ಮಡಿಕೇರಿ: ಬ್ಯಾಂಕಾಕ್‌ನಿಂದ ದುಬೈಗೆ ಕೊಡಗಿನ ಮೂಲಕ ದುಬಾರಿ ಬೆಲೆಯ ಮಾದಕವಸ್ತು ಹೈಡ್ರೋ ಗಾಂಜಾವನ್ನು ಸಾಗಾಣಿಕೆ ಮಾಡುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಕೊಡಗು ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ. ಕೇರಳ ರಾಜ್ಯದವರೂ ಸೇರಿದಂತೆ ಒಟ್ಟು 7 ಮಂದಿ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರಿಂದ ₹3 ಕೋಟಿ ಬೆಲೆ ಬಾಳುವ 3.31 ಕೆ.ಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಮಾದಕವಸ್ತುವನ್ನು ಬ್ಯಾಂಕಾಕ್‌ನಿಂದ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕೊಡಗಿಗೆ ತರುತ್ತಿದ್ದರು. ನಂತರ, ದುಬೈಗೆ ವಿಮಾನದ ಮೂಲಕ ಸಾಗಾಣಿಕೆ ಮಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೃತಕ ಬೆಳಕನ್ನು ಬಳಸಿ, ಹವಾನಿಯಂತ್ರಿಕ ಕೊಠಡಿಯಲ್ಲಿ ಬೆಳೆಯಲಾಗುವ ಹೈಡ್ರೋ ಗಾಂಜಾ ಬ್ಯಾಂಕಾಕ್‌ನಲ್ಲಿ ಸುಲಭವಾಗಿ ಸಿಗುತ್ತಿದೆ. ಇದನ್ನು ಶ್ರೀಮಂತರು ಮಾತ್ರವೇ ದುಬಾರಿ ಬೆಲೆ ನೀಡಿ ಬಳಸುತ್ತಾರೆ. ಸದ್ಯ, ಆರೋಪಿಗಳು ಸ್ಥಳೀಯರಿಗೆ ಮಾರಾಟ ಮಾಡುವ ವಿಷಯ ಗೊತ್ತಾಗಿಲ್ಲ. ಇವರೆಲ್ಲರೂ ಬ್ಯಾಂಕಾಕ್‌ನಿಂದ ತಂದ ಮಾದಕವಸ್ತುವನ್ನು ದುಬೈಗೆ ಸಾಗಾಣಿಕೆ ಮಾಡುವ ಸಲುವಾಗಿ ಕೊಡಗಿನ ಗೋಣಿಕೊಪ್ಪಲಿನ ಮನೆಯೊಂದರಲ್ಲಿ ಇಟ್ಟಿದ್ದರು. ಇಲ್ಲಿಂದ ಮಡಿಕೇರಿಗೆ ತರುವಾಗ 5 ಮಂದಿ ಆರೋಪಿಗಳನ್ನು ಬಂಧಿಸಲಾಯಿತು. ಮತ್ತೊಬ್ಬ ಆರೋಪಿಯನ್ನು ಬೆಂಗಳೂರಿನಲ್ಲಿ ಹಾಗೂ ಪರಾರಿಯಾಗಲು ಯತ್ನಿಸುತ್ತಿದ್ದ ಪ್ರಮುಖ ಆರೋಪಿ ಕೇರಳದ ಮೆಹರೂಫ್ ಎಂಬಾತನನ್ನು ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಅವರು ಹೇಳಿದರು.
ಬ್ಯಾಂಕಾಕ್‌ನಿಂದ ಬೆಂಗಳೂರು ವಿಮಾನ ನಿಲ್ದಾಣದ ಮೂಲಕವೇ ಆರೋಪಿಗಳು ಈ ಮಾದಕವಸ್ತುವನ್ನು ತರುತ್ತಿದ್ದ ವಿಷಯ ತನಿಖೆಯಲ್ಲಿ ದೃಢಪಟ್ಟಿದೆ. ವಿಮಾನ ನಿಲ್ದಾಣದಲ್ಲಿರುವ ಕೆಲವೊಂದು ತಾಂತ್ರಿಕ ದೋಷಗಳಿಂದ ಇವರು ಅಲ್ಲಿ ಸಿಕ್ಕಿ ಬೀಳುತ್ತಿರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು