ಶನಿವಾರ, ಸೆಪ್ಟೆಂಬರ್ 26, 2020
27 °C
ಬ್ರಹ್ಮಗಿರಿ: ಮಳೆಕಾಡಿನ ಬೆಟ್ಟದಲ್ಲಿ ದುರಂತ

ತಲಕಾವೇರಿ: ಕಾರ್ಯಾಚರಣೆಗೆ ಬಂಡೆ, ಕೆಸರು ಮಣ್ಣು ತೊಡಕು, ನಾಲ್ವರಿಗೆ ಹುಡುಕಾಟ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ತಲಕಾವೇರಿ (ಮಡಿಕೇರಿ): ಬ್ರಹ್ಮಗಿರಿಯಲ್ಲಿ ಬೆಟ್ಟ ಕುಸಿತದಿಂದ ಕಣ್ಮರೆಯಾದವರ ಶೋಧ ಕಾರ್ಯಕ್ಕೆ ಉರುಳಿದ ಬಂಡೆಗಳು ಹಾಗೂ ಕೆಸರು ಮಣ್ಣು ತೊಡಕಾಗಿದೆ. 

ಬೆಟ್ಟ ಕುಸಿತದ ಸ್ಥಳದಲ್ಲಿ ಎನ್‌ಡಿ ಆರ್‌ಎಫ್‌, ಎಸ್‌ಡಿಆರ್‌ಎಫ್‌ ಹಾಗೂ ಪೊಲೀಸರು ಪ್ರತ್ಯೇಕವಾಗಿ ಭಾನುವಾರ ದಿನವಿಡೀ ಶೋಧ ನಡೆಸಿದರೂ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಸೇರಿದಂತೆ ನಾಲ್ವರ ಸುಳಿವು ಸಿಗಲಿಲ್ಲ.

ಈ ಭಾಗದಲ್ಲಿ ಮತ್ತೆ ಮಳೆ ಸುರಿಯಲು ಆರಂಭಿಸಿದ್ದು, ಶೋಧಕ್ಕೆ ಪದೇ ಪದೇ ಅಡ್ಡಿಯಾಗುತ್ತಿದೆ. ನಾಲ್ಕು ದಿನಗಳ ಬಳಿಕ ತಂಡವು ಅವರ ಮನೆಯಿದ್ದ ಸ್ಥಳಕ್ಕೆ ತಲುಪಲು ಯಶಸ್ವಿಯಾಗಿದೆ. ಜೆಸಿಬಿ ಯಂತ್ರಗಳಿಂದ ಮಣ್ಣು ತೆರವು ನಡೆಯುತ್ತಿದೆ.

ಆನಂದ ತೀರ್ಥ ಅವರ ಮೃತದೇಹ ಸಿಕ್ಕ ಸ್ಥಳದ ಆಸುಪಾಸಿನಲ್ಲಿ ಹುಡುಕಾಟ ಚುರುಕುಗೊಳಿಸಲಾಗಿದೆ. ಆ ಸ್ಥಳದಲ್ಲಿ ಬಟ್ಟೆ, ಪಾತ್ರೆ, ದೇವರ ಫೋಟೊಗಳು, ನಾಣ್ಯಗಳು ಮಾತ್ರ ಸಿಕ್ಕಿವೆ. ರಕ್ಷಣಾ ಸಿಬ್ಬಂದಿ ಜೊತೆಗೆ ಮಣ್ಣು ತೆರವಿಗೆ ಕೆಲಸಗಾರರನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅಗತ್ಯಬಿದ್ದರೆ ಸೇನಾ ಪಡೆಯ ನೆರವು ಪಡೆಯಲೂ ಯೋಚಿಸಲಾಗಿದೆ.

ಹೊಸ ಜಲಪಾತಗಳು ಸೃಷ್ಟಿ: ಬೆಟ್ಟ ಕುಸಿದಿರುವ ಸ್ಥಳ ಕೆಸರುಮಯವಾಗಿದೆ. ರಕ್ಷಣಾ ತಂಡದವರು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ. ಮೂಲ ತಲಕಾವೇರಿಯ ನೀರು ಈಗ ಕವಲೊಡೆದು ಕುಸಿದ ಸ್ಥಳದಲ್ಲಿ ಧುಮ್ಮಿಕ್ಕುತ್ತಿದೆ. 2–3 ಕಡೆ ಹೊಸ ಜಲಪಾತಗಳು ಸೃಷ್ಟಿಯಾಗಿವೆ. ಸದಾ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದ ಜೀವನದಿ ಉಗಮ ಸ್ಥಳದಲ್ಲಿ ಸಂಭವಿಸಿರುವ ಬೆಟ್ಟ ಕುಸಿತದಿಂದ ಪಶ್ಚಿಮಘಟ್ಟದ ಮಳೆಕಾಡಿನ ಬೆಟ್ಟಕ್ಕೇ ಗಾಯವಾದಂತೆ ಕಾಣಿಸುತ್ತಿದೆ. ಭಾಗಮಂಡಲದಿಂದ ತಲಕಾವೇರಿಯವರೆಗೆ 15 ಕಡೆ ಭೂಕುಸಿತವಾಗಿದೆ.

‘ಬ್ರಹ್ಮಗಿರಿಯಲ್ಲಿ ಸುರಿಯುವ ಮಳೆಯೇ ಪ್ರತಿ ವರ್ಷ ಕಾವೇರಿ ನದಿಯ ಒಡಲು ತುಂಬಿಸುವುದು. ಇದಕ್ಕಿಂತಲೂ ಹೆಚ್ಚು ಮಳೆಯಾಗುತ್ತಿತ್ತು. ಮಳೆಯ ಅವಧಿ ದಿನಗಳೂ ದೀರ್ಘವಾಗಿದ್ದವು. ಆದರೂ, ಯಾವುದೇ ದುರಂತ ನಡೆಯುತ್ತಿರಲಿಲ್ಲ’ ಎಂದು ಭಾಗಮಂಡಲದ ನಿವಾಸಿ ಸುನಿಲ್‌ ಹೇಳಿದರು. 

ಅರ್ಚಕರು ಭಾಗಮಂಡಲದಲ್ಲಿ ಕಾಫಿ ತೋಟ ಹೊಂದಿದ್ದರು. ಮನೆಯಲ್ಲಿ ಏಲಕ್ಕಿ, ಕಾಳುಮೆಣಸು ಸಹ ಸಂಗ್ರಹಿಸಿಟ್ಟಿದ್ದರು. ಮನೆಯಲ್ಲಿ ಚಿನ್ನಾಭರಣವೂ ಇತ್ತು. ಮನೆಯೊಂದಿಗೆ ಅವರ ಬದುಕು, ಆಭರಣ ಎಲ್ಲವನ್ನೂ ಬೆಟ್ಟದ ಮಣ್ಣು ಕೊಚ್ಚಿಕೊಂಡು ಹೋಗಿದೆ ಎಂದರು.

‘ನಾರಾಯಣ ಆಚಾರ್‌ ಅವರ ತಂದೆ, ತಾಯಿಯೂ ಈ ಸ್ಥಳದಲ್ಲೇ ನೆಲೆಸಿದ್ದರು. ಇಷ್ಟೊಂದು ಪ್ರಮಾಣದಲ್ಲಿ ಎಂದೂ ಬೆಟ್ಟ ಕುಸಿದಿರಲಿಲ್ಲ’ ಎಂದು ಸ್ಥಳೀಯರು ಕಣ್ಣೀರು ಹಾಕಿದರು.

ದುಬೈ ತಲುಪಿದ ಪುತ್ರಿಯರು: ‘ನಾರಾಯಣ ಆಚಾರ್‌ ಅವರ ಇಬ್ಬರು ಪುತ್ರಿಯರು ಆಸ್ಟ್ರೇಲಿಯದಲ್ಲಿ ನೆಲೆಸಿದ್ದಾರೆ. ಅವರು ದುಬೈ ತಲುಪಿದ್ದು, ಅಲ್ಲಿಂದ ಬೆಂಗಳೂರು ಮಾರ್ಗವಾಗಿ ಕೊಡಗಿಗೆ ಬರಲಿದ್ದಾರೆ’ ಎಂದು ಸ್ಥಳದಲ್ಲಿದ್ದ ಕುಟುಂಬಸ್ಥರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಅವರ ಇನ್ನೊಬ್ಬ ಪುತ್ರ ಕೆಲವು ವರ್ಷಗಳ ಹಿಂದೆ ನಿಧನರಾಗಿದ್ದಾರೆ.

ಭಾಗಮಂಡಲದಲ್ಲಿ ಪ್ರವಾಹ ಇಳಿದಿದ್ದು ವಾಹನ ಸಂಚಾರ ಆರಂಭವಾಗಿದೆ. ಶೋಧ ಕಾರ್ಯ ವೀಕ್ಷಿಸಲು, ಸ್ಥಳೀಯರು ತಂಡೋಪತಂಡವಾಗಿ ಸ್ಥಳಕ್ಕೆ ಬರುತ್ತಿದ್ದಾರೆ. ಕೆಲವರು ದುರಂತಸ್ಥಳ ನೋಡಿ ಮರುಗಿದರು.


ಮುಳುಗುವ ಹಂತಕ್ಕೆ ತಲುಪಿರುವ ಶ್ರೀರಂಗಪಟ್ಟಣದ ಐತಿಹಾಸಿಕ ವೆಲ್ಲೆಸ್ಲಿ ಸೇತುವೆಯ ಮೇಲೆ ಜನ ಸಂಚಾರ ನಿಯಂತ್ರಿಸಲು ಭಾನುವಾರ ಗೋಡೆಯನ್ನು ನಿರ್ಮಿಸಲಾಯಿತು.

ವೆಲ್ಲೆಸ್ಲಿ ಸೇತುವೆಗೆ ತಡೆಗೋಡೆ
ಶ್ರೀರಂಗಪಟ್ಟಣ:
ಕಾವೇರಿ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಇಲ್ಲಿನ ವೆಲ್ಲೆಸ್ಲಿ ಸೇತುವೆಯಲ್ಲಿ ವಾಹನ, ಜನ ಸಂಚಾರ ಬಂದ್‌ ಮಾಡಲಾಗಿದೆ. 218 ವರ್ಷಗಳಷ್ಟು ಹಳೆಯದಾದ ಈ ಸೇತುವೆಗೆ ಪುರಸಭೆ ವತಿಯಿಂದ ಅಡ್ಡಲಾಗಿ ತಡೆಗೋಡೆ ಕಟ್ಟಲಾಗಿದೆ.

ಪಟ್ಟಣದಿಂದ ಕಿರಂಗೂರು ಬನ್ನಿ ಮಂಟಪಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆಗೆ ಇತ್ತ ಅಂಬೇಡ್ಕರ್‌ ಭವನ ಮತ್ತು ಅತ್ತ ಸೇತುವೆಯ ಪೂರ್ವ ದ್ವಾರದ ಬಳಿ ಸಿಮೆಂಟ್‌ ಇಟ್ಟಿಗೆಗಳಿಂದ 5 ಅಡಿ ಎತ್ತರದ ತಡೆಗೋಡೆ ನಿರ್ಮಿಸಲಾಗಿದೆ. ‘ಸೇತುವೆ ಮತ್ತು ಜನರ ಸುರಕ್ಷತೆ ದೃಷ್ಟಿಯಿಂದ ಸೇತುವೆ ಮೇಲೆ ಸಂಚಾರ ಬಂದ್‌ ಮಾಡಲಾಗಿದೆ. ನದಿಯಲ್ಲಿ ಪ್ರವಾಹ ಇಳಿಯುವವರೆಗೆ ಸಂಚಾರಕ್ಕೆ ಅವಕಾಶ ಇರುವುದಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.


ಬ್ರಹ್ಮಗಿರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಭೇಟಿ ಬೆಟ್ಟ ಕುಸಿತ ಪ್ರದೇಶ ವೀಕ್ಷಿಸಿದರು

‘ವಿಶೇಷ ಪ್ಯಾಕೇಜ್’‌ಗೆ ಡಿಕೆಶಿ ಆಗ್ರಹ
‘ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ಅನಾಹುತಗಳು ಸಂಭವಿಸುತ್ತಿದ್ದು, ₹ 10 ಸಾವಿರ ಕೋಟಿಯ ವಿಶೇಷ ಪ್ಯಾಕೇಜ್ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದರು.

ತಲಕಾವೇರಿಯಲ್ಲಿ ಮಾತನಾಡಿದ ಅವರು, ‘ನಾಡಿಗೆ ನೀರು ಉಣಿಸುವ ಕೊಡಗು ಉಳಿಯಬೇಕು. ನದಿ ಮೂಲದಿಂದಲೇ ನಾವೆಲ್ಲ ಬದುಕುತ್ತಿದ್ದೇವೆ. ಪ್ರವಾಹದಿಂದ ರಾಜ್ಯದ ಬೇರೆ ಜಿಲ್ಲೆಗಳಲ್ಲೂ ಸಾಕಷ್ಟು ಸಮಸ್ಯೆಯಾಗಿದೆ. ಕೊಡಗಿನಿಂದಲೇ ಜನರ ನೋವು ಆಲಿಸುವ ಕೆಲಸ ಆರಂಭವಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು