ಸೋಮವಾರ, ಮೇ 16, 2022
27 °C
ಬೇಸಿಗೆ ಕಾಲ ಸಮೀಪಿಸುತ್ತಿದೆ: ನಗರಸಭೆ ಅಧ್ಯಕ್ಷೆ ಶ್ವೇತಾ ಹೇಳಿಕೆ

ಪ್ರತಿ ವಾರ್ಡ್‌ಗೆ ಕೊಳವೆ ಬಾವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ನಗರದ 35 ವಾರ್ಡ್‌ನಲ್ಲೂ 15ನೇ ಹಣಕಾಸು ಯೋಜನೆಯಡಿ ಹೊಸ ಕೊಳವೆ ಬಾವಿ ಕೊರೆಸಲಾಗುತ್ತಿದೆ’ ಎಂದು ನಗರಸಭೆ ಅಧ್ಯಕ್ಷೆ ಆರ್‌.ಶ್ವೇತಾ ಹೇಳಿದರು.

ನಗರದ 20ನೇ ವಾರ್ಡ್‌ನಲ್ಲಿ ಬುಧವಾರ ನೂತನ ಕೊಳವೆ ಬಾವಿಗೆ ಚಾಲನೆ ನೀಡಿ ಮಾತನಾಡಿ, ‘ನೀರಿನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ಕೊಡುತ್ತೇವೆ. ಸಫಲವಾಗಿರುವ ಕೊಳವೆ ಬಾವಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿ ಪೈಪ್‌ಲೈನ್‌ ಅಳವಡಿಸಲಾಗುತ್ತದೆ’ ಎಂದು ತಿಳಿಸಿದರು.

‘ದುರಸ್ತಿ ಆಗಬೇಕಿರುವ ಕೊಳವೆ ಬಾವಿಗಳನ್ನು ಶೀಘ್ರವೇ ಸರಿಪಡಿಸಲಾಗುವುದು. ಆದರೂ ನೀರಿನ ಸಮಸ್ಯೆ ಇದ್ದರೆ ನಗರಸಭೆಯ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತದೆ. ಅಗತ್ಯವಿದ್ದರೆ ಟೆಂಡರ್‌ ಮೂಲಕ ಖಾಸಗಿ ಟ್ಯಾಂಕರ್‌ಗಳನ್ನು ಬಾಡಿಗೆಗೆ ಪಡೆಯಲಾಗುತ್ತದೆ. ನೀರಿನ ಸೌಕರ್ಯಕ್ಕೆ ಅನುದಾನದ ಕೊರತೆಯಿಲ್ಲ’ ಎಂದು ಮಾಹಿತಿ ನೀಡಿದರು.

‘ಕಠಾರಿಪಾಳ್ಯದಲ್ಲಿರುವ ನಾಗರಕುಂಟೆ ಅಭಿವೃದ್ಧಿ ಕಾಮಗಾರಿಗೆ ಹಿಂದೆಯೇ ಚಾಲನೆ ನೀಡಲಾಗಿತ್ತು. ಆದರೆ, ಕಾಮಗಾರಿ ನನೆಗುದಿಗೆ ಬಿದ್ದಿದೆ. ನಾಗರಕುಂಟೆ ಪುನಶ್ಚೇತನಗೊಳಿಸುವ ಸಂಬಂಧ ಅಧಿಕಾರಿಗಳ ಜತೆ ಚರ್ಚಿಸಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಿಸುತ್ತೇವೆ’ ಎಂದು ಭರವಸೆ ನೀಡಿದರು.

ನೀರಿನ ಘಟಕ ಸ್ಥಗಿತ: ‘ನಾಗರಕುಂಟೆ ಪುನಶ್ಚೇತನ ಕಾಮಗಾರಿಯನ್ನು 2 ತಿಂಗಳೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ನೀರಿಲ್ಲದೆ ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿವೆ. ಕೆಲ ಬಡಾವಣೆಗಳಲ್ಲಿ ನೀರಿನ ಘಟಕಗಳಿಗೆ ಸ್ಮಾರ್ಟ್‌ ಕಾರ್ಡ್‌ ಬದಲು ಕಾಯಿನ್‌ ವ್ಯವಸ್ಥೆ ಅಳವಡಿಸುವಂತೆ ಜನರಿಂದ ಮನವಿ ಬಂದಿದೆ’ ಎಂದು ನಗರಸಭೆ ಉಪಾಧ್ಯಕ್ಷ ಎನ್.ಎಸ್.ಪ್ರವೀಣ್‌ಗೌಡ ತಿಳಿಸಿದರು.

‘ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವುದು ಮೊದಲ ಆದ್ಯತೆ. ನಗರದ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಪಕ್ಷಾತೀತವಾಗಿ ಸಹಕಾರ ನೀಡಬೇಕು. ನಗರದಲ್ಲಿ ಯಾವ ರೀತಿ ಅಭಿವೃದ್ಧಿ ಕೆಲಸಗಳಾಗುತ್ತಿವೆ ಎಂಬುದು ಜನರಿಗೆ ಗೊತ್ತಿದೆ. ಆದರೂ ಕೆಲ ಸದಸ್ಯರು ಪೂರ್ವಾಗ್ರಹಪೀಡಿತರಾಗಿ ಇಲ್ಲಸಲ್ಲದ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಳ್ಳು ಹೇಳಿಕೆ: ‘2020ರ ಡಿ.2ರಂದು ನಗರಸಭೆಯಲ್ಲಿ ಹೊಸ ಆಡಳಿತ ಮಂಡಳಿ ರಚನೆಯಾಯಿತು. ಬಳಿಕ ಡಿ.29ರಂದು ಸಾಮಾನ್ಯ ಸಭೆ ನಡೆಸಿ ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ನಿರ್ಧಾರ ಕೈಗೊಳ್ಳಲಾಯಿತು. ನಂತರ ಜ.4ರಂದು ತುರ್ತು ಸಭೆ ನಡೆಸಲಾಗಿತ್ತು. ಆದರೆ, ಕೆಲ ಸದಸ್ಯರು ಸಭೆ ನಡೆಸಿಲ್ಲವೆಂದು ಸುಳ್ಳು ಹೇಳಿಕೆ ನೀಡಿರುವುದು ಸರಿಯಲ್ಲ. ದ್ವೇಷ ರಾಜಕಾರಣ ಬಿಟ್ಟು ರಚನಾತ್ಮಕ ಸಲಹೆ ನೀಡಿದರೆ ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತೇವೆ’ ಎಂದರು.

‘15ನೇ ಹಣಕಾಸು ಯೋಜನೆಯಡಿ 30 ವಾರ್ಡ್‌ಗಳಲ್ಲಿ ಕೊರೆಸಿರುವ ಕೊಳವೆ ಬಾವಿಗಳು ಸಫಲವಾಗಿವೆ. ಬೇಸಿಗೆ ಹಿನ್ನೆಲೆಯಲ್ಲಿ ಎಲ್ಲಾ ವಾರ್ಡ್‌ಗಳಿಗೂ ಖುದ್ದು ಭೇಟಿ ನೀಡಿ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಹರಿಸುವ ಪ್ರಯತ್ನ ಮಾಡುತ್ತೇವೆ’ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ತಿಳಿಸಿದರು.

‘ಎಲ್ಲಾ ವಾರ್ಡ್‌ಗಳಲ್ಲಿ ಪೈಪ್‌ಲೈನ್ ಅಳವಡಿಸಲಾಗುತ್ತದೆ. ಹೆಚ್ಚುವರಿಗೆ 10 ವಾಲ್‌ಮನ್‌ ಮತ್ತು  20 ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ವಿವರಿಸಿದರು.

ನಗರಸಭೆ ಸದಸ್ಯರಾದ ನಾರಾಯಣಮ್ಮ, ರಂಗಮ್ಮ, ಎನ್‌.ಅಪೂರ್ವ, ಸೌಭಾಗ್ಯ, ಜಿ.ಎಸ್.ಪಾವನಾ, ಆರ್‌.ಗುಣಶೇಖರ್, ಬಿ.ಅಸ್ಲಂ ಪಾಷಾ, ಆಯುಕ್ತ ಶ್ರೀಕಾಂತ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಮಮೂರ್ತಿ, ಸಹಾಯಕ ಎಂಜಿನಿಯರ್‌ ಪೂರ್ಣಿಮಾ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.