ಶುಕ್ರವಾರ, ಡಿಸೆಂಬರ್ 3, 2021
27 °C

ಪಾರಂಪರಿಕ ಕೃಷಿ ಪದ್ಧತಿ ಮರೆತ ರೈತರು: ಜಿಲ್ಲಾಧಿಕಾರಿ ಸೆಲ್ವಮಣಿ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ರೈತರು ಆಧುನಿಕ ಬೀಜ ಸಂಸ್ಕೃತಿ ಹಾಗೂ ರಾಸಾಯನಿಕ ಕೀಟನಾಶಕಗಳ ಅವಲಂಬಿತ ಕೃಷಿ ಪದ್ಧತಿ ಅನುಸರಿಸುತ್ತಾ ಪಾರಂಪರಿಕ ಕೃಷಿ ಪದ್ಧತಿ ಮರೆಯುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಕಳವಳ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಬುಡ್ಡಿದೀಪಾ ಪಾಠ ಶಾಲೆ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಕೊಂಡಿದ್ದ ಕಾರ್ಯಕ್ರಮದಲ್ಲಿ ರೈತ ಸಂಸ್ಕೃತಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ‘ಈ ನೆಲದ ಪಾರಂಪರಿಕ ಕೃಷಿ ಪದ್ಧತಿ ಬಗ್ಗೆ ಸ್ಥಳೀಯ ಸಾಂಪ್ರದಾಯಿಕ ಅಧ್ಯಯನ ನಡೆಸಿ ದಾಖಲು ಮಾಡುವ ಅಗತ್ಯವಿದೆ. ರೈತರು ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಬೇಕು’ ಎಂದು ಕಿವಿಮಾತು ಹೇಳಿದರು.

‘ಪೂರ್ವಜರು ಸಾವಿರಾರು ವರ್ಷಗಳಿಂದ ಸ್ಥಳೀಯ ಸಾಂಪ್ರದಾಯಿಕ ಜ್ಞಾನ ಆಧರಿಸಿದ ಕೃಷಿ ಮಾಡುತ್ತಿದ್ದರು. ರೈತರು ತಾವು ಬೆಳೆಯುವ ಪ್ರತಿ ಬೆಳೆಗೂ ಅವರದ್ದೇ ಆದ ಕೃಷಿ ಪದ್ಧತಿ ಅನುಸರಿಸುತ್ತಿದ್ದರು. ಇದು ಬೆಳೆ ನಾಶವಾಗದಂತೆ ಕಾಯುತ್ತಿತ್ತು. ರೈತರಿಗೆ ತಾವು ಬೆಳೆಯುವ ಬೆಳೆಗಳ ಪ್ರಯೋಜನದ ಬಗ್ಗೆ ಅರಿವಿದ್ದರೂ ಅದನ್ನು ದಾಖಲಿಸುತ್ತಿಲ್ಲ’ ಎಂದರು.

‘ನಮ್ಮ ನೆಲದಲ್ಲೇ ಬೆಳೆಯುವ ಅರಿಶಿಣ, ಭತ್ತ ಸೇರಿದಂತೆ ಬಹಳಷ್ಟು ಬೆಳೆಗಳ ಉಪಯೋಗದ ಬಗ್ಗೆ ವಿದೇಶಿಯರು ಅಧ್ಯಯನ ನಡೆಸಿ ಅದನ್ನು ದಾಖಲು ಮಾಡುವ ಮೂಲಕ ಆರ್ಥಿಕ ಹಕ್ಕುದಾರಿಕೆ ಪಡೆಯುತ್ತಿದ್ದಾರೆ. ವಿದೇಶಿಯರು ಇಂದಿಗೂ ನಮ್ಮ ನೆಲದ ಮೇಲೆ ಪ್ರಯೋಗ ನಡೆಸುತ್ತಿದ್ದಾರೆ. ಇನ್ನಾದರೂ ರೈತರು ಸ್ಥಳೀಯ ಕೃಷಿ ಜ್ಞಾನ ದಾಖಲಿಸುವ ಮೂಲಕ ಹಕ್ಕುದಾರಿಕೆ ಪಡೆಯುವುದು ಹಾಗೂ ಆರ್ಥಿಕ ಲಾಭ ಹೊಂದಲು ಅಣಿಯಾಗಬೇಕು’ ಎಂದು ಸಲಹೆ ನೀಡಿದರು.

‘ರೈತರು ಸಿದ್ಧ ಗೊಬ್ಬರ, ಬಿತ್ತನೆ ಬೀಜಗಳನ್ನೇ ಅವಲಂಬಿಸಿದ್ದಾರೆ. ಇದರಿಂದ ಹೊರಬಂದು ಆಧುನಿಕತೆ ಜತೆಗೆ ಪಾರಂಪರಿಕ ಕೃಷಿ ಜ್ಞಾನಭಂಡಾರ ವೃದ್ಧಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು. ರೈತ ಚಳವಳಿ ಇತಿಹಾಸದಲ್ಲಿ ಮೊದಲ ಬಾರಿಗೆ ಕೋಲಾರದಲ್ಲಿ ಆರಂಭಿಸಿರುವ ರೈತ ಸಂಸ್ಕೃತಿ ಅಧ್ಯಯನ ಕೇಂದ್ರ ರಾಜ್ಯ ಮತ್ತು ರಾಷ್ಟ್ರಕ್ಕೆ ಮಾದರಿಯಾಗಲಿ. ಉದಯೋನ್ಮುಖ ಕೃಷಿ ಅಧ್ಯಯನಕಾರರು, ವಿದ್ಯಾರ್ಥಿಗಳು, ರೈತರು ಇದರ ಸದುಪಯೋಗ ಪಡೆದು ಕೃಷಿಯಲ್ಲಿ ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡಲಿ’ ಎಂದು ಆಶಿಸಿದರು.

ಕೃಷಿಯಲ್ಲಿ ಯಶಸ್ಸು: ‘ಹಿಂದಿನ ಕೃಷಿ ಪದ್ಧತಿ ದಾಖಲೀಕರಣ ಮಾಡಲು, ರೈತರ ಸಮಸ್ಯೆಗಳನ್ನು ತಿಳಿಸುವ ಕಲಾ ಮಾಧ್ಯಮ, ಆಧುನಿಕ ಕೃಷಿ ಪದ್ಧತಿ ಅಧ್ಯಯನ ಮಾಡಲು ಕೃಷಿ ಸಂಸ್ಕೃತಿ ಕೇಂದ್ರದ ಅಗತ್ಯ. ಈ ಕಾರಣಕ್ಕೆ ಕೇಂದ್ರ ಆರಂಭಿಸಲಾಗಿದೆ. ರೈತರು ಇದರ ಸದುಪಯೋಗ ಪಡೆದು ಕೃಷಿಯಲ್ಲಿ ಯಶಸ್ಸು ಗಳಿಸಬೇಕು’ ಎಂದು ರೈತ ಸಂಘ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಹೇಳಿದರು.

ಸಾಹಿತಿಗಳಾದ ಕೋಟಿಗಾನಹಳ್ಳಿ ರಾಮಯ್ಯ, ಚಂದ್ರಶೇಖರ ನಂಗಲಿ, ಗೊಲ್ಲಹಳ್ಳಿ ಶಿವಪ್ರಸಾದ್, ರಂಗಕರ್ಮಿ ಸಿ.ಬಸವಲಿಂಗಯ್ಯ, ರೈತ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ಬೈಚೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆನಂದ್‌ಕುಮಾರ್‌, ವಕೀಲ ಸತೀಶ್‌ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು