ಸೋಮವಾರ, ಏಪ್ರಿಲ್ 19, 2021
32 °C
ಮಡಿಕೇರಿ– ಮಂಗಳೂರು ರಸ್ತೆ ಸಂಪರ್ಕ ಕಡಿತದ ಭೀತಿ, ಸ್ಥಳಕ್ಕೆ ಶಾಸಕರ ಭೇಟಿ, ಪರಿಶೀಲನೆ

ಹೆದ್ದಾರಿ: ಸುರಕ್ಷತಾ ಕ್ರಮಕ್ಕೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರವೂ ಆರಿದ್ರಾ ಮಳೆಯ ಆರ್ಭಟ ಮುಂದುವರೆದಿದೆ. ಜಿಲ್ಲೆಯ ಎಲ್ಲೆಡೆ ಧಾರಾಕಾರ ಮಳೆಯಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ–275ರಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಹೆದ್ದಾರಿ ಕುಸಿಯುವ ಭೀತಿ ಎದುರಾಗಿದೆ. ಸ್ಥಳಕ್ಕೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್‌, ಕೆ.ಜಿ. ಬೋಪಯ್ಯ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌ ಭೇಟಿ ನೀಡಿ ಪರಿಶೀಲಿಸಿದರು.

ಮಡಿಕೇರಿ-ಮಂಗಳೂರು ಹೆದ್ದಾರಿ ಮಡಿಕೇರಿಯಿಂದ 5 ಕಿಲೋ ಮೀಟರ್ ದೂರದ ಕಾಟಕೇರಿ ಜಂಕ್ಷನ್ ಬಳಿ ಹೆದ್ದಾರಿ ಕುಸಿಯುತ್ತಿದೆ. ಶುಕ್ರವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸದ್ಯ ಬ್ಯಾರಿಗೇಡ್‌ ಹಾಕಿ ಆ ಬದಿಯಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಮಾತನಾಡಿ, ‘ಅವೈಜ್ಞಾನಿಕ ಕಾಮಗಾರಿಯಿಂದ ಹೆದ್ದಾರಿ ಬಿರುಕು ಬಿಡುತ್ತಿದೆ. ತಡೆಗೋಡೆ ಗುಣಮಟ್ಟ ಕಾಯ್ದುಕೊಳ್ಳಲು ಅಗತ್ಯ ತಯಾರಿ ಮಾಡಿಕೊಳ್ಳಬೇಕು’ ಎಂದು ಸೂಚಿಸಿದರು.

ಯಾವುದೇ ಅನಾಹುತ ಆಗದಂತೆ ಎಂಜಿನಿಯರ್‌ಗಳು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಕೆ.ಜಿ. ಬೋಪಯ್ಯ ಸೂಚಿಸಿದರು.

ಒಂದು ವೇಳೆ ಹೆದ್ದಾರಿ ಕುಸಿದರೆ ಮಂಗಳೂರು ತಲುಪಲು ಸಮಸ್ಯೆ ಆಗಲಿದೆ. ಆಗ, ಮೈಸೂರು - ಕುಶಾಲನಗರ - ಸೋಮವಾರಪೇಟೆ – ಸಕಲೇಶಪುರ ಮಾರ್ಗವಾಗಿ ಮಂಗಳೂರಿಗೆ ಇಲ್ಲವೇ ಮೈಸೂರು - ಹುಣಸೂರು - ಗೋಣಿಕೊಪ್ಪಲು - ವಿರಾಜಪೇಟೆ - ಕೇರಳ - ಸುಳ್ಯ ಮಾರ್ಗವಾಗಿ ಮಂಗಳೂರಿಗೆ ಅಥವಾ ಬೆಂಗಳೂರು- ಹಾಸನ – ಶಿರಾಡಿ ಮೂಲಕ ಮಂಗಳೂರಿಗೆ ತೆರಳಬೇಕು.

ಕಳೆದ ವರ್ಷ ಈ ಮಾರ್ಗದಲ್ಲಿ ಕುಸಿತ ಉಂಟಾಗಿ ಇದೇ ಮಾರ್ಗವನ್ನು ವಾಹನ ಸವಾರರು ಮೂರು ತಿಂಗಳು ಬಳಸಿದ್ದರು. ಬಳಿಕ ತಾತ್ಕಾಲಿಕವಾಗಿ ಕುಸಿದ ಸ್ಥಳದಲ್ಲಿ ಸ್ಯಾಂಡ್‌ ಬ್ಯಾಗ್‌ ಇಟ್ಟು ಹೆದ್ದಾರಿ ದುರಸ್ತಿ ಮಾಡಲಾಗಿತ್ತು. ಈಗ ಅಲ್ಲಲ್ಲಿ ಕುಸಿಯುವ ಆತಂಕವಿದೆ.

ತಲಕಾವೇರಿಯಲ್ಲಿ ಉತ್ತಮ ಮಳೆ:
ಪಶ್ಚಿಮಘಟ್ಟಗಳ ಸಾಲಿನಲ್ಲಿ ಮಳೆ ಮುಂದುವರಿದಿದೆ. ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಭಾಗಮಂಡಲದ ಕಾವೇರಿ, ಕನ್ನಿಕೆ, ಸುಜ್ಯೋತಿ ನದಿಗಳು ಮೈದುಂಬಿಕೊಳ್ಳುತ್ತಿವೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನಮಟ್ಟ ಏರಿಕೆಯಾಗಿದೆ. ಕಾವೇರಿ ನದಿಯು ಮೈದುಂಬಿಕೊಳ್ಳುತ್ತಿದೆ. ಇದೇ ರೀತಿ ಮಳೆ ಸುರಿದರೆ ಇನ್ನೆರಡು ದಿನದಲ್ಲಿ ಸಂಗಮ ಜಲಾವೃತವಾಗಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕುಸಿಯುವ ಆತಂಕ:
ನಗರದ ಹಳೇ ಬಸ್‌ ನಿಲ್ದಾಣದ ಜಾಗದಲ್ಲಿರುವ ಗುಡ್ಡದಲ್ಲಿ ಮಣ್ಣು ಕುಸಿಯಲು ಆರಂಭಿಸಿದೆ. ಕಳೆದ ವರ್ಷ ಭಾರೀ ಮಳೆಗೆ ಖಾಸಗಿ ಬಸ್‌ ನಿಲ್ದಾಣ ಹಿಂದಿನ ಗುಡ್ಡ ಕುಸಿದಿತ್ತು. ಈಗ ಆ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆದರೆ, ಶುಕ್ರವಾರ ಬೆಳಿಗ್ಗೆ ಮಣ್ಣು ತೆರವು ಮಾಡಿದ ಸ್ಥಳದಲ್ಲಿ ಮಣ್ಣು ಕುಸಿಯುವ ದೃಶ್ಯ ಸಾರ್ವಜನಿಕರ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಅಪಾಯದ ಮುನ್ಸೂಚನೆ ಎದುರಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು