ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ದಸರಾ ಲೆಕ್ಕಪತ್ರ ಮಂಡನೆ ಸಭೆಯಲ್ಲಿ ಕೋಲಾಹಲ

Published 24 ಆಗಸ್ಟ್ 2024, 2:22 IST
Last Updated 24 ಆಗಸ್ಟ್ 2024, 2:22 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಕಾವೇರಿ ಕಲಾಕ್ಷೇತ್ರದಲ್ಲಿ ಶುಕ್ರವಾರ ನಡೆದ ಮಡಿಕೇರಿ ದಸರಾ ಸಮಿತಿಯ 2023–24ನೇ ಲೆಕ್ಕಪತ್ರ ಮಂಡನೆ ಮತ್ತು ವಾರ್ಷಿಕ ಸಭೆಯಲ್ಲಿ ಕೋಲಾಹಲವೇ ಉಂಟಾಗಿ, ಸಭೆಯನ್ನು ಮುಂದೂಡಲಾಯಿತು.

ಸಭೆಯಲ್ಲಿ ಮಂಡನೆಯಾದ ಲೆಕ್ಕಪತ್ರಕ್ಕೆ ಬಹುತೇಕ ಸದಸ್ಯರು ಆಕ್ಷೇಪಗಳ ಸುರಿಮಳೆಗರೆದರು. ಮೊನಚು ಪ್ರಶ್ನೆಗಳನ್ನು ಕೇಳುವ ಮೂಲಕ ತೀವ್ರ ವಿರೋಧ ಒಡ್ಡಿದರು.

ಆಗಿರುವ ಖರ್ಚು, ವೆಚ್ಚಗಳ ಬಗ್ಗೆಯೂ ಅನೇಕ ಮಂದಿ ಅಸಮಾಧಾನ ವ್ಯಕ್ತಪಡಿಸಿದರು. ಬಹಳಷ್ಟು ಅಂಶಗಳು ಪಾರದರ್ಶಕವಾಗಿಲ್ಲ. ಕೆಲವೊಂದು ಲೆಕ್ಕಪತ್ರದಲ್ಲಿ ಸಹಿ ಹಾಗೂ ಮೊಹರೂ ಸಹ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಲೆಕ್ಕಪತ್ರಕ್ಕೆ ಅನುಮೋದನೆ ನೀಡಲು ಸಾಧ್ಯವೇ ಇಲ್ಲ ಎಂದು ಬಹುತೇಕ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿ.ಆರ್. ಸವಿತಾ ರೈ ಅವರು ಹಲವು ಖರ್ಚು, ವೆಚ್ಚಗಳ ಬಗ್ಗೆ ತಮ್ಮ ತೀವ್ರ ಆಕ್ಷೇಪ ದಾಖಲಿಸಿದರು. ದುಬಾರಿ ವೆಚ್ಚದ ಕುರಿತು ಸಮಿತಿಯ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಉಪಸಮಿತಿ ಅಧ್ಯಕ್ಷರ ಸಭೆ ನಡೆಸಿ ವ್ಯವಸ್ಥಿತವಾಗಿ ಲೆಕ್ಕಪತ್ರವನ್ನು ತಯಾರು ಮಾಡಬೇಕಾಗಿತ್ತು ಎಂಬ ಸಲಹೆಯನ್ನೂ ನೀಡಿದರು. ಲೆಕ್ಕಪರಿಶೋಧಕರಿಂದ ಲೆಕ್ಕಪರಿಶೋಧನೆ ನಡೆಸಿ, ಮತ್ತೊಮ್ಮೆ ಲೆಕ್ಕಪತ್ರ ಮಂಡಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಸಲಹೆಗಾರ ಜಿ. ಚಿದ್ವಿಲಾಸ್ ಮಾತನಾಡಿ, ‘ಡಿಜಿಟಲ್ ಪಾವತಿ ಮೂಲಕ ಸಂದಾಯವಾದ ಹಣ ಯಾರಿಂದ ಬಂದಿದೆ ಎಂಬುದರ ಕುರಿತು ಲೆಕ್ಕಪತ್ರದ‌ಲ್ಲಿ ಉಲ್ಲೇಖಿಸಬೇಕು’ ಎಂದು ಸಲಹೆ ನೀಡಿದರು.

ಆನಂದ್ ಕೊಡಗು ಮಾತನಾಡಿ, ‘ಮರಳು ಕಲಾವಿದೆಗೆ ₹ 40 ಸಾವಿರ ಪಾವತಿಯಾಗಿದೆ. ಅದಕ್ಕೆ ಅಳವಡಿಸಿದ ದೀಪಾಲಂಕಾರಕ್ಕೆ ₹ 1 ಲಕ್ಷ ಖರ್ಚಾಗಿರುವುದು ಹೇಗೆ’ ಎಂದು ಪ್ರಶ್ನಿಸಿದರು. ಇಂತಹ ಹಲವು ವಾಗ್ಬಾಣಗಳು ಹಲವು ಸದಸ್ಯರಿಂದ ತೂರಿ ಬಂದವು.

ತೆನ್ನೀರಾ ಮೈನಾ ಆಯಾವ್ಯಯ ಪರಿ‍‍‍ಪೂರ್ಣವಾಗಿಲ್ಲ ಎಂದರೆ, ಹಿರಿಯ ಸದಸ್ಯ ಬೈ.ಶ್ರಿ. ಪ್ರಕಾಶ್ ಬೈಲಾ ತಿದ್ದುಪಡಿ ಕುರಿತು ಆಗ್ರಹಿಸಿದರು.

ಹಿರಿಯ ಪದಾಧಿಕಾರಿ ಟಿ.ಪಿ. ರಮೇಶ್ ಮಾತನಾಡಿ, ‘35 ವರ್ಷದ ಹಿಂದಿನ ಬೈಲಾ ತಿದ್ದುಪಡಿಯಾಗದೇ ಇರುವುದು ಗೊಂದಲಕ್ಕೆ ಕಾರಣ. ಹೊಸ ಬೈಲಾ ರಚನೆಯು ಅಂತಿಮ ಹಂತದಲ್ಲಿದ್ದು, 15 ದಿನಗಳಲ್ಲಿ ಹೊಸ ಬೈಲಾವನ್ನು ಸಾರ್ವಜನಿಕರ ಮುಂದಿರಿಸಲಾಗುವುದು’ ಎಂದರು.

ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ‘ಲೆಕ್ಕಪತ್ರವನ್ನು ವ್ಯವಸ್ಥಿತವಾಗಿ ಮುಂದಿನ ಸಭೆಯಲ್ಲಿ ಮಂಡಿಸಲಾಗುವುದು’ ಎಂದರು.

ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ‘ಸಭೆಯ ಸಲಹೆಯಂತೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಮುನ್ನಡೆಯಲಾಗುವುದು’ ಎಂದರು.

ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಕಾರ್ಯದರ್ಶಿ ಲೋಕೇಶ್, ನಗರಸಭೆ ಪೌರಾಯುಕ್ತ ವಿಜಯ್, ನಗರಸಭಾ ಸದಸ್ಯರಾದ ಮಹೇಶ್ ಜೈನಿ, ಎಸ್.ಸಿ. ಸತೀಶ್, ಸಬಿತಾ, ಶ್ವೇತಾ, ದಶಮಂಟಪ ಸಮಿತಿ ಅಧ್ಯಕ್ಷ ಜಿ.ಸಿ. ಜಗದೀಶ್, ಮಾಜಿ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಸತೀಶ್ ಪೈ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT