ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ: ಶುಕ್ರವಾರ ಅಣಕು ಕಾರ್ಯಾಚರಣೆ

ಜಿಲ್ಲೆಯ 8 ಕೇಂದ್ರದಲ್ಲಿ ಪ್ರಕ್ರಿಯೆ: ಆರೋಗ್ಯ ಇಲಾಖೆಯ ಸಕಲ ಸಿದ್ಧತೆ
Last Updated 7 ಜನವರಿ 2021, 13:44 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಮೊದಲನೇ ಹಂತದ ಕೋವಿಡ್–19 ಲಸಿಕೆ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಶುಕ್ರವಾರ (ಜ.8) ಲಸಿಕೆ ನೀಡಿಕೆಯ ಅಣಕು ಕಾರ್ಯಾಚರಣೆ (ಡ್ರೈ ರನ್‌) ನಡೆಯಲಿದ್ದು, ಆರೋಗ್ಯ ಇಲಾಖೆಯು ಕಾರ್ಯಾಚರಣೆಗೆ ಸಕಲ ಸಿದ್ಧತೆ ಮಾಡಿದೆ.

ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು ಮೊದಲ ಹಂತದಲ್ಲಿ ಲಸಿಕೆ ಪಡೆಯಲಿದ್ದಾರೆ. ಇದರ ಭಾಗವಾಗಿ ಆಯ್ಧ ಮಂದಿಯನ್ನು ಬಳಸಿಕೊಂಡು ಡ್ರೈ ರನ್ ಕಾರ್ಯಾಚರಣೆ ನಡೆಸಲಾಗುತ್ತದೆ.

ಜಿಲ್ಲಾ ಕೇಂದ್ರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ, ಶ್ರೀ ದೇವರಾಜ ಅರಸು ವೈದ್ಯಕೀಯ ಕಾಲೇಜು, ಇಟಿಸಿಎಂ ಆಸ್ಪತ್ರೆ, ದರ್ಗಾ ಮೊಹಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಮುಳಬಾಗಿಲು ಮತ್ತು ಶ್ರೀನಿವಾಸಪುರ ತಾಲ್ಲೂಕು ಆಸ್ಪತ್ರೆ, ಮಾಲೂರು ತಾಲ್ಲೂಕಿನ ದೊಡ್ಡಶಿವಾರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ. ಕೆಜಿಎಫ್‌ ತಾಲ್ಲೂಕಿನ ಬೇತಮಂಗಲ ಸಮುದಾಯ ಆರೋಗ್ಯ ಕೇಂದ್ರವನ್ನು ಕಾರ್ಯಾಚರಣೆಗೆ ಆಯ್ಕೆ ಮಾಡಲಾಗಿದೆ.

ಈ ಕೇಂದ್ರಗಳಲ್ಲಿ ಬೆಳಿಗ್ಗೆ 10 ಗಂಟೆಯಿಂದ ಲಸಿಕೆ ಕಾರ್ಯಾಚರಣೆ ಆರಂಭವಾಗಲಿದೆ. ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಪ್ರತಿ ಕೇಂದ್ರದಲ್ಲಿ ಲಸಿಕೆ ಪಡೆಯಲು ತಲಾ 25 ಮಂದಿಯನ್ನು ಗುರುತಿಸಲಾಗಿದೆ.

ಪ್ರತಿ ಲಸಿಕಾ ಕೇಂದ್ರದಲ್ಲಿ 3 ಕೊಠಡಿ ಮೀಸಲಿಡಲಾಗಿದೆ. ನಿರೀಕ್ಷಣಾ ಕೊಠಡಿ, ಲಸಿಕೆ ಕೊಠಡಿ ಮತ್ತು ನಿಗಾ ಕೊಠಡಿ ಇದರಲ್ಲಿ ಸೇರಿವೆ. ಪ್ರತಿ ಕೇಂದ್ರಕ್ಕೆ 5 ಮಂದಿ ಲಸಿಕೆ ಅಧಿಕಾರಿಗಳನ್ನು ನೇಮಿಸಲಾಗಿದೆ.

ಏನಿದು ಡ್ರೈ ರನ್?: ‘ಕೋವಿಡ್ ಲಸಿಕೆ ನೀಡುವ ಪೂರ್ವದಲ್ಲಿ ನಡೆಸುವ ಅಣಕು ಕಾರ್ಯಾಚರಣೆಯೇ ಡ್ರೈ ರನ್. ಇದರಲ್ಲಿ ಕೋವಿಡ್ ಲಸಿಕೆ ನೀಡುವುದನ್ನು ಹೊರತುಪಡಿಸಿ ಉಳಿದ ಎಲ್ಲಾ ಹಂತಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಸಾರ್ವಜನಿಕರಿಗೆ ಲಸಿಕೆ ನೀಡುವ ಕಾರ್ಯಕ್ಕೆ ಸಿದ್ಧತೆಯನ್ನು ಡ್ರೈ ರನ್‌ ಮೂಲಕ ಪರಿಶೀಲಿಸಲಾಗುತ್ತದೆ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ವಿಜಯಕುಮಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಟ್ಟಾರೆ ಲಸಿಕೆ ಪ್ರಕ್ರಿಯೆ 3 ಕೊಠಡಿಗಳಲ್ಲಿ ಆಗುತ್ತವೆ. ಮೊದಲನೇ ಕೊಠಡಿಯಲ್ಲಿ, ಕಾರ್ಯಾಚರಣೆಯಲ್ಲಿ ಭಾಗವಹಿಸಲು ಹೆಸರು ನೋಂದಣಿ ಮಾಡಿಕೊಂಡ ವ್ಯಕ್ತಿಯ ಆಧಾರ್ ಕಾರ್ಡ್ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಕೋ–ವಿನ್‌ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ಆ ಕೊಠಡಿಯಲ್ಲಿ ಪೊಲೀಸ್ ಸೇರಿದಂತೆ ಇತರ ಭದ್ರತಾ ವ್ಯವಸ್ಥೆ ಇರುತ್ತದೆ’ ಎಂದು ಹೇಳಿದರು.

‘2ನೇ ಕೊಠಡಿಯಲ್ಲಿ ಲಸಿಕೆ ನೀಡುವ ಅಣಕು ಕಾರ್ಯಾಚರಣೆ ಮಾಡಲಾಗುತ್ತದೆ. ಬಳಿಕ ಆ ವ್ಯಕ್ತಿಯನ್ನು ಮೂರನೇ ಕೊಠಡಿಗೆ ಕಳುಹಿಸಿ, ಆರೋಗ್ಯದ ಮೇಲೆ ಅರ್ಧ ಗಂಟೆ ನಿಗಾ ವಹಿಸಲಾಗುತ್ತದೆ. ಈ ಎಲ್ಲಾ ಹಂತಗಳನ್ನೂ ಡ್ರೈ ರನ್‌ ಮೂಲಕ ಅಣಕು ರೂಪದಲ್ಲಿ ಪಾಲಿಸಲಾಗುತ್ತದೆ. ಇದರಲ್ಲಿ ಆಗಿರುವ ಲೋಪಗಳನ್ನು ಪತ್ತೆ ಹಚ್ಚಿ ಸರಿಪಡಿಸಲಾಗುತ್ತದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT