ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಾಜ್ಞೆ ಲೆಕ್ಕಿಸದೆ ಸಿಪಿಎಂ ಪ್ರತಿಭಟನೆ

ಸಿಎಎ– ಎನ್‌ಆರ್‌ಸಿಗೆ ಜಿಲ್ಲೆಯಲ್ಲಿ ವಿರೋಧ: ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
Last Updated 19 ಡಿಸೆಂಬರ್ 2019, 15:51 IST
ಅಕ್ಷರ ಗಾತ್ರ

ಕೋಲಾರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ರಾಷ್ಟ್ರೀಯ ನೋಂದಣಿ ಪ್ರಕ್ರಿಯೆ (ಎನ್‌ಆರ್‌ಸಿ) ವಿರೋಧಿಸಿ ಸಿಪಿಎಂ ಕಾರ್ಯಕರ್ತರು ಇಲ್ಲಿ ಗುರುವಾರ ನಿಷೇಧಾಜ್ಞೆ ನಡುವೆಯೂ ಪ್ರತಿಭಟನೆ ಮಾಡಿದರು.

ಜಿಲ್ಲಾಧಿಕಾರಿಯು ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ ಗುರುವಾರ (ಡಿ.18) ಮಧ್ಯ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಆದರೂ ನಿಷೇಧಾಜ್ಞೆ ಲೆಕ್ಕಿಸದೆ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ವೃತ್ತದಲ್ಲಿ ಜಮಾಯಿಸಿದ ಸಿಪಿಎಂ ಹಾಗೂ ವಿವಿಧ ಸಂಘಟನೆ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕವಾಗಿದೆ. ಬಿಜೆಪಿಯು ಈಗ ದಿಢೀರ್‌ ಆಗಿ ಪೌರತ್ವ ಸಾಬೀತುಪಡಿಸುವ ಪರಿಸ್ಥಿತಿ ಸೃಷ್ಟಿಸಿದೆ. ಕೇಂದ್ರ ಸರ್ಕಾರವು ಧರ್ಮದ ಆಧಾರದಲ್ಲಿ ದೇಶದ ಪ್ರಜೆಗಳನ್ನು ವಿಭಜಿಸುತ್ತಿರುವುದು ಆತಂಕಕಾರಿ ಬೆಳವಣಿಗೆ’ ಎಂದು ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಉಪಾಧ್ಯಕ್ಷೆ ವಿ.ಗೀತಾ ಕಿಡಿಕಾರಿದರು.

‘ವಿದೇಶದಿಂದ ಬಂದು ದೇಶದಲ್ಲಿ ಅಕ್ರಮವಾಗಿ ನೆಲೆಸಿರುವ ಹಿಂದೂ, ಸಿಖ್‌, ಬೌದ್ಧ, ಜೈನ ಹಾಗೂ ಪಾರ್ಸಿ ಸಮುದಾಯದವರಿಗೆ ಭಾರತದ ಪೌರತ್ವ ನೀಡಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆದರೆ, ಮುಸ್ಲಿಂ ಸಮುದಾಯವನ್ನು ಕಾಯ್ದೆಯಿಂದ ಕೈಬಿಡಲಾಗಿದೆ. ಈ ಕಾಯ್ದೆಯು ದೇಶದ ಸಂವಿಧಾನದ ಮೂಲಭೂತ ರಚನೆಯನ್ನು ಉಲ್ಲಂಘಿಸುತ್ತದೆ. ದೇಶದ ಸಾಮಾಜಿಕ ವ್ಯವಸ್ಥೆ ಅಪಾಯದ ಅಂಚಿನಲ್ಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘1955ರ ಪೌರತ್ವ ಕಾಯ್ದೆಯಲ್ಲಿದ್ದ ಸಂವಿಧಾನದ ಅಂಶಗಳಿಗೆ ತಿದ್ದುಪಡಿ ತರಲಾಗಿದೆ. ಕೇಂದ್ರದ ಈ ನಡೆ ಸಂವಿಧಾನದ ಆತ್ಮವಾದ ಧರ್ಮ ನಿರಪೇಕ್ಷ, ಸಮಾನತೆ ತತ್ವಕ್ಕೆ ವಿರುದ್ಧವಾಗಿದೆ. ಕೋಮುವಾದಿ ಬಿಜೆಪಿಯ ನಡವಳಿಕೆ ಖಂಡನೀಯ. ಕಾಯ್ದೆ ವಿರುದ್ಧ ದೇಶದಲ್ಲಿ ನಡೆಯುತ್ತಿರುವ ಹೋರಾಟ ಹತ್ತಿಕ್ಕಲು ಕೇಂದ್ರವು ದಮನಕಾರಿ ನೀತಿ ಅನುಸರಿಸುತ್ತಿದೆ’ ಎಂದು ಗುಡುಗಿದರು.

ಅಶಾಂತಿ ಸೃಷ್ಟಿ: ‘ಪೌರತ್ವ ತಿದ್ದುಪಡಿ ಕಾಯ್ದೆಯು ಸದುದ್ದೇಶ ಹಾಗೂ ಮಾನವೀಯ ಮೌಲ್ಯದಿಂದ ಕೂಡಿಲ್ಲ. ಬದಲಿಗೆ ದೇಶದ ವಿವಿಧತೆಯಲ್ಲಿ ಏಕತೆ ಹಾಗೂ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಹುನ್ನಾರವಿದೆ. ಬಿಜೆಪಿಯು ರಾಜಕೀಯ ದುರುದ್ದೇಶದಿಂದ ದೇಶದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ’ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಪಿ.ಶ್ರೀನಿವಾಸ್ ವಾಗ್ದಾಳಿ ನಡೆಸಿದರು.

‘ಕೇಂದ್ರವು ಕಪ್ಪು ಹಣ ಪತ್ತೆಗಾಗಿ ನೋಟು ಅಮಾನ್ಯೀಕರಣಗೊಳಿಸಿದಂತೆ ಅಕ್ರಮ ವಾಸಿಗಳ ಪತ್ತೆಗಾಗಿ ಇಡೀ ದೇಶದ ಪ್ರಜೆಗಳ ಪೌರತ್ವವನ್ನು ಕಾನೂನು ಮೂಲಕ ರದ್ದುಗೊಳಿಸಿದೆ. 1971ಕ್ಕಿಂತ ಮುಂಚಿನ ದಾಖಲೆಪತ್ರ ಆಧಾರದಲ್ಲಿ ಭಾರತೀಯರೆಲ್ಲರೂ ಪೌರತ್ವ ಸಾಬೀತುಪಡಿಸಬೇಕಿದ್ದು, ಪ್ರದೇಶದಿಂದ ಪ್ರದೇಶಕ್ಕೆ, ರಾಜ್ಯದಿಂದ ರಾಜ್ಯಕ್ಕೆ ವಸತಿಹೀನರು ಹಾಗೂ ಕಾರ್ಮಿಕರು ಸೇರಿದಂತೆ ಬಡವರು ಸಂಕಷ್ಟಕ್ಕೆ ಸಿಲುಕುತ್ತಾರೆ’ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಸದಸ್ಯರಾದ ವಿಜಿಕೃಷ್ಣ, ಪಿ.ಆರ್.ನವೀನ್, ಮಂಜುನಾಥ್, ನಾರಾಯಣರೆಡ್ಡಿ, ಸುಶೀಲಾ, ಆಶಾ, ಕೆಪಿಆರ್‌ಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT