ಕೋಲಾರ: ಕೆ.ಸಿ ವ್ಯಾಲಿ ಯೋಜನೆ ನೀರನ್ನು ಅನಧಿಕೃತವಾಗಿ ಬಳಸುತ್ತಿರುವ ವ್ಯಕ್ತಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಹಾಗೂ ಯೋಜನೆ ವ್ಯಾಪ್ತಿಯ ಕೆರೆ, ಕಾಲುವೆ ಇಕ್ಕೆಲಗಳಲ್ಲಿ ನಿಷೇಧಿತ ಪ್ರದೇಶ ಗುರುತಿಸಬೇಕೆಂದು ಇಲ್ಲಿ ಶನಿವಾರ ನಡೆದ ಜಿಲ್ಲೆಯ ಜನಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕೆ.ಸಿ ವ್ಯಾಲಿ ನೀರಿನ ಸಂರಕ್ಷಣೆಗೆ ಕಾರ್ಯಪಡೆ ರಚಿಸಬೇಕು ಹಾಗೂ ಯೋಜನೆಯ ಅನಧಿಕೃತ ನೀರಿನ ಸಂಪರ್ಕಗಳನ್ನು ಕಡಿತಗೊಳಿಸಲು ನಿವೃತ್ತ ಯೋಧರನ್ನು ನೇಮಿಸಿಕೊಳ್ಳಬೇಕೆಂದು ಜನಪ್ರತಿನಿಧಿಗಳು ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಂಡರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡಬ್ಲ್ಯೂಎಸ್ಎಸ್ಬಿ) ಬೆಂಗಳೂರಿನ ಕೊಳಚೆ ನೀರನ್ನು ಸಮರ್ಪಕವಾಗಿ ಸಂಸ್ಕರಿಸದೆ ಹರಿಸುತ್ತಿರುವ ಬಗ್ಗೆ ಶಾಸಕರಾದ ಕೆ.ಆರ್.ರಮೇಶ್ಕುಮಾರ್, ಕೆ.ವೈ.ನಂಜೇಗೌಡ ಹಾಗೂ ಎಸ್.ಎನ್.ನಾರಾಯಣಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

‘ಕೆ.ಸಿ ವ್ಯಾಲಿ ನೀರನ್ನು ಅಕ್ರಮವಾಗಿ ಬಳಕೆ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಶೀಘ್ರವೇ ನಿವೃತ್ತ ಯೋಧರನ್ನು ನೇಮಿಸಿ ಜವಾಬ್ದಾರಿ ನೀಡಬೇಕು. ನಿವೃತ್ತ ಯೋಧರಿಗೆ ಪೊಲೀಸರು ಸಹಕಾರ ನೀಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಆದೇಶಿಸಿದರು.

‘ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗಾಗಿ ಕೆ.ಸಿ ವ್ಯಾಲಿ ಯೋಜನೆ ಜಾರಿಗೊಳಿಸಲಾಗಿದೆ. ಆದರೆ, ಕೆಲ ವ್ಯಕ್ತಿಗಳು ಯೋಜನೆ ನೀರನ್ನು ದುರ್ಬಳಕೆ ಮಾಡಿಕೊಳ್ಳುತ್ತಾ ಪಾಳೆಗಾರಿಕೆ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಇವರಿಗೆ ತಕ್ಕ ಪಾಠ ಕಲಿಸಬೇಕು’ ಎಂದು ರಮೇಶ್ಕುಮಾರ್ ಸಲಹೆ ನೀಡಿದರು.

‘ಬೆಂಗಳೂರಿನಲ್ಲಿ ಜನಸಂಖ್ಯೆ ಕಡಿಮೆಯಾಗಿಲ್ಲ, ನೀರಿನ ಬಳಕೆಯೂ ಕಡಿಮೆಯಾಗಿಲ್ಲ. ಬೆಂಗಳೂರಿನ ನೀರು ಎಲ್ಲಿ ಹೋಗುತ್ತದೆ? ಕೆ.ಸಿ ವ್ಯಾಲಿ 700 ಎಂಎಲ್ಡಿ ನೀರು ಹರಿಸುವ ಸಾಮರ್ಥ್ಯದ ಯೋಜನೆ ಎಂದು ಸಮಗ್ರ ಯೋಜನಾ ವರದಿಯಲ್ಲಿ ಹೇಳಲಾಗಿತ್ತು. ನಿಗದಿತ 440 ಎಂಎಲ್ಡಿ ನೀರು ನೀಡಲು ಸಾಧ್ಯವಾಗದೆ ಕೇವಲ 250 ಎಂಎಲ್ಡಿ ಮಾತ್ರ ಕೊಟ್ಟರೆ ಹೇಗೆ?’ ಎಂದು ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಿರ್ದಾಕ್ಷಿಣ್ಯ ಕ್ರಮ: ‘ಕೆಲವರು ಕೆ.ಸಿ ವ್ಯಾಲಿ ವ್ಯಾಪ್ತಿಯ ಕೆರೆ, ಕಾಲುವೆಗಳಿಗೆ ಪೈಪ್ಲೈನ್ ಹಾಕಿ ನೀರು ಮಾರಾಟ ಮಾಡುತ್ತಿದ್ದಾರೆ. ಇವರಿಗೆ ಕಡಿವಾಣ ಹಾಕುವುದು ಅನಿವಾರ್ಯ. ನೀರು ಕಳ್ಳರನ್ನು ಹಿಡಿದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ಉಳಿದವರಿಗೆ ಬುದ್ಧಿ ಬರುತ್ತದೆ. ಮಾರ್ಚ್ 24ರೊಳಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಒಳಗೊಂಡ ಕಾರ್ಯಪಡೆ ರಚಿಸಿ. ನೀರುಗಳ್ಳರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಿ’ ಎಂದು ಸೂಚಿಸಿದರು.

‘ಯೋಜನೆ ಕೇವಲ ಒಂದು ಹೋಬಳಿಗೆ ಸೀಮಿತಗೊಂಡಿದೆ. ಕೋಲಾರ ತಾಲ್ಲೂಕು ಬಿಟ್ಟು ಬೇರೆ ತಾಲ್ಲೂಕುಗಳ ಕೆರೆಗಳಿಗೆ ನೀರು ಹರಿದಿಲ್ಲ. ಮುಂದಿನ 2 ತಿಂಗಳಲ್ಲಿ 100 ಎಂಎಲ್ಡಿ ನೀರು ಹೆಚ್ಚಿಸಿದರೆ ಬೇಸಿಗೆ ಮುಗಿಯುವುದರೊಳಗೆ ಯೋಜನೆ ವ್ಯಾಪ್ತಿಯ ಅರ್ಧದಷ್ಟು ಕೆರೆಗಳಿಗೆ ನೀರು ಬರುತ್ತದೆ’ ಎಂದು ಸಲಹೆ ನೀಡಿದರು.

‘ಯೋಜನೆಯ ಉದ್ದೇಶದ ತಿಳಿಯದೆ ನೀರಾವರಿ ಹೋರಾಟಗಾರ ಆಂಜನೇಯರೆಡ್ಡಿ ನ್ಯಾಯಾಲಯಕ್ಕೆ ಹೋದ. ಅಲ್ಲಿ ದಂಡದ ಜತೆಗೆ ಛೀಮಾರಿ ಹಾಕಿಸಿಕೊಂಡ. ಆತ ವಿಜ್ಞಾನಿಗಳಿಗಿಂತ ದೊಡ್ಡ ಮೇಧಾವಿಯಂತೆ ವರ್ತಿಸಿದ’ ಎಂದು ವ್ಯಂಗ್ಯವಾಡಿದರು.

ಸರ್ಕಾರ ನಿಯಂತ್ರಿಸುತ್ತಿಲ್ಲ: ‘ಕೆಲ ವ್ಯಕ್ತಿಗಳು ಯೋಜನೆಯ ಮೂಲ ಉದ್ದೇಶ ಮರೆತು ನೀರನ್ನು ನೇರವಾಗಿ ಕೃಷಿಗೆ ಬಳಸುತ್ತಿದಾರೆ. ನೀರು ಯಾವಾಗ ಬರುತ್ತದೆ ಎಂದು ತಟ್ಟೆ ಇಟ್ಟುಕೊಂಡು ಕಾಯುತ್ತಿದ್ದೇವೆ. ಫುಲ್ ಮೀಲ್ಸ್ ಬದಲು ಚಿತ್ರಾನ್ನ ಕೊಟ್ಟು ಹಂಚಿಕೊಳ್ಳಿ ಎಂದರೆ ಹೇಗೆ? ನೀರು ಕಳ್ಳರ ಹಾವಳಿ ಹೆಚ್ಚಿದ್ದರೂ ಸರ್ಕಾರ ನಿಯಂತ್ರಿಸುತ್ತಿಲ್ಲ’ ಎಂದು ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಗುಡುಗಿದರು.

‘ಮಾಲೂರು ತಾಲ್ಲೂಕಿಗೆ ನಿಗದಿತ ಪ್ರಮಾಣದಲ್ಲಿ ನೀರು ಹರಿಸಬೇಕು. ಮಾಲೂರು ಭಾಗಕ್ಕೆ 240 ಎಂಎಲ್ಡಿ ನೀರು ಹರಿಯುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಆ ನೀರು ಎಲ್ಲಿಗೆ ಹೋಗುತ್ತಿದೆ. ಮಾಲೂರು ಕೆರೆಗಳು ತುಂಬಿ ಬಂಗಾರಪೇಟೆ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯುವುದು ಯಾವಾಗ?’ ಎಂದು ಶಾಸಕ ನಂಜೇಗೌಡ ಪ್ರಶ್ನಿಸಿದರು.

ಒಂದು ವರ್ಷ: ‘ಕೆಜಿಎಫ್ ಕ್ಷೇತ್ರದ ವ್ಯಾಪ್ತಿಯ ಬೇತಮಂಗಲ ಮತ್ತು ರಾಮಸಾಗರ ಕೆರೆಗೆ ಈ ವೇಳೆಗಾಗಲೇ ಕೆ.ಸಿ ವ್ಯಾಲಿ ನೀರು ಹರಿಯಬೇಕಿತ್ತು. ಆದರೆ, ಕೋಲಾರ ತಾಲ್ಲೂಕಿನ ಕೆರೆಗಳೇ ತುಂಬಿಲ್ಲ. ಇನ್ನು ನಮ್ಮ ಭಾಗದ ಕೆರೆಗಳು ತುಂಬಲು ಎಷ್ಟು ದಿನ ಬೇಕು?’ ಎಂದು ಶಾಸಕಿ ಎಂ.ರೂಪಕಲಾ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣ, ‘ಯೋಜನೆ ಆರಂಭಗೊಂಡ 600 ದಿನಗಳಲ್ಲಿ ಜಿಲ್ಲೆಗೆ 5.6 ಟಿಎಂಸಿ ನೀರು ಹರಿಯಬೇಕಿತ್ತು. ಬೇತಮಂಗಲ, ರಾಮಸಾಗರ ಕೆರೆಗೆ ನೀರು ಹರಿಯಲು ಇನ್ನೂ ಸುಮಾರು ಒಂದು ವರ್ಷ ಕಾಲಾವಕಾಶ ಬೇಕು’ ಎಂದು ತಿಳಿಸಿದರು.

ಪ್ರಕರಣ ಅನಿವಾರ್ಯ: ‘ಕೆ.ಸಿ ವ್ಯಾಲಿ ಯೋಜನೆ ಸಂಬಂಧ ಇತ್ತೀಚೆಗೆ ನಡೆದ ಸಣ್ಣ ನೀರಾವರಿ ಇಲಾಖೆ ಸಚಿವರ ಸಭೆಯಲ್ಲಿ 240 ಎಂಎಲ್ಡಿ ನೀರು ಹರಿಯುತ್ತಿರುವ ಬಗ್ಗೆ ಮಾಹಿತಿ ನೀಡಲಾಗಿದೆ. ನೀರಿನ ಅಕ್ರಮ ಬಳಕೆದಾರರ ವಿರುದ್ಧ ಪ್ರಕರಣ ದಾಖಲಿಸುವುದು ಅನಿವಾರ್ಯ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ.ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಕಾರ್ತಿಕ್ರೆಡ್ಡಿ, ಮಹಮ್ಮದ್ ಸುಜಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ, ಉಪ ವಿಭಾಗಾಧಿಕಾರಿ ವಿ.ಸೋಮಶೇಖರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.