ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

Published 5 ಮಾರ್ಚ್ 2024, 12:34 IST
Last Updated 5 ಮಾರ್ಚ್ 2024, 12:34 IST
ಅಕ್ಷರ ಗಾತ್ರ

ಕೋಲಾರ: ನಗರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್‌ ಹೆರಿಗೆಗೆ ಒಳಗಾಗಿದ್ದ ಬಾಣಂತಿ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.

ತಾಲ್ಲೂಕಿನ ಜಂಗಾಲಹಳ್ಳಿಯ ಜಿ.ಎಸ್‌. ಭವಾನಿ (26) ಮೃತ ಮಹಿಳೆ. ಅವರನ್ನು ಹೆರಿಗೆಗಾಗಿ ಸೋಮವಾರ ಬೆಳಿಗ್ಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಸಂಜೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ರಾತ್ರಿ ವೇಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ನರ್ಸ್‌ ಇಂಜೆಕ್ಷನ್‌ ನೀಡಿದ್ದಾರೆ. ಆದಾಗಿ ಕೆಲವೇ ನಿಮಿಷಗಳಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ ಮೃತಪಟ್ಟಿರುವುದು ಗೊತ್ತಾಗಿದೆ. ಅಲ್ಲದೇ, ಮಗುವಿನ ತಲೆಗೂ ಗಾಯವಾಗಿದೆ.

ಈ ಸಂಬಂಧ ಪತಿ ಆರ್‌. ಗೋಪಾಲ್‌ ಕೋಲಾರ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪತ್ನಿ ಸಾವಿಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.

‘ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಪತ್ನಿ ಮೃತಪಟ್ಟಿದ್ದಾಳೆ. ನರ್ಸ್‌ ಇಂಜೆಕ್ಷನ್‌ ನೀಡಿದ ಬಳಿಕ ಸಮಸ್ಯೆ ಬಿಗಡಾಯಿಸಿತು’ ಎಂದು ಗೋಪಾಲ್‌ ಕಣ್ಣೀರಿಟ್ಟರು.

‘ವೈದ್ಯರು ಸಿಸೇರಿಯನ್‌ ಹೆರಿಗೆ ಮಾಡಿ ಮಗು ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಮಗುವಿನ ತಲೆಗೆ ಏಟು ಬಿದ್ದು ಗಾಯವಾಗಿದೆ. ಸರಿಯಾಗಿ ಸಿಸೇರಿಯನ್‌ ಕೂಡ ಮಾಡಿಲ್ಲ’ ಎಂದು ದೂರಿದರು.

‘ಮಗು ಸರಿಯಾಗಿ ಕಣ್ಣು ಬಿಡುವ ಮುನ್ನವೇ ತಾಯಿ ಕಳೆದುಕೊಂಡಿದೆ’ ಎಂದು ಮಹಿಳೆಯ ಅತ್ತೆ ರತ್ನಮ್ಮ ಗೋಳಿಟ್ಟರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಸರ್ಜನ್‌ ಹಾಗೂ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯ ಡಾ.ಎಸ್‌.ಎನ್‌. ವಿಜಯಕುಮಾರ್, ‘ಆಸ್ಪತ್ರೆಯಲ್ಲಿ ಯಾರೂ ನಿರ್ಲಕ್ಷ್ಯ ವಹಿಸಿಲ್ಲ. ವಾರದಿಂದ 45 ಮಂದಿಗೆ ಹೆರಿಗೆಯಾಗಿದ್ದು, ಯಾರಿಗೂ ಯಾವುದೇ ಸಮಸ್ಯೆ ಆಗಿಲ್ಲ. ಈ ಮಹಿಳೆಯ ಸಾವಿಗೆ ಕಾರಣ ಏನೆಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ’ ಎಂದರು.

ಗೋಪಾಲ್ ಹಾಗೂ ಭವಾನಿ ಅವರದ್ದು ಪ್ರೇಮ ವಿವಾಹ. 10 ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದರು. ಮಹಿಳೆಯ ಅಂತ್ಯಕ್ರಿಯೆ ಜಂಗಾಲಹಳ್ಳಿಯಲ್ಲಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT