ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಸುರಕ್ಷಿತ ಕೀಟನಾಶಕ ಬಳಸಿ: ಸಸ್ಯರೋಗ ವಿಜ್ಞಾನಿ ಡಿ.ಎಸ್.ಅಂಬಿಕಾ

Last Updated 3 ಸೆಪ್ಟೆಂಬರ್ 2020, 16:58 IST
ಅಕ್ಷರ ಗಾತ್ರ

ಕೋಲಾರ: ‘ಸುರಕ್ಷಿತ ಕೀಟನಾಶಕ ಬಳಕೆಯಿಂದ ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ಪರಿಸರವನ್ನು ಮಾಲಿನ್ಯದಿಂದ ದೂರವಿಡಬಹುದು’ ಎಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ರೋಗ ವಿಜ್ಞಾನಿ ಡಿ.ಎಸ್.ಅಂಬಿಕಾ ಅಭಿಪ್ರಾಯಪಟ್ಟರು.

ಕೀಟನಾಶಕಗಳ ಬಳಕೆ, ಸುರಕ್ಷತಾ ಕ್ರಮ ಮತ್ತು ಬೀಜೋಪಚಾರ ಕುರಿತು ಕೃಷಿ ಇಲಾಖೆ ಹಾಗೂ -ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಇಲ್ಲಿ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ‘ಅಸುರಕ್ಷಿತ ಕೀಟನಾಶಕ ಬಳಕೆಯಿಂದ ಹಲವು ಮಾರಣಾಂತಿಕ ರೋಗಗಳು ಬರುತ್ತವೆ. ಆದ ಕಾರಣ ರೈತರು ಸುರಕ್ಷಿತ ಕೀಟನಾಶಕಗಳನ್ನು ಬಳಕೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಮಾರುಕಟ್ಟೆಯಲ್ಲಿ ದೊರೆಯುವ ಕೀಟನಾಶಕಗಳನ್ನು ಸುರಕ್ಷಿತ ಕಿಟ್ ಧರಿಸಿ ಬೆಳೆಗಳಿಗೆ ಸಿಂಪಡಣೆ ಮಾಡಿದರೆ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ. ಜತೆಗೆ ಪರಿಸರ ಮಾಲಿನ್ಯ ತಡೆಗಟ್ಟಬಹುದು’ ಎಂದು ಕಿವಿಮಾತು ಹೇಳಿದರು.

‘ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ಸಲಹೆ ಪಡೆದು ರೈತರು ಸರಿಯಾದ ಪ್ರಮಾಣದಲ್ಲಿ ರಾಸಾಯನಿಕ ಬಳಕೆ ಮಾಡಿದರೆ ಬೆಳೆಗೂ ಹಾಗೂ ಪರಿಸರಕ್ಕೂ ಉತ್ತಮ. ಬಿತ್ತನೆಗೂ ಮುನ್ನ ಜೈವಿಕ ನಿಯಂತ್ರಕ ಅಥವಾ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಬೇಕು. ಇದರಿಂದ ಬೆಳೆಗಳಿಗೆ ರೋಗ ಬಾಧೆ ತಡೆಗಟ್ಟಿ ಹೆಚ್ಚು ಇಳುವರಿ ಪಡೆಯಲು ಸಹಾಯವಾಗುತ್ತದೆ’ ಎಂದು ಸಲಹೆ ನೀಡಿದರು.

‘ಹವಾಮಾನ ಮತ್ತು ಕಾಲಕ್ಕೆ ಅನುಗುಣವಾಗಿ ಬೆಳೆ ಪದ್ಧತಿ, ಸಮಗ್ರವಾಗಿ ಬೆಳೆ ನಿರ್ವಹಣೆ ಮಾಡಬೇಕು. ಬಹು ಬೆಳೆ ಪದ್ಧತಿ ಅನುಸರಿಸುವುದರಿಂದ ರೈತರು ಹೆಚ್ಚು ಲಾಭ ಗಳಿಸಬಹುದು. ರೈತರು ಅಂಗಡಿಗಳಲ್ಲಿ ಕೀಟನಾಶಕ ಖರೀದಿಸಿದಾಗ ತಪ್ಪದೇ ರಶೀದಿ ಪಡೆಯಬೇಕು. ಬೆಳೆ ಸಮೀಕ್ಷೆ ನೋಂದಣಿ ಮಾಡಿಸಬೇಕು’ ಎಂದು ಸಹಾಯಕ ಕೃಷಿ ನಿರ್ದೇಶಕ ಚಂದ್ರಪ್ಪ ಹೇಳಿದರು.

ಕೃಷಿ ಇಲಾಖೆ ಅಧಿಕಾರಿ ಸತೀಶ್ ಬೆಳೆ ಸಮೀಕ್ಷೆ ಆ್ಯಪ್‌ ಬಗ್ಗೆ ರೈತರಿಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಿದರು. 50ಕ್ಕೂ ಹೆಚ್ಚು ರೈತರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT