ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಎಂ ಕಿಸಾನ್ ಯೋಜನೆ | ಇ–ಕೆವೈಸಿ ಮಾಡಿಸದ ಕೊಡಗಿನ 11 ಸಾವಿರ ರೈತರು

Published : 26 ಜೂನ್ 2023, 23:30 IST
Last Updated : 26 ಜೂನ್ 2023, 23:30 IST
ಫಾಲೋ ಮಾಡಿ
Comments

ಕೆ.ಎಸ್.ಗಿರೀಶ

ಮಡಿಕೇರಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ ಇನ್ನೂ 11 ಸಾವಿರ ರೈತರು ‘ಇ–ಕೆವೈಸಿ’ ಮಾಡಿಸಿಲ್ಲ. ಇವರು ಜೂನ್ 30ರ ಒಳಗೆ ‘ಇ–ಕೆವೈಸಿ’ ಮಾಡದೇ ಹೋದರೆ, ಇವರಿಗೆ ಸರ್ಕಾರದಿಂದ ನೀಡಲಾಗುವ ಆರ್ಥಿಕ ನೆರವು ಮಂಜೂರಾಗುವುದಿಲ್ಲ.

ಕೊಡಗು ಜಿಲ್ಲೆಯಲ್ಲಿ ಒಟ್ಟು 49,582 ರೈತರು ‘ಪಿಎಂ-ಕಿಸಾನ್’ ಯೋಜನೆಗೆ ನೋಂದಣಿಯಾಗಿದ್ದು, ಇವರಲ್ಲಿ 48 ಸಾವಿರ ರೈತರಿಗೆ ಪ್ರತಿ ವರ್ಷ ₹ 6 ಸಾವಿರ ಹಣವನ್ನು ಒಟ್ಟು 3 ಸಮಾನ ಕಂತುಗಳಲ್ಲಿ ನೀಡಲಾಗುತ್ತಿದೆ. ಈ ಯೋಜನೆಯಡಿ ಇನ್ನು ಮುಂದೆ ‘ಇ–ಕೆವೈಸಿ’ ಮಾಡಿಕೊಂಡವರಿಗೆ ಮಾತ್ರ ನೀಡಲು ಸರ್ಕಾರ ನಿರ್ಧರಿಸಿದೆ. ಸದ್ಯ, ಜಿಲ್ಲೆಯಲ್ಲಿ 37 ಸಾವಿರ ರೈತರು ‘ಇ–ಕೆವೈಸಿ’ ಮಾಡಿಕೊಂಡಿದ್ದಾರೆ.

ಈ ಯೋಜನೆಯಡಿ ಅನರ್ಹರೂ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಯೋಜನೆಯ ನೆರವು ಅರ್ಹ ಫಲಾನುಭವಿಗಳಿಗೆ ದೊರಕುತ್ತಿರುವುದನ್ನು ಖಾತರಿಪಡಿಸಿಕೊಳ್ಳಲು ‘ಇ-ಕೆವೈಸಿ’ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಸರ್ಕಾರ ಜೂನ್ 30 ಕೊನೆಯ ದಿನವನ್ನು ನಿಗದಿಪಡಿಸಿದೆ.

‘ಇ–ಕೆವೈಸಿ’ ಮಾಡುವುದು ಹೇಗೆ?

ರೈತರು http://pmkisan.gov.in ಪೋರ್ಟಲ್‍ನಲ್ಲಿ ‘ಫಾರ್ಮರ್ಸ್ ಕಾರ್ನರ್‌’ನಲ್ಲಿ ‘ಇ-ಕೆವೈಸಿ’ಯನ್ನು ಅತ್ಯಂತ ಸುಲಭವಾಗಿ ಮಾಡಬಹುದು. ಈಗಾಗಲೇ ‘ಪಿಎಂ–ಕಿಸಾನ್’ ಯೋಜನೆಯಡಿ ಫಲಾನುಭವಿಗಳಾಗಿರುವ ಪ್ರತಿಯೊಬ್ಬ ರೈತರೂ ಇಲ್ಲಿ ಆಧಾರ್ ಸಂಖ್ಯೆಯನ್ನು ಹಾಗೂ ಆಧಾರ್ ಸಂಖ್ಯೆಯೊಂದಿಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಯನ್ನು ದಾಖಲಿಸಬೇಕು.

ನಂತರ, ಮೊಬೈಲ್‍ಗೆ ‘ಒಟಿಪಿ’ ಬರುತ್ತದೆ. ಹೀಗೆ ಸ್ವೀಕರಿಸಿದ ‘ಒಟಿಪಿ’ಯನ್ನು ಪೋರ್ಟಲ್‍ನಲ್ಲಿ ದಾಖಲಿಸಿ ‘ಸಬ್‍ಮಿಟ್ ಫಾರ್ ಆಥ್’ ಎಂಬ ಗುಂಡಿಯನ್ನು ಒತ್ತಬೇಕು. ಆಗ ತಂತ್ರಾಂಶ ಆಧಾರಿತ ಪರಿಶೀಲನೆ ನಡೆದು ‘ಇ–ಕೆವೈಸಿ ಈಸ್ ಸೆಕ್ಸಸ್‌ಫುಲ್‌ ಸಬ್‌ಮಿಟಡ್‌’ ಎಂಬ ವಾಕ್ಯವು ಬರುತ್ತದೆ. ಮೊಬೈಲ್ ‘ಒಟಿಪಿ’ ಆಧಾರಿತವಾಗಿ ಫಲಾನುಭವಿಯು ಖುದ್ದಾಗಿ ‘ಇ-ಕೆವೈಸಿ’ಯನ್ನು ತಮ್ಮ ಮೊಬೈಲ್‌ನಲ್ಲೇ ಮಾಡಬಹುದು. ಒಂದು ವೇಳೆ ಈಗಾಗಲೇ ‘ಇ-ಕೆವೈಸಿ’ ಆಗಿದ್ದರೆ, ‘ಇ–ಕೆವೈಸಿ ಆಲ್‌ರೆಡಿ ಡನ್’ ಎಂಬ ಮಾಹಿತಿ ಬರುತ್ತದೆ.

ಯಾವ ಫಲಾನುಭವಿಯ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊಂದಿಗೆ ಜೋಡಣೆಯಾಗಿರುವುದಿಲ್ಲವೋ ಅಥವಾ ಯಾರ ಮೊಬೈಲ್ ಸಂಖ್ಯೆಗೆ ‘ಇ-ಕೆವೈಸಿ’ಗಾಗಿ ಕಳುಹಿಸಿದ ‘ಒಟಿಪಿ’ಯು ಸ್ವೀಕೃತವಾಗುದಿಲ್ಲವೋ ಅವರು ನಾಗರಿಕ ಸೇವಾ ಕೇಂದ್ರಗಳಿಗೆ (ಸಿಎಸ್‍ಸಿ) ತೆರಳಿ, ಅಲ್ಲಿ ಬಯೋಮೆಟ್ರಿಕ್ ಆಧಾರಿತವಾಗಿ ‘ಇ-ಕೆವೈಸಿ’ ಮಾಡಬಹುದು. ಅಲ್ಲಿ ಕೈಬೆರಳಿನ ಗುರುತು ಆಧಾರದ ಮೇಲೆ ‘ಇ-ಕೆವೈಸಿ’ ಮಾಡಲಾಗುತ್ತದೆ.

‘ಈ ಯೋಜನೆಯ ಪ್ರತಿ ಫಲಾನುಭವಿ ರೈತರು, ಕೇಂದ್ರ ಸರ್ಕಾರವು ಮುಂದಿನ ಕಂತಿನಲ್ಲಿ ನೀಡುವ ಆರ್ಥಿಕ ನೆರವು ಪಡೆಯಲು ಜೂನ್ 30 ರೊಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯ. ಮಾಹಿತಿಗೆ, ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ನಾಗರಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ.ಷೇಕ್ ಅವರು ತಿಳಿಸಿದ್ದಾರೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ

ನೋಂದಣಿಯಾದ ರೈತರು – 49,582 

ಆರ್ಥಿಕ ನೆರವು ಪಡೆಯುತ್ತಿರುವವರು – 48,000

‘ಇ–ಕೆವೈಸಿ’ ಮಾಡಿಸಿರುವ ರೈತರು – 37,000

‘ಇ–ಕೆವೈಸಿ’ ಮಾಡಿಸಬೇಕಿರುವವರು – 11,000

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT