಳ್ಳುತ್ತಾರೆ. 

*
ಹಾಡಿಯ ನಿವಾಸಿಗಳು ನೀರಿಗಾಗಿ ಹರಸಾಹಸಪಡಬೇಕಾಗಿದೆ. ಕುಡಿಯುವ ನೀರಿಗಾಗಿ ದೂರದ ಖಾಸಗಿ ತೋಟಗಳಿಗೆ ತೆರಳಬೇಕು. ಕೊಳವೆಬಾವಿಗಳು ಪೂರ್ಣ ಬತ್ತಿದ್ದು ನಿರ್ವಹಣೆಯನ್ನೂ ಮಾಡುತ್ತಿಲ್ಲ.
-ಯರವರ ಬೋಜ, ಹಾಡಿ ನಿವಾಸಿ

*

ಹಾಡಿಯಲ್ಲಿ ಹಲವು ಕೊಳವೆಬಾವಿ ಕೊರೆಸಲಾಗಿದ್ದು ನೀರು ಲಭ್ಯವಾಗಿಲ್ಲ. ಸ್ಥಳೀಯ ಖಾಸಗಿ ತೋಟದಲ್ಲಿರುವ ಕೊಳವೆ ಬಾವಿಯಿಂದ ಹಾಡಿಯ ನಿವಾಸಿಗಳಿಗೆ ನೀರು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
-ಗೀತಾ, ಅಧ್ಯಕ್ಷೆ, ಚೆನ್ನಯ್ಯನಕೋಟೆ ಗ್ರಾ.ಪಂ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !