ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಟೊಮೆಟೊಗೆ ಬೆಂಬಲ ಬೆಲೆ ಘೋಷಿಸಿ -ರೈತಸಂಘದ ಮನವಿ

Last Updated 9 ಆಗಸ್ಟ್ 2021, 4:02 IST
ಅಕ್ಷರ ಗಾತ್ರ

ಕೋಲಾರ: ಸಂಕಷ್ಟದಲ್ಲಿರುವ ಜಿಲ್ಲೆಯ ಟೊಮೆಟೊ ಹಾಗೂ ರೇಷ್ಮೆ ಬೆಳೆಗಾರರ ರಕ್ಷಣೆಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರೈತಸಂಘದಿಂದ ಜಿಲ್ಲಾ ಉಸ್ತವಾರಿ ಸಚಿವ ಮುನಿರತ್ನ ಅವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.

ಕೋಟ್ಯಾಂತರ ಗ್ರಾಹಕರು, ರೈತರು, ನೌಕರರಿಗೆ ಮಾರಕವಾಗುವ ವಿದ್ಯುತ್ ಖಾಸಗೀಕರಣ ಕಾಯ್ದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರ ಮಾಡದಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಹಾಗೂ ಕೆಸಿವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಿ ಮುಳಬಾಗಿಲು ಕೆರೆಗಳಿಗೂ ಹರಿಸಬೇಕು. ಮತ್ತು ಸರ್ವೇ ಇಲಾಖೆಯಲ್ಲಿ ಸರ್ವೇಯರ್‌ಗಳ ಸಮಸ್ಯೆಯಿದ್ದು, ಬಗೆಹರಿಸಿ ರೈತರ ರಕ್ಷಣೆಗೆ ನಿಲ್ಲಬೇಕೆಂದು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಒತ್ತಾಯಿಸಿದರು.

ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸರ್ಕಾರ ಕೊರೊನಾ ಸಂಕಷ್ಟದಲ್ಲಿ ಘೋಷಣೆ ಮಾಡಿದ್ದ ಬೆಳೆ ಪರಿಹಾರ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಖಾತೆಗೆ ಸೇರುತ್ತಿಲ್ಲ. ಜೊತೆಗೆ ರೈತರ ಜೀವನಾಡಿಯಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಗಕ್ಕೆ 50 ಎಕರೆ ಜಮೀನು ನೀಡಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದರು.

ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಟೊಮೇಟೊ ಸಮರ್ಪಕವಾದ ಬೆಲೆಯಿಲ್ಲದೆ ರಸ್ತೆಗಳಲ್ಲಿ ಸುರಿದಿದ್ದರೂ ಸೌಜನ್ಯಕ್ಕಾದರೂ ಜನಪ್ರತಿನಿಧಿಗಳು, ಜಿಲ್ಲಾಡಳಿತ ರೈತರ ಕಷ್ಟ ಕೇಳಲಿಲ್ಲ. ಇನ್ನು ಇಂಡೋ ಅಮೇರಿಕನ್ ಕಂಪನಿಯು ನೀಡಿರುವ 1,320 ಟೊಮೆಟೊ ತಳಿ ಸಂಪೂರ್ಣ ಕಳಪೆಯಾಗಿದ್ದು, ಮಾರುಕಟ್ಟೆಯಲ್ಲಿ ಈ ತಳಿಯ ಟೊಮೆಟೊಗೆ ಬೇಡಿಕೆಯಿಲ್ಲ. ಇದರ ವಿರುದ್ಧ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ಕಂಪನಿ ಪರ ಕೆಲಸ ಮಾಡುತ್ತಿದ್ದಾರೆಯೇ ಹೊರತು ರೈತರ ಪರ ನಿಲ್ಲುತ್ತಿಲ್ಲ ಎಂದು ದೂರಿದರು.

ಜಿಲ್ಲೆಯಾದ್ಯಂತ ಸಂಕಷ್ಟದಲ್ಲಿರುವ ಟೊಮೆಟೊ, ರೇಷ್ಮೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಪ್ರತಿ ಕೆಜಿ ಟೊಮೆಟೊಗೆ ₹5, ರೇಷ್ಮೆಗೆ ₹40 ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಸ್ತುವಾರಿ ಸಚಿವ ಮುನಿರತ್ನ, ಮೊದಲು ಕೊರೊನಾ 3ನೇ ಅಲೆಯ ನಿಯಂತ್ರಣಕ್ಕೆ ಆದ್ಯತೆ ನೀಡಿ ಜನರ ರಕ್ಷಣೆ ಮಾಡಿಆನಂತರ ಜಿಲ್ಲೆಯ ಎಲ್ಲ ರೈತರ ಸಮಸ್ಯೆ ಆಲಿಸಲು ಸಭೆ ಕರೆಯಲಾಗುವುದು. ಬೆಂಬಲ ಬೆಲೆ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುವ ಭರವಸೆ ನೀಡಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ನಾಗೇಶ್, ತಿಮ್ಮಣ್ಣ, ಹನುಮಯ್ಯ, ಪವನ್, ಚಂದು, ಅಶ್ವತ್ಥಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT