ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೋಮವಾರಪೇಟೆ: ಮೂಲೆ ಸೇರಿದ ‘ನಗು ಮಗು’ ಆಂಬುಲೆನ್ಸ್

ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾರ್ವಜನಿಕರಿಂದ ದೂರವೇ ಉಳಿದ ಸೇವೆ
Published 23 ಮೇ 2024, 7:25 IST
Last Updated 23 ಮೇ 2024, 7:25 IST
ಅಕ್ಷರ ಗಾತ್ರ

ಸೋಮವಾರಪೇಟೆ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ‘ನಗು ಮಗು’ ಆಂಬುಲೆನ್ಸ್ ತನ್ನ ಕೆಲಸ ನಿಲ್ಲಿಸಿ ಮೂಲೆ ಸೇರಿದೆ.

ತಾಯಿ ಮಗುವನ್ನು ಸುರಕ್ಷಿತವಾಗಿ ಮನೆಗೆ ಸೇರಿಸಬೇಕೆಂಬ ಉದ್ದೇಶದಿಂದ ಪ್ರಾರಂಭವಾದ ಈ ಆಂಬುಲೆನ್ಸ್ ಜನರಿಂದ ದೂರವೇ ಉಳಿದಿದೆ.

ಎನ್ಎಎಸ್ ಯೋಜನೆಯಡಿಯಲ್ಲಿ ಗರ್ಭಿಣಿಯರು ಮತ್ತು ರೋಗಗ್ರಸ್ಥ ಮಕ್ಕಳಿಗೆ ಉಚಿತ ಸೇವೆ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿತ್ತು. ಕಳೆದ ಒಂದೂವರೆ ವರ್ಷದ ಹಿಂದೆ ರಿಪೇರಿ ಎಂದು ವಾಹನವನ್ನು ನಿಲ್ಲಿಸಲಾಗಿದ್ದು, ನಂತರ ರಿಪೇರಿಗೆ ಹಣವಿಲ್ಲ ಎಂದು ನಿಂತಲ್ಲಿಯೇ ನಿಲ್ಲುವ ಮೂಲಕ, ಯಾವ ಉದ್ದೇಶದಿಂದ ಪ್ರಾರಂಭವಾಯಿತೋ ಅದು ವಿಫಲವಾಗಿದೆ.

ತಾಲ್ಲೂಕಿನಲ್ಲಿ ಸಾಕಷ್ಟು ಕುಗ್ರಾಮಗಳು ಹಾಗೂ ಪರಿಶಿಷ್ಟ ಪಂಗಡಗಳ ಹಾಡಿಗಳಿದ್ದು, ಬಡಕುಟುಂಬಗಳಿಗೆ ಈ ಯೋಜನೆಯಿಂದ ಸಾಕಷ್ಟು ನೆರವಾಗುತ್ತಿತ್ತು.

‘ಸರ್ಕಾರದ ಯೋಜನೆ ವಿಫಲವಾಗಲು ಅಧಿಕಾರಿಗಳೇ ಕಾರಣಕರ್ತರಾಗಿದ್ದಾರೆ. ಯಾವುದಾದರೂ ಮೂಲದಿಂದ ಹಣವನ್ನು ವಾಹನ ರಿಪೇರಿಗಾಗಿ ಖರ್ಚು ಮಾಡಿ ಜನರ ಬಳಕೆಗೆ ನೀಡಬಹುದಾಗಿತ್ತು. ಅಧಿಕಾರಿಗಳ ಅಸಡ್ಡೆಯಿಂದ ಜನಸಾಮಾನ್ಯರು ಪರದಾಡುವಂತಾಗಿದೆ’ ಎಂದು ನಿವಾಸಿ ನಿರ್ಮಲಾ ದೂರಿದರು.

‘ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಗೆ ಹೆಚ್ಚಾಗಿ ಬಡ ಕುಟುಂಬಗಳೇ ಬರುವುದು. ಹೆರಿಗೆ ನಂತರ ಆಂಬುಲೆನ್ಸ್‌ನಲ್ಲಿ ಸುರಕ್ಷಿತವಾಗಿ ಮನೆಗೆ ಸೇರಬಹುದಾಗಿತ್ತು. ಆದರೆ, ಇಂದಿನ ಪರಿಸ್ಥಿತಿಯಿಂದಾಗಿ ನಡೆದುಕೊಂಡು ಅಥವಾ ಆಟೊ ಮಾಡಿ ಮನೆಗೆ ಹೋಗಬೇಕಿದೆ. ಇರುವ ಸವಲತ್ತುಗಳನ್ನು ಬಡವರಿಗೆ ಸಿಗುವಂತೆ ಅಧಿಕಾರಿಗಳು ಕೂಡಲೇ ಮಾಡಬೇಕು’ ಎಂದು ನೊಂದ ಬಾಣಂತಿ ಸುನಿತಾ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT