ಗುರುವಾರ , ಜನವರಿ 23, 2020
22 °C
ತರಕಾರಿ ಕೃಷಿಯಲ್ಲೂ ಸೈ ಎನಿಸಿದ ರಹೀನಾ

ಲಾಭ ತಂದ ಕೋಳಿ ಸಾಕಣೆ

ಸಿ.ಎಸ್‌.ಸುರೇಶ್‌ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಲಾಭ ಗಳಿಸುತ್ತಿರುವುದಲ್ಲದೇ, ಆಸಕ್ತ ಯುವತಿಯರಿಗೆ ಮಾಹಿತಿ ನೀಡಿ ಆರ್ಥಿಕವಾಗಿ ಸದೃಢರಾಗಲು ಸಹಕರಿಸುತ್ತಿರುವ ಗ್ರಾಮೀಣ ಮಹಿಳೆ ರಹೀನಾ.

ಕೋಳಿ ಸಾಕಣೆ  ಮಾತ್ರವಲ್ಲ, ತರಕಾರಿ ಕೃಷಿಯಲ್ಲೂ ಇವರು ಸೈ ಎನಿಸಿಕೊಂಡಿದ್ದಾರೆ. ಇವರ ಕೃಷಿ ಆಸಕ್ತಿಯನ್ನು ಗುರುತಿಸಿ ಹಲವು ಸಂಘಟನೆಗಳು ಸಾಧಕ ರೈತ ಪುರಸ್ಕಾರ ನೀಡಿ ಗೌರವಿಸಿವೆ.

ಅತ್ತ ಹಳ್ಳಿಯೂ ಅಲ್ಲದ ಇತ್ತ ಪಟ್ಟಣವೂ ಅಲ್ಲದ ಊರಿನಲ್ಲಿ ಸ್ವಂತ ಮನೆಯೊಂದನ್ನು ನಿರ್ಮಿಸಿಕೊಂಡು ಇರುವ ಸ್ಥಳಾವಕಾಶದಲ್ಲಿ ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿರುವ ರಹೀನಾ ಅವರ ಕುಟುಂಬ ಗೆಲುವಿನ ನಗು ಬೀರಿದೆ.

ಗ್ರಾಮೀಣ ಪ್ರದೇಶ ಮಾತ್ರವಲ್ಲ, ಸುತ್ತಮುತ್ತಲ ಪಟ್ಟಣಗಳಿಂದಲೂ ಜನರು ಬಂದು ಇವರಿಂದ ಕೋಳಿ ಖರೀದಿಸುತ್ತಾರೆ. ವಿಶೇಷವಾಗಿ ನಾಟಿ ತಳಿಯ ಕೋಳಿಗಳಿಗೆ ಬೇಡಿಕೆ ಇದ್ದು ತಿಂಗಳಿಗೆ 100-150 ಕೋಳಿ ಮಾರಾಟ ಮಾಡುತ್ತಿದ್ದಾರೆ.

ಮೊಟ್ಟೆಗಳಿಗೂ ಕೂಡ ಬೇಡಿಕೆ ಇದೆ. ಮೊಟ್ಟೆ ಮಾರಾಟದಿಂದ ಹಾಗೂ ಕೋಳಿ ಮಾರಾಟದಿಂದ ತಿಂಗಳಿಗೆ ಆರು ಸಾವಿರಕ್ಕೂ ಅಧಿಕ ಆದಾಯ ಲಭಿಸುತ್ತಿದೆ. ಸ್ಥಳೀಯರಿಂದಲೇ ಪ್ರತಿದಿನಕ್ಕೆ 30 ಮೊಟ್ಟೆ ಬೇಡಿಕೆ ಇದೆ. ನಾಟಿ ತಳಿಯಿಂದ ಲಭಿಸುವ ಮೊಟ್ಟೆ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ. ಕೇರಳದಿಂದ ಬಿ.ವಿ 380 ತಳಿಯ ಕೋಳಿಗಳನ್ನು ತರಿಸಿದ್ದೇವೆ. ಇದು 18 ತಿಂಗಳು ಮೊಟ್ಟೆ ಇಡುತ್ತದೆ. ಒಂದು ಪೆಟ್ಟಿಗೆಯಲ್ಲಿ 48 ಕೋಳಿಗಳನ್ನು ಸಾಕುತ್ತಿದ್ದು ಪ್ರತಿದಿನ 48 ಮೊಟ್ಟೆಗಳು ಲಭಿಸುತ್ತಿದೆ ಎನ್ನುತ್ತಾರೆ ರಹೀನಾ.

ಈ ತಳಿಯ ಕೋಳಿಗಳ ಮೊಟ್ಟೆ ಅಸ್ತಮಾ ರೋಗಿಗಳಿಗೆ ಪರಿಣಾಮ ಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸುವ ಅವರು, ಕೋಳಿ ಸಾಕಾಣಿಕೆಗಾಗಿ ಹುಲ್ಲು, ಸೊಪ್ಪು, ತರಕಾರಿಗಳನ್ನು ಹೇರಳವಾಗಿ ಬಳಸುತ್ತಾರೆ. ಇದರಿಂದ ಫೀಡ್ ಕೊಂಡುಕೊಳ್ಳುವ ಪ್ರಮಾಣ ಕಡಿಮೆಯಾಗಿದೆ.

ತರಕಾರಿ ಕೃಷಿ ಹಾಗೂ ಕೋಳಿ ಸಾಕಾಣಿಕೆಯಿಂದ ವರ್ಷಕ್ಕೆ ಉತ್ತಮ ಆದಾಯವನ್ನು ಗಳಿಸುತ್ತಿದ್ದು ಖರ್ಚು ವೆಚ್ಚ ಕಳೆದು ಕುಟುಂಬದ ನೆಮ್ಮದಿಯ ಜೀವನವನ್ನು ಸಾಗಿಸಬಹುದಾಗಿದೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಅವರು.

ಕೋಳಿ ಸಾಕಾಣಿಕೆಯೊಂದಿಗೆ ಬಹುವಿಧದ ತರಕಾರಿ ಕೃಷಿಯನ್ನು ರಹೀನಾ ಮಾಡುತ್ತಿದ್ದಾರೆ. ನಾಟಿ ಕೋಳಿಗಳಿಗೆ ಹಬ್ಬ ಹರಿದಿನಗಳಲ್ಲಿ ಅಧಿಕ ಬೇಡಿಕೆಯಿದೆ. ಕೋಳಿ ಮೊಟ್ಟೆಗಳಿಗೂ ಅಧಿಕ ಬೇಡಿಕೆ ಇದೆ ಎನ್ನುತ್ತಾರೆ ಅವರು.

ರಹೀನಾ ತಮ್ಮ ಮನೆಯ ಬಳಿ 25 ಸೆಂಟ್ಸ್ ಜಾಗದಲ್ಲಿ ತರಕಾರಿ ಕೃಷಿ ಮಾಡಿದ್ದಾರೆ. ತರಕಾರಿ ಜೊತೆಗೆ ಹಲವು ಬಗೆಯ ಹಣ್ಣಿನ ಗಿಡಗಳೊಂದಿಗೆ ಮನಸೆಳೆಯುವ ಉದ್ಯಾನವೂ ಇದೆ. ನೇರವಾಗಿ ನೆಲದಲ್ಲಿ ಕೃಷಿ ಮಾಡುವುದಕ್ಕಿಂತ ಪ್ಲಾಸ್ಟಿಕ್ ಚೀಲಗಳಲ್ಲಿ ಅಥವಾ ಕತ್ತರಿಸಿದ ಡ್ರಂ ಬಳಸಿ ಕೃಷಿ ಮಾಡುವುದು ಲಾಭದಾಯಕವಾಗಿದೆ. ಮಿತವ್ಯಯ ಎನ್ನುವುದನ್ನುನಿರೂಪಿಸುವ ಇವರು ಕೃಷಿಯಲ್ಲಿ ಖುಷಿಪಡುತ್ತಾರೆ. ಸಂಪರ್ಕಕ್ಕೆ ರಹೀನಾ ಅವರ ಮೊಬೈಲ್: 91108 99129.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು