ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾರಾಂತ್ಯ ಕರ್ಫ್ಯೂ’ ಗಾಯದ ಮೇಲೆ ಬರೆ

ಮತ್ತೆ ನಷ್ಟ – ವ್ಯಾಪಾರಿಗಳು, ಹೋಂಸ್ಟೇ ಮಾಲೀಕರು, ಟ್ಯಾಕ್ಸಿ ಚಾಲಕರ ಅಳಲು
Last Updated 14 ಆಗಸ್ಟ್ 2021, 13:45 IST
ಅಕ್ಷರ ಗಾತ್ರ

ಮಡಿಕೇರಿ: ಕೋವಿಡ್‌ 3ನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರವು ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಮೊರೆ ಹೋಗಿದ್ದು ವ್ಯಾಪಾರಸ್ಥರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮತ್ತೆ ನಷ್ಟದ ಭೀತಿ ಎದುರಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ 2ನೇ ವಾರಕ್ಕೆ ಕಾಲಿಟ್ಟಿದ್ದು ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಶನಿವಾರ, ಜಿಲ್ಲೆಯ ಮಡಿಕೇರಿ ನಗರ ಹಾಗೂ ಪಟ್ಟಣಗಳು ಬಿಕೋ ಎನ್ನುತ್ತಿದ್ದವು. ಮಧ್ಯಾಹ್ನ 2ರ ತನಕ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದ್ದರೂ ಗ್ರಾಹಕರು ಮನೆಯಿಂದ ಹೊರಬರುವ ಪ್ರಯತ್ನ ಮಾಡಲಿಲ್ಲ. ಪಾರ್ಸೆಲ್‌ ಕೊಂಡೊಯ್ಯಲು ಗ್ರಾಹಕರ ನಿರೀಕ್ಷೆಯಲ್ಲಿದ್ದ ಹೋಟೆಲ್‌ ಮಾಲೀಕರೂ ನಿರಾಸೆ ಅನುಭವಿಸಿದರು.

ಕೊಡಗು ಅನ್‌ಲಾಕ್‌ ಆಗಿ, ಒಂದು ತಿಂಗಳೂ ಕಳೆದಿರಲಿಲ್ಲ. ಅಷ್ಟರಲ್ಲಿಯೇ ಧುತ್ತೆಂದು ವಾರಾಂತ್ಯ ಕರ್ಫ್ಯೂ ಬಂದಿದ್ದು, ಪ್ರವಾಸೋದ್ಯಮ ಅವಲಂಬಿತರು ನಷ್ಟಕ್ಕೆ ಒಳಗಾಗುವಂತೆ ಮಾಡಿದೆ. ಕೆಲವು ಹೋಟೆಲ್‌ಗಳು ಇನ್ನೂ ಬಾಗಿಲನ್ನೇ ತೆರೆದಿರಲಿಲ್ಲ. ಕೆಲವು ಹೋಟೆಲ್‌ ಮಾಲೀಕರು ಆಗಸ್ಟ್‌ 15ರ ನಂತರ ಕಾರ್ಯಾರಂಭಿಸುವ ಆಲೋಚನೆಯಲ್ಲಿದ್ದರು. ಮತ್ತೆ ಕಾಯುವ ಸ್ಥಿತಿಯಿದೆ.

ಜಿಲ್ಲೆಯಲ್ಲಿ ಅಂದಾಜು 3 ಸಾವಿರ ಹೋಂಸ್ಟೇಗಳಿವೆ. ಅನ್‌ಲಾಕ್‌ ಆದ ಆರಂಭದಲ್ಲಿ ಅಧಿಕೃತ ಹೋಂಸ್ಟೇಗಳಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಹೀಗಾಗಿ, ಕೆಲವು ಭಾಗದಲ್ಲಿ ಹೋಂಸ್ಟೇಗಳು ಇನ್ನೂ ಬಾಗಿಲನ್ನೇ ತೆರೆದಿರಲಿಲ್ಲ. ಅವರಿಗೆ ಶಾಶ್ವತವಾಗಿ ನಷ್ಟ ಅನುಭವಿಸುವ ಸ್ಥಿತಿಯಿದೆ. ವಾರಾಂತ್ಯದಲ್ಲಿ ಕೊಡಗಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದರು. ಪ್ರವಾಸಿ ತಾಣಗಳ ಬಳಿ, ಚುರುಮುರಿ, ಪಾನೀಪುರಿ, ಗೋಬಿ, ಮಕ್ಕಳ ಆಟಿಕೆ ವಸ್ತುಗಳ ವ್ಯಾಪಾರಸ್ಥರು ದಿನನಿತ್ಯ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅವರೂ, ಈಗ ಶನಿವಾರ ಹಾಗೂ ಭಾನುವಾರ ಮನೆಯಲ್ಲಿಯೇ ಇರುವ ಸ್ಥಿತಿಯಿದೆ.

ಕಾಡುತ್ತಿದೆ ಕೇರಳ: ವ್ಯಾಪಾರವೂ ಸೇರಿದಂತೆ ಮತ್ತಿತರ ಕಾರಣಕ್ಕೆ, ಹಲವರು ಕೊಡಗಿನಿಂದ ಕೇರಳಕ್ಕೆ ಹೋಗಿಬರುತ್ತಾರೆ. ಇದು ಸಹ ಕಂಟಕವಾಗಿ ಪರಿಣಮಿಸಿದೆ. ಕೆಲವರು ನಕಲಿ ಪ್ರಮಾಣ ಪತ್ರ ಹಿಡಿದು ಕೊಡಗು ಜಿಲ್ಲೆಯಲ್ಲಿ ಓಡಾಟ ನಡೆಸುತ್ತಿದ್ದಾರೆ. ಇತ್ತೀಚೆಗೆ, ಕೋವಿಡ್ ನೆಗೆಟಿವ್ ನಕಲಿ ವರದಿಯನ್ನು ಬಳಸಿಕೊಂಡು ಜಿಲ್ಲೆಯಲ್ಲಿ ಸಂಚರಿಸುತ್ತಿದ್ದ ಕೇರಳದ ಕಾಸರಗೋಡಿನ ದಂಪತಿ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎರಡು ತಿಂಗಳ ಹಿಂದೆ, ನಕಲಿ ವರದಿ ತಯಾರಿಕೆ ಮಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT