ಸೋಮವಾರ, ಏಪ್ರಿಲ್ 19, 2021
33 °C
ದೇವರಾಯಸಮುದ್ರ ಬಳಿ ನಿರ್ಮಾಣಕ್ಕೆ ಕ್ರಮ: ಶಾಸಕ ಎಚ್. ನಾಗೇಶ್‌

ಬೌದ್ಧ ವಿಹಾರ ನಿರ್ಮಾಣಕ್ಕೆ 5 ಎಕರೆ ಜಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಳಬಾಗಿಲು: ‘ಮೂರು ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕುಂದುಕೊರತೆ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು’ ಎಂದು ಶಾಸಕ ಎಚ್. ನಾಗೇಶ್ ತಿಳಿಸಿದರು. 

ನಗರದ ತಾ.ಪಂ ಕಚೇರಿಯಲ್ಲಿ ಬುಧವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ಬೌದ್ಧ ವಿಹಾರ ನಿರ್ಮಾಣಕ್ಕೆ ಐದು ಎಕರೆ ಜಮೀನು ಮಂಜೂರು ಮಾಡಿಸಲಾಗಿದೆ. ಶೀಘ್ರವೇ, ಕಾಮಗಾರಿ ಆರಂಭಿಸಲಾಗುವುದು ಎಂದ ಅವರು, ಸಭೆಯಲ್ಲಿ ನೀಡಿರುವ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಸಭೆಯೊಳಗೆ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

ದಲಿತ ಮುಖಂಡ ಕೀಲುಹೊಳಲಿ ಸತೀಶ್ ಮಾತನಾಡಿ, ಪರಿಶಿಷ್ಟರು ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ನೀಡಬೇಕು. ಮುಂದಿನ ಸಭೆಯಲ್ಲಿ ಸಮಸ್ಯೆ ಪರಿಹರಿಸದಿದ್ದರೆ ಆ ಬಗ್ಗೆ ಚರ್ಚಿಸಬಹುದು. ದಲಿತ ಸಂಘಟನೆಗಳ ಹೋರಾಟದಿಂದ ಜಮ್ಮನಹಳ್ಳಿ ಬಳಿ 36 ಎಕರೆ ಜಮೀನು ಸರ್ಕಾರದ ವಶಕ್ಕೆ ಬಂದಿದೆ. ಅಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನೆ ಮತ್ತು ತರಬೇತಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಸಂಗಸಂದ್ರ ಡಾ.ವಿಜಯಕುಮಾರ್ ಮಾತನಾಡಿ, ಸಭೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಾಗಿ ಎಸ್‌ಸಿ ಮತ್ತು ಎಸ್‌ಟಿ ಜನಾಂಗಕ್ಕೆ ಸಿಗುವ ಸೌಲಭ್ಯಗಳ ಕುರಿತು ತಿಳಿಸಿದರೆ ಅನುಕೂಲವಾಗುತ್ತದೆ. ಮುಂದಿನ ಸಭೆಗೆ ಎಲ್ಲ ಅಧಿಕಾರಿಗಳು ಬರಬೇಕು ಎಂದರು.

ಮುಖಂಡರಾದ ನಾರಾಯಣಪ್ಪ, ಕವೀಂದ್ರಬಾಬು, ಪೆದ್ದೂರು ವೆಂಕಟರಾಮ್, ನಗರಸಭೆ ಸದಸ್ಯ ಸೋಮಪ್ಪ ಮಾತನಾಡಿ, ಇಂದಿಗೂ ಗ್ರಾಮಗಳಲ್ಲಿ ಅಸ್ಪೃಶ್ಯತೆ ಆಚರಿಸಲಾಗುತ್ತಿದೆ. ಪರಿಶಿಷ್ಟರ ಸ್ಮಶಾನಗಳಿಗೆ ದಾರಿ ಇರುವುದಿಲ್ಲ, ಎಸ್‌ಸಿ ಕಾಲೊನಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಅದನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.

ತಾ.ಪಂ ಅಧ್ಯಕ್ಷ ಡಾ.ಎ.ವಿ. ಶ್ರೀನಿವಾಸ್, ಸದಸ್ಯ ಎಂ. ಮಾರಪ್ಪ, ಗೊಲ್ಲಹಳ್ಳಿ ವೆಂಕಟೇಶ್, ತಹಶೀಲ್ದಾರ್ ಕೆ.ಎನ್. ರಾಜಗೋಪಾಲ್, ಸರ್ಕಲ್ ಇನ್‌ಸ್ಪೆಕ್ಟರ್ ಗೋಪಾಲ್‌ ನಾಯಕ್, ನಗರಸಭೆ ಪೌರಾಯುಕ್ತ ಜಿ. ಶ್ರೀನಿವಾಸಮೂರ್ತಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.