ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ದಲಿತ ಚಳವಳಿ ಮನವಿ ಸಲ್ಲಿಕೆಗೆ ಸೀಮಿತ- ಶ್ರೀನಿವಾಸ್

ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಕಳವಳ
Last Updated 17 ಜನವರಿ 2022, 16:30 IST
ಅಕ್ಷರ ಗಾತ್ರ

ಕೋಲಾರ: ‘ದಲಿತ ಚಳವಳಿಯು ಇಂದು ಕೇವಲ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದಕ್ಕೆ ಸೀಮಿತವಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದರು.

ಬಹುಜನ ನಾಯಕ ಎನ್.ಶಿವಣ್ಣರ ಜನ್ಮ ದಿನಾಚರಣೆ ಅಂಗವಾಗಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯು ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಲಿತ ಸ್ವಾಭಿಮಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ಪ್ರತಿ ಗ್ರಾಮದ ಬಡವರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವುದು ದಲಿತ ಸಂಘಟನೆಗಳ ಧ್ಯೇಯವಾಗಬೇಕು’ ಎಂದು ಆಶಿಸಿದರು.

‘101 ಜಾತಿ ಒಗ್ಗೂಡಿಸಲು ಸಾಧ್ಯವಾಗದೆ ಇರುವಾಗ ಜಾತಿಗೊಂದು ಸಂಘಟನೆ ಹಾಗೂ ಮನೆಗೆ ಒಬ್ಬರಂತೆ ರಾಜಾಧ್ಯಕ್ಷ ಎಂದು ಘೋಷಣೆ ಮಾಡಿಕೊಂಡು ಸಂಘಟನೆ ವಿಚಾರ ಮರೆಯುತ್ತಿದ್ದಾರೆ. ಸ್ವಘೋಷಿತ ಮುಖಂಡರಿಗೆ ಜನಪರ ಕಾಳಜಿ, ಬದ್ಧತೆ ಇಲ್ಲವಾಗಿದೆ’ ಎಂದು ಮಾರ್ಮಿಕವಾಗಿ ನುಡಿದರು.

‘ಬಹುಜನ ನಾಯಕ ಶಿವಣ್ಣ ಅವರು ದಲಿತ ವಿರೋಧಿಗಳ ಜತೆ ರಾಜಿ ಮಾಡಿಕೊಳ್ಳದೆ, ಸಮಾಜದಲ್ಲಿ ಪ್ರತಿ ಗ್ರಾಮಗಳನ್ನು ಸುತ್ತಾಡಿ ನೊಂದವರ ಸಮಸ್ಯೆ ಆಲಿಸಿ ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದರು. ಶೋಷಿತ ಸಮುದಾಯಗಳ ಕಷ್ಟಗಳಿಗೆ ಸ್ಪಂದಿಸುವ ದಿಸೆಯಲ್ಲಿ ಶಿವಣ್ಣ ಅವರು ದಲಿತ ಸಂಘಟನೆ ಮುಖಂಡರಿಗೆ ಮಾದರಿಯಾಗಿದ್ದಾರೆ’ ಎಂದು ಸ್ಮರಿಸಿದರು.

‘ದಲಿತ ಸಮುದಾಯದ 101 ಜಾತಿಗಳ ಅನುಕೂಲಕ್ಕಾಗಿ ಆಯಾ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವುದು ಸಮಿತಿಯ ಕನಸಾಗಿದೆ. ಅಂಬೇಡ್ಕರ್‌ರ ವಿಚಾರಧಾರೆ ತಿಳಿದು ಸಮುದಾಯ ಇತರೆ ಸಮಾಜಗಳೊಂದಿಗೆ ಜತೆಯಾಗಿ ಸಾಮರಸ್ಯದಿಂದ ಮುನ್ನಡೆಯಬೇಕು’ ಎಂದು ಕಿವಿಮಾತು ಹೇಳಿದರು.

ಹೊಸ ಹುರುಪು: ‘ಶಿವಣ್ಣ ಅವರು ವಿದ್ಯಾರ್ಥಿ ದಿಸೆಯಲ್ಲೇ ಹೋರಾಟ ರೂಪಿಸಿ ದಲಿತ ಚಳವಳಿಗೆ ಹೊಸ ಹುರುಪು ತಂದವರು. ಸಂಘಂ ಶಿವಣ್ಣ ಎಂದೇ ಖ್ಯಾತರಾಗಿದ್ದ ಅವರು ರಾಜ್ಯದ ಮೂಲೆ ಮೂಲೆಯಲ್ಲೂ ತಮ್ಮದೇ ಗೌರವ ಉಳಿಸಿಕೊಂಡಿದ್ದರು’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಎನ್‌.ಮುನಿಯಪ್ಪ ಬಣ್ಣಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಘಟನಾ ಸಂಚಾಲಕ ರಮೇಶ್, ಖಜಾಂಚಿ ಸತ್ಯ, ಮುಖಂಡರಾದ ಎನ್.ಶಿವಣ್ಣ, ವೆಂಕಟಸ್ವಾಮಿ, ವಿಜಯನರಸಿಂಹ, ವೆಂಕಟರವಣಪ್ಪ, ಎಚ್.ಮುನಿಚೌಡಪ್ಪ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT