ಮಂಗಳವಾರ, ಜೂನ್ 2, 2020
27 °C

ಗ್ರಾಮ ಪಂಚಾಯಿತಿ ಚುನಾವಣೆ | ಬಿಜೆಪಿ ಸರ್ಕಾರಕ್ಕೆ ಹಿನ್ನಡೆ ಭೀತಿ: ಅಹಮ್ಮದ್‌ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಬಿಜೆಪಿ ಸರ್ಕಾರವು ತನ್ನ ದುರಾಡಳಿತದಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂಬ ಭಯಕ್ಕೆ ಲಾಕ್‌ಡೌನ್‌ ನೆಪದಲ್ಲಿ ಗ್ರಾ.ಪಂಗಳಿಗೆ ಆಡಳಿತ ಸಮಿತಿ ರಚಿಸಲು ಮುಂದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಟೀಕಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬಿಜೆಪಿಯು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆ ರದ್ದುಗೊಳಿಸದಿದ್ದರೆ ರಾಜ್ಯದೆಲ್ಲೆಡೆ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಮೇ 31ರಂದು ನಡೆಯಬೇಕಿದ್ದ ಕೆಪಿಸಿಸಿ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಲಾಕ್‌ಡೌನ್‌ ಕಾರಣಕ್ಕೆ ಮುಂದೂಡಲಾಗಿದೆ. ಕಾಂಗ್ರೆಸ್‌ ತತ್ವ ಸಿದ್ಧಾಂತದ ಬಗ್ಗೆ ಜನರಿಗೆ ಬೂತ್‌ ಮಟ್ಟದಿಂದ ಅರಿವು ಮೂಡಿಸಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿ ಹೆಚ್ಚಿಸಲು ಪಕ್ಷದ ಎಲ್ಲಾ ನಾಯಕರು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಾರೆ’ ಎಂದರು.

‘ರಾಜ್ಯದಲ್ಲಿ ಬಂಡವಾಳಶಾಹಿಗಳ ಸರ್ಕಾರ ನಡೆಯುತ್ತಿದೆಯೇ ಹೊರತು ಜನಹಿತ ಸರ್ಕಾರ ನಡೆಯುತ್ತಿಲ್ಲ. ಪ್ರಧಾನಿ ಮೋದಿ ಅವರಿಗೆ ರಾಜಕೀಯವಾಗಿ ಬಂಡವಾಳ ಮಾಡಿಕೊಳ್ಳುವುದು ಮುಖ್ಯವಾಗಿದೆ’ ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದರು.

‘ರಾಹುಲ್‌ ಗಾಂಧಿ ಅವರು ದೇಶದಲ್ಲಿ ಕೊರೊನಾ ಸೋಂಕು ಭವಿಷ್ಯದಲ್ಲಿ ದೊಡ್ಡ ಬಿರುಗಾಳಿ ಸೃಷ್ಟಿಸುತ್ತದೆ ಎಂದು ಮುನ್ನೆಚ್ಚರಿಕೆ ಕೊಟ್ಟರು. ಆದರೆ, ಮೋದಿಯವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ರಾಜಕೀಯ ಲಾಭಕ್ಕಾಗಿ ಮಧ್ಯಪ್ರದೇಶದಲ್ಲಿ ಸರ್ಕಾರ ಕೆಡವಿದ್ದು ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರನ್ನು ಭಾರತಕ್ಕೆ ಕರೆಸಿ ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆಸಿದ್ದೇ ಮೋದಿಯವರ ಸಾಧನೆ’ ಎಂದು ಲೇವಡಿ ಮಾಡಿದರು.

ಕಾರ್ಮಿಕರು ಮೃತಪಟ್ಟರು: ‘ದೇಶದಲ್ಲಿ 2 ಕೋಟಿ ವಲಸೆ ಕಾರ್ಮಿಕರಿದ್ದು, ಕೇಂದ್ರವು ಇವರಿಗೆ ಲಾಕ್‌ಡೌನ್‌ ವೇಳೆ ಯಾವುದೇ ಸೌಕರ್ಯ ನೀಡಿಲ್ಲ. ವಲಸೆ ಕಾರ್ಮಿಕರು ತಮ್ಮ ರಾಜ್ಯಗಳಿಗೆ ಕಾಲ್ನಡಿಗೆಯಲ್ಲಿ ತೆರಳುವಾಗ ಸಾಕಷ್ಟು ಮಂದಿ ಮೃತಪಟ್ಟರು. ಸಮಸ್ಯೆ ಗಂಭೀರವಾದ ನಂತರ ಕೇಂದ್ರವು ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿತು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬಿಜೆಪಿ ಸರ್ಕಾರವು ಬಂಡವಾಳಶಾಹಿಗಳು ಮತ್ತು ಶ್ರೀಮಂತರ ಕೈಗೊಂಬೆಯಾಗಿದೆ. ಗುಜರಾತ್‌ನಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಸರ್ಕಾರ ನಿರ್ಲಕ್ಷ್ಯ ತೋರಿದ್ದು, ಅಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಕೇರಳ ರಾಜ್ಯವು ಕೊರೊನಾ ಸೋಂಕಿನ ನಿಯಂತ್ರಣದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಅಲ್ಲಿನ ಮಾದರಿ ಅನುಸರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ದೂರಿದರು.

‘ಕೊರೊನಾ ಹಿನ್ನೆಲೆಯಲ್ಲಿ ಕೇಂದ್ರವು ಘೋಷಿಸಿರುವ ₹ 20 ಲಕ್ಷ ಕೋಟಿಯ ಪ್ಯಾಕೇಜ್ ಜುಮ್ಲ. ಹಿಂದಿನ 6 ವರ್ಷಗಳಲ್ಲಿ ಘೋಷಿಸಿರುವ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದಿಲ್ಲ. ದೇಶದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಕುಸಿದಿದ್ದು, ಕೇಂದ್ರವು ಜನರ ಕಣ್ಣು ಹೊರೆಸುವ ಕೆಲಸ ಮಾಡುತ್ತಿದೆ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು