ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1ರಿಂದ 5ನೇ ತರಗತಿ ಆರಂಭಿಸಿರುವವರ ವಿರುದ್ಧ ಶಿಸ್ತುಕ್ರಮ: ಎಸ್. ಸುರೇಶ್‌ ಕುಮಾರ್

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಣ ಸಚಿವ ಎಚ್ಚರಿಕೆ
Last Updated 12 ಮಾರ್ಚ್ 2021, 12:47 IST
ಅಕ್ಷರ ಗಾತ್ರ

ಕೋಲಾರ: ‘ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು 1ರಿಂದ 5ರವರೆಗೆ ತರಗತಿ ಆರಂಭಿಸಿರುವ ಮಾಹಿತಿ ಬಂದಿದೆ. ಆ ಶಿಕ್ಷಣ ಸಂಸ್ಥೆಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಎಚ್ಚರಿಕೆ ನೀಡಿದರು.

ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘1ರಿಂದ 5ರವರೆಗೆ ತರಗತಿ ಆರಂಭಿಸುವಂತೆ ಒತ್ತಡವಿದೆ. ಆದರೆ, ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿ ಮತ್ತೆ ಬದಲಾಗಿದೆ. 10 ದಿನದ ಹಿಂದೆ ಕೊರೊನಾ ಸೋಂಕಿನ ಸಂಖ್ಯೆ 350ಕ್ಕೆ ಇಳಿದಿತ್ತು. ಈಗ 700ಕ್ಕೆ ಏರಿಕೆಯಾಗಿದೆ’ ಎಂದರು.

‘ಕೋವಿಡ್‌ 2ನೇ ಅಲೆಯ ಆತಂಕ ಎದುರಾಗಿದೆ. ರಾಜ್ಯದಲ್ಲಿ ಪುನಃ ಲಾಕ್‌ಡೌನ್‌ ಜಾರಿ ಮಾಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಕೊರೊನಾ ವಿಚಾರವಾಗಿ ರಾಜ್ಯದಲ್ಲಿ ಪರಿಸ್ಥಿತಿ ನಿರ್ವಹಣೆ ಅಚ್ಚುಕಟ್ಟಾಗಿದೆ. ಮಹಾರಾಷ್ಟ್ರ ಹಾಗೂ ಕೇರಳ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮಕ್ಕಳ ಯೋಗ ಕ್ಷೇಮದ ಕಾರಣಕ್ಕೆ ಸರ್ಕಾರ ಶೈಕ್ಷಣಿಕ ವರ್ಷ ಆರಂಭಿಸಿಲ್ಲ. ಸರ್ಕಾರದ ನಿರ್ಧಾರವನ್ನು ಎಲ್ಲರೂ ಪಾಲಿಸಿ, ಗೌರವಿಸಬೇಕು. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಈ ವಿಚಾರವಾಗಿ ಹೈಕೋರ್ಟ್‌ ಮೆಟ್ಟಿಲೇರಿವೆ. ನ್ಯಾಯಾಲಯದಲ್ಲಿ ಮಾರ್ಚ್‌ 24ರಂದು ವಿಚಾರಣೆ ನಡೆಯಲಿದೆ. ಆರೋಗ್ಯ ಇಲಾಖೆ ಸಲಹೆಯಂತೆ ತರಗತಿ ಆರಂಭದ ಬಗ್ಗೆ ತೀರ್ಮಾನ ಮಾಡುತ್ತೇವೆ’ ಎಂದು ಹೇಳಿದರು.

‘ಕೋವಿಡ್‌ ಕಾರಣಕ್ಕೆ ಶಿಕ್ಷಣ ಇಲಾಖೆಗೆ ಅನುದಾನ ಕಡಿಮೆಯಾಗಿದೆ. ಮಧ್ಯಾಹ್ನದ ಬಿಸಿಯೂಟ ಆರಂಭಕ್ಕೆ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಆದರೆ, ಕೇಂದ್ರವು ಮಧ್ಯಾಹ್ನ ಬಿಸಿಯೂಟ ಆರಂಭಕ್ಕೆ ಹಸಿರು ನಿಶಾನೆ ತೋರಿಲ್ಲ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT