ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಕೊಳೆಯುತ್ತಿವೆ ಬೆಲೆಬಾಳುವ ಮರಗಳು, ಮಾಲೀಕರಿಗೆ ಮತ್ತೊಂದು ಸಂಕಷ್ಟ

ಎಲ್ಲಿ ನೋಡಿದರೂ ರಾಶಿ ರಾಶಿ ಮರ
Last Updated 29 ಸೆಪ್ಟೆಂಬರ್ 2018, 19:49 IST
ಅಕ್ಷರ ಗಾತ್ರ

ಸೋಮವಾರಪೇಟೆ: ಕೊಡಗಿನಲ್ಲಿ ಸುರಿದ ಮಳೆಯಿಂದ ಅಪಾರ ಹಾನಿ ಸಂಭವಿಸಿದ್ದು, ಗ್ರಾಮೀಣ ಭಾಗಗಳಲ್ಲಿ ಎಲ್ಲಿ ಹೋದರೂ ಮಣ್ಣು, ಮರಗಳ ರಾಶಿ ರಾಶಿಯೇ ಕಣ್ಣಿಗೆ ಬೀಳುತ್ತಿದೆ. ಭೂಕುಸಿತದ ಸ್ಥಳವು ಮರುಭೂಮಿಯಂತೆ ಗೋಚರಿಸುತ್ತಿದೆ.

ಆಗಸ್ಟ್‌ನಲ್ಲಿ ಸುರಿದ ಮಹಾಮಳೆ, ಪ್ರವಾಹ ಹಾಗೂ ಬೆಟ್ಟ ಕುಸಿತದಿಂದ ಕಂಗೆಟ್ಟಿದ್ದ ಮುಕ್ಕೋಡ್ಲು ಗ್ರಾಮದ ನಿವಾಸಿಗಳಿಗೆ ಈಗ ತ್ಯಾಜ್ಯ ವಿಲೇವಾರಿಯೇ ಬೃಹತ್ ಸಮಸ್ಯೆಯಾಗಿ ಕಾಡುತ್ತಿದೆ. ಕೊಚ್ಚಿ ಬಂದಿರುವ ಮರಗಳ ನಡುವೆ ಬದುಕು ನಡೆಸುವುದು ಕಷ್ಟವಾಗಿದೆ.

ಈ ಭಾಗದಲ್ಲಿ ಹಲವು ಗುಡ್ಡಗಳು ಕುಸಿದು ಗದ್ದೆ, ತೋಟಕ್ಕೆ ನುಗ್ಗಿ ಬಂದಿದ್ದ ನೀರು, ಮಣ್ಣು ಹಾಗೂ ಭಾರೀ ಗಾತ್ರದ ಮರಗಳನ್ನು ಕಿಲೋ ಮೀಟರ್ ದೂರ ಹೊತ್ತೊಯ್ದು ಹಾಕಿತ್ತು. ಇದರಿಂದ ಕಾಫಿ ತೋಟ, ಗದ್ದೆಗಳಲ್ಲಿ ಲೋಡ್‌ಗಟ್ಟಲೇ ಮರಗಳು ಬಿದ್ದಿವೆ.

ಮೇಘಸ್ಫೋಟಕ್ಕೆ ಕೋಟೆಬೆಟ್ಟದ ನಾಗಬಾಣೆ, ಮೇಘತಾಳು, ಅವಂಡಿ, ಕಲ್ಲುಕೊಟ್ಟು ಹಾಗೂ ಮುಕ್ಕೋಡ್ಲು ಗ್ರಾಮಗಳು ತತ್ತರಿಸಿ ಹೋಗಿದ್ದವು. ಮುಕ್ಕೋಡ್ಲು ನದಿ, ಕೂಟುಹೊಳೆ, ಕಾಲೂರು ನದಿ ಉಕ್ಕಿ ಹರಿದಿದ್ದರಿಂದ ಈ ಗ್ರಾಮಗಳಿಗೆ ದೊಡ್ಡಮಟ್ಟದಲ್ಲಿ ಪ್ರವಾಹ ಉಂಟಾಗಿತ್ತು.

ಬರೀ ಕಾಫಿ ತೋಟವಲ್ಲದೇ ಅರಣ್ಯ ಪ್ರದೇಶದಲ್ಲಿ ಗಾಳಿ, ಮಳೆಗೆ ಸಾವಿರಾರು ಮರಗಳು ಬುಡ ಸಮೇತ ಕೊಚ್ಚಿ ಹೋಗಿವೆ. ಕಿರಗಂದೂರು ಸುತ್ತಮುತ್ತಲ ತೋಟಗಳಲ್ಲಿ ಲಕ್ಷಾಂತರ ರೂಪಾಯಿ ಸಿಲ್ವರ್ ಓಕ್‌ ಹಾಗೂ ಕಾಡುಜಾತಿಯ ಮರಗಳು ಮಣ್ಣು ಪಾಲಾಗಿವೆ. ಆದರೆ, ಮರ ಧರೆಗುರುಳಿದ್ದು, ಅದಕ್ಕೆ ಯಾವುದೇ ಪರಿಹಾರವೂ ಸಿಗುತ್ತಿಲ್ಲ.

ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಬಿದ್ದ ಮರಕ್ಕೆ ಯಾವುದೇ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದು, ಮೊದಲೇ ತೋಟ ಕಳೆದುಕೊಂಡಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

‘ಸಾವಿರಾರು ಮರಗಳ ರಾಶಿಯೇ ಬಿದ್ದಿದೆ. ಅರಣ್ಯ ಪ್ರದೇಶಗಳಿಂದಲೂ ಮರಗಳು ಕೊಚ್ಚಿ ಬಂದು ರಾಶಿಯಾಗಿದೆ. ಅರಣ್ಯ ಪ್ರದೇಶದಲ್ಲಿ ಬಿದ್ದಿರುವ ಬೆಲೆ ಬಾಳುವ ಮರಗಳನ್ನು ಕುಶಾಲನಗರದ ಅರಣ್ಯ ಡಿಪೊಗೆ ಸಾಗಣೆ ಮಾಡಲಾಗುತ್ತಿದೆ. ಉಳಿದ ಮರಗಳನ್ನು ಸ್ಥಳದಲ್ಲಿಯೇ ಹರಾಜು ಮಾಡುವ ಮೂಲಕ ವಿಲೇವಾರಿ ಮಾಡಲಾಗುವುದು’ ಎಂದು ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಲಕ್ಷ್ಮೀಕಾಂತ ತಿಳಿಸಿದರು.

ಮಹಾಮಳೆ ಬರೀ ಮನೆ, ಬೆಳೆಯನ್ನು ಮಾತ್ರ ನಾಶ ಪಡಿಸಲಿಲ್ಲ. ಕಾಫಿ ತೋಟಗಳಲ್ಲಿ ಬೆಳೆದು ನಿಂತು ಬದುಕಿಗೆ ಆಧಾರವಾಗಬೇಕಿದ್ದ ಮರಗಳು ಮಣ್ಣು ಪಾಲಾಗಿರುವುದು ತೋಟದ ಮಾಲೀಕರಿಗೆ ನಷ್ಟ ತಂದೊಡ್ಡಿದೆ.

ರಸ್ತೆ ಹಾಳಾಗಲಿದೆ ಎಂದು ಬಿದ್ದ ಮರಗಳ ಸಾಗಣೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದು ತೋಟದಲ್ಲಿ ಬೆಲೆಬಾಳುವ ಮರಗಳು ಕೊಳೆಯುತ್ತಿವೆ. ಬಿದ್ದ ಮರಗಳ ಸಾಗಣೆಗೆ ಅವಕಾಶ ನೀಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT