ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ವೈದ್ಯ ಪದ್ಧತಿ ಮರೆಯಬೇಡಿ: ಸಿ.ಎಸ್.ವೆಂಕಟೇಶ್

Last Updated 22 ಮೇ 2020, 15:03 IST
ಅಕ್ಷರ ಗಾತ್ರ

ಕೋಲಾರ: ‘ಭಾರತೀಯ ವೈದ್ಯ ಪದ್ಧತಿಗಳಾದ ಆಯುರ್ವೇದ, ಪ್ರಕೃತಿ ಚಿಕಿತ್ಸೆ, ಯುನಾನಿ ಹಾಗೂ ಹೋಮಿಯೋಪತಿಯು ರೋಗ ನಿಯಂತ್ರಣಕ್ಕೆ ಪರಿಣಾಮಕಾರಿ ಚಿಕಿತ್ಸೆಯಾಗಿವೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಅಭಿಪ್ರಾಯಪಟ್ಟರು.

ಆಯುಷ್ ಇಲಾಖೆಯು ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧ ಮಾತ್ರೆ ವಿತರಿಸಿ ಮಾತನಾಡಿ, ‘ಪೂರ್ವಜರು ಅನುಸರಿಸಿಕೊಂಡು ಬರುತ್ತಿದ್ದ ಚಿಕಿತ್ಸಾ ಪದ್ಧತಿ ಮರೆಯಬಾರದು. ಭಾರತೀಯ ವೈದ್ಯ ಪದ್ಧತಿಯಲ್ಲಿ ಅಡ್ದ ಪರಿಣಾಮವಿಲ್ಲ’ ಎಂದರು.

‘ಆಶಾ ಕಾರ್ಯಕರ್ತೆಯರು ಕೊರೊನಾ ಸೋಂಕಿನ ತಡೆಗೆ ಸೈನಿಕರಂತೆ ಹೋರಾಡುತ್ತಿದ್ದಾರೆ. ಸೋಂಕಿತರ ಪತ್ತೆ ಕಾರ್ಯದಲ್ಲಿ ನಿರತರಾಗಿರುವ ಅವರಿಗೆ ಬೇಗನೆ ಸೋಂಕು ತಗುಲುವ ಆತಂಕವಿದೆ. ಜೀವದ ಹಂಗು ತೊರೆದು ದೇಶ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರ ಆರೋಗ್ಯ ಮುಖ್ಯ. ಇವರಿಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧ ಮಾತ್ರೆ ಕೊಡುತ್ತಿರುವುದು ಶ್ಲಾಘನೀಯ’ ಎಂದು ಸ್ಮರಿಸಿದರು.

ಸಮಗ್ರ ವಿಜ್ಞಾನ: ‘ಆಯುರ್ವೇದ ರಸಾಯನ ಪ್ರಯೋಗದಲ್ಲಿ ಪ್ರಮುಖವಾಗಿರುವ ಚವನ್‌ ಪ್ರಾಶ್‌ ರೋಗ ನಿರೋಧಕ ಶಕ್ತಿ ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೋಮಿಯೋಪತಿ ಪದ್ಧತಿಯು ಹೋಲಿಕೆಯ ತತ್ವ ಆಧರಿಸಿದ ಸಮಗ್ರ ವಿಜ್ಞಾನವಾಗಿದೆ’ ಎಂದು ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ರಾಘವೇಂದ್ರ ಶೆಟ್ಟಿಗಾರ್ ಹೇಳಿದರು.

‘ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಹೋಮಿಯೋಪತಿ ಔಷಧಗಳನ್ನು ರೋಗ ನಿರೋಧಕವಾಗಿ ಎಚ್ಚರಿಕೆಯಿಂದ ಬಳಸುವ ಮೂಲಕ ಕೋವಿಡ್ ಪ್ರಕರಣ ಕಡಿಮೆ ಮಾಡಬಹುದು. ಜಿಲ್ಲೆಯಲ್ಲಿ ಆಯುಷ್ ವೈದ್ಯಕೀಯ ವಿಭಾಗವು ಉತ್ತಮ ಕೆಲಸ ಮಾಡುತ್ತಿದೆ. ಉಸಿರಾಟ ವ್ಯವಸ್ಥೆ ಹಾಳು ಮಾಡುವ ಕೊರೊನಾ ಸೋಂಕಿನಿಂದ ಪಾರಾಗಲು ರೋಗ ನಿರೋಧಕ ವಸ್ತುಗಳನ್ನು ಬಳಸಬೇಕು’ ಎಂದು ಸಲಹೆ ನೀಡಿದರು.

ಆಯುಷ್ ಇಲಾಖೆ ವೈದ್ಯಾಧಿಕಾರಿಗಳಾದ ಡಾ.ಉಮಾ, ಡಾ.ಕಮಲಾ, ಡಾ.ಸುಪರ್ಣ, ಡಾ.ನಾಗವಿದ್ಯಾ, ಬಸವರಾಜ್ ಅವರು ದೇಶಿ ವೈದ್ಯ ಪದ್ಧತಿ ಕುರಿತು ಮಾಹಿತಿ ನೀಡಿದರು. ಜಿ.ಪಂ ಉಪಾಧ್ಯಕ್ಷೆ ಯಶೋದಾ, ಸದಸ್ಯರಾದ ಅರುಣ್ ಪ್ರಸಾದ್, ತೂಪಲ್ಲಿ ನಾರಾಯಣಸ್ವಾಮಿ, ಅಶ್ವಿನಿ ಸಂಪಂಗಿ, ಶ್ರೀನಿವಾಸ್, ನಿರ್ಮಲಾ, ಉಷಾ, ಬಿ.ವಿ.ಮಹೇಶ್, ವಿ.ಎಸ್‌.ಅರವಿಂದ್‌ಕುಮಾರ್‌, ಗೀತಮ್ಮ, ಗೋವಿಂದಸ್ವಾಮಿ, ಸಿಇಒ ಎಚ್.ವಿ.ದರ್ಶನ್ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT