ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕ್ರಾಂತಿ ಸಡಗರಕ್ಕೆ ಎತ್ತುಗಳ ಬರ

ಗ್ರಾಮೀಣ ಜಗತ್ತಿನಿಂದ ಮರೆಯಾದ ಸಾಂಪ್ರದಾಯಿಕ ಕೃಷಿ ಪದ್ಧತಿ
Last Updated 14 ಜನವರಿ 2021, 3:00 IST
ಅಕ್ಷರ ಗಾತ್ರ

ಮುಳಬಾಗಿಲು: ಗ್ರಾಮೀಣ ಪ್ರದೇಶದಲ್ಲಿ ಎದ್ದುಲ ಪಂಡುಗ(ಎತ್ತುಗಳ ಹಬ್ಬ) ಎಂದು ಕರೆಯಲ್ಪಡುವ ಸಂಕ್ರಾಂತಿಯು ಸುಗ್ಗಿ ಹಬ್ಬ. ಸಾಂಪ್ರದಾಯಿಕ ಕೃಷಿ ಪದ್ಧತಿ ಮರೆಯಾದಂತೆ ದಿನದಿಂದ ದಿನಕ್ಕೆ ಇದು ಆಚರಣೆಯ ಮಹತ್ವ ಕಳೆದುಕೊಳ್ಳುತ್ತಿದೆ.

ಸುಮಾರು ಮೂವತೈದು ವರ್ಷಗಳ ಹಿಂದಿನ ಮಾತು. ಮುಳಬಾಗಿಲು ಪಟ್ಟಣವಾಗಿ ಬದಲಾಗುತ್ತಿದ್ದ ಸಮಯ. ಅಂದಿನ ಇಪ್ಪತ್ತು ಸಾವಿರ ಜನಸಂಖ್ಯೆಗೆ ಸುಮಾರು ಎರಡು ಸಾವಿರದ ಐನೂರು ಎತ್ತುಗಳಿದ್ದವು. ಈಗ ಪಟ್ಟಣದಲ್ಲಿ ಕೇವಲ ಐವತ್ತು ಎತ್ತುಗಳು ಮಾತ್ರ ಕಾಣಸಿಗುತ್ತವೆ.

ಹಾಲು ಉತ್ಪಾದನೆಗೆ ಸಾಕುವ ಹಸುಗಳನ್ನು ಸಂಕ್ರಾಂತಿ ಮೆರವಣಿಗೆಗೆ ಬಳಸುವುದು ಕಷ್ಟಕರ. ಇದು ಮೆರವಣಿಗೆಗೂ ಶೋಭೆ ತರುವುದಿಲ್ಲ. ಹಬ್ಬ ಆಚರಿಸಲೇ ಬೇಕು ಎನ್ನುವ ಕಾರಣದಿಂದಾಗಿ ಸಂಕ್ರಾಂತಿ ಹಬ್ಬದ ಆಚರಣೆ ಸಮಿತಿಯವರು ಎತ್ತುಗಳನ್ನು ಸಾಕಿರುವ ರೈತರನ್ನು ಕಾಡಿಬೇಡಿ ಮೆರವಣಿಗೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.

ಹವಾಮಾನ ವೈಪರೀತ್ಯದಿಂದಾಗಿ ಸುಗ್ಗಿಯ ಕಾಲಮಾನ ಬದಲಾಗಿದೆ. ಟ್ರ್ಯಾಕ್ಟರ್‌, ಟಿಲ್ಲರ್‌ಗಳು ಬಂದ ಮೇಲೆ ಮನೆಗಳಲ್ಲಿ ಎತ್ತುಗಳನ್ನು ಸಾಕುವವರ ಸಂಖ್ಯೆಯೂ ಕಡಿಮೆಯಾಗಿದೆ. ನಗರಕ್ಕೆ ಸಮೀಪದ ಕಸಬಾ ಹೋಬಳಿಯ ದೊಡ್ಡಬಂಡಹಳ್ಳಿ ಹಾಲುಮತಸ್ಥ ಜನಾಂಗದವರೇ ಇರುವ ಗ್ರಾಮ. ಸುಮಾರು ಮೂವತ್ತು ವರ್ಷಗಳ ಹಿಂದೆ ಈ ಗ್ರಾಮದ ಎಲ್ಲಾ ಎಂಬತ್ತು ಮನೆಯಲ್ಲಿಯೂ ಒಂದೊಂದು ಜೋಡಿ ಎತ್ತುಗಳಿದ್ದವು. ಇನ್ನು ಕೆಲವು ದೊಡ್ಡ ರೈತರ ಮನೆಗಳಲ್ಲಿ ಎರಡು ಜೋಡಿ ಎತ್ತುಗಳು ಕಾಣಸಿಗುತ್ತಿದ್ದವು.

‘ಈಗ ಗ್ರಾಮದಲ್ಲಿ ಎರಡು ಅಥವಾ ಮೂರು ಜೊತೆ ಎತ್ತುಗಳನ್ನು ಕಾಣಬಹುದು. ಇದಕ್ಕೆ ಕಾರಣ ಬಹುತೇಕ ರೈತರು ಟ್ರ್ಯಾಕ್ಟರ್, ಟಿಲ್ಲರ್‌ಗಳ ಮೊರೆ ಹೋಗಿ ಉಳುಮೆ ಮಾಡುತ್ತಿದ್ದಾರೆ’ ಎನ್ನುತ್ತಾರೆ ದೊಡ್ಡ ಬಂಡಹಳ್ಳಿಯ ಹೊಸಪ್ಪನವರ ನಾಗರಾಜ್.

ಎತ್ತುಗಳನ್ನು ಸಾಕಲು ರೈತರು ಮುಂದಾಗದಿರಲು ಮುಖ್ಯ ಕಾರಣ ಹೆಚ್ಚಿದ ಎತ್ತಿನ ಬೆಲೆ. ಸಾಕಾಣಿಕೆ ವೆಚ್ಚದೊಂದಿಗೆ ರೋಗರುಜಿನ ಎದುರಾದಾಗ ಚಿಕಿತ್ಸೆಗೆ ಅಲೆದಾಡಬೇಕಾದ ಸ್ಥಿತಿ ಇದೆ. ಹಾಲು ಕರೆಯುವ ಮಿಶ್ರತಳಿ ಹಸುಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಹಬ್ಬ ಮಾಡಬೇಕೆಂಬ ಕಾಟಾಚಾರಕ್ಕೆ ಈ ಹಸುಗಳಿಗೆ ಸಿಂಗರಿಸಲಾಗುತ್ತದೆ. ಗೊಬ್ಬಿಯಾಳುಗೆ ಬರುವ ಮಹಿಳೆಯರ ಸಂಖ್ಯೆ ಈಚಿನ ದಿನಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ.

ತಾಲ್ಲೂಕಿನ ಎನ್. ವಡ್ಡಹಳ್ಳಿ ಮುಂತಾದ ಕಡೆಗಳಿಂದ ನಗರಕ್ಕೆ ಕೆಲವು ಮಹಿಳೆಯರು ಗೊಬ್ಬಿಯಾಳು ಹಾಡುಗಳನ್ನು ಹಾಡಿಕೊಂಡು ಮನೆಗಳ ಬಳಿ ಬರುತ್ತಿದ್ದರು. ಹೀಗೆ ಬಂದವರಿಗೆ ಭತ್ತ ನೀಡುವ ಪದ್ಧತಿ ಇತ್ತು. ಇದು ಕ್ರಮೇಣ
ಮರೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT