ಭಾನುವಾರ, ಜೂನ್ 20, 2021
21 °C
ನಗರಸಭೆ ಸ್ವಾಧೀನಕ್ಕೆ ಪಡೆಯುತ್ತೇವೆ: ಆಯುಕ್ತ ಶ್ರೀಕಾಂತ್‌ ಹೇಳಿಕೆ

ಅನಿಲ ಚಿತಾಗಾರ: ಬಳಕೆಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮುಜರಾಯಿ ಇಲಾಖೆಯು ನಿರ್ಮಿಸಿರುವ ಅನಿಲ ಚಿತಾಗಾರವನ್ನು ನಗರಸಭೆಯ ಸ್ವಾಧೀನಕ್ಕೆ ಪಡೆದು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ನಿರ್ಧರಿಸಲಾಗಿದೆ’ ಎಂದು ನಗರಸಭೆ ಆಯುಕ್ತ ಶ್ರೀಕಾಂತ್ ತಿಳಿಸಿದರು.

ನಗರದ ರಹಮತ್‌ನಗರ ಬಳಿಯ ಹಿಂದೂ ರುದ್ರಭೂಮಿಯಲ್ಲಿರುವ ಅನಿಲ ಚಿತಾಗಾರಕ್ಕೆ ನಗರಸಭಾ ಸದಸ್ಯರೊಂದಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ, ‘ಜಿಲ್ಲಾ ನಿರ್ಮಿತಿ ಕೇಂದ್ರವು ಸುಮಾರು ₹ 1.10 ವೆಚ್ಚದಲ್ಲಿ ಈ ಚಿತಾಗಾರ ನಿರ್ಮಿಸಿದೆ’ ಎಂದು ಹೇಳಿದರು.

‘ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳವಾಗಿರುವುದರಿಂದ ಜಿಲ್ಲಾ ಕೇಂದ್ರದಲ್ಲಿ ಅಂತ್ಯಕ್ರಿಯೆಗೆ ಸಮಸ್ಯೆಯಾಗಿದೆ. ಸ್ಮಶಾನಗಳಲ್ಲಿ ಜಾಗ ಇಲ್ಲವಾಗಿದೆ. ಹೀಗಾಗಿ ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಯು ಅನಿಲ ಚಿತಾಗಾರವನ್ನು ನಗರಸಭೆ ಸುಪರ್ದಿಗೆ ಪಡೆದು ಬಳಕೆಗೆ ಮುಕ್ತಗೊಳಿಸುವಂತೆ ಸೂಚಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಇತ್ತೀಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅನಿಲ ಚಿತಾಗಾರವನ್ನು ನಗರಸಭೆಯ ವಶಕ್ಕೆ ಪಡೆಯುವ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ. ಗ್ಯಾಸ್‌ ಸಿಲಿಂಡರ್‌, ಚಿತಾಗಾರದ ಸ್ವಚ್ಛತಾ ಕಾರ್ಯ, ಸಿಬ್ಬಂದಿ ವೇತನ ಸೇರಿದಂತೆ ಒಂದು ಶವ ಸುಡಲು ₹ 3,600 ದರ ನಿಗದಿಪಡಿಸಲು ನಿರ್ಧರಿಸಲಾಗಿದೆ’ ಎಂದು ವಿವರಿಸಿದರು.

ಪರಿಸರ ಸ್ನೇಹಿ: ‘ತಜ್ಞರ ತಾಂತ್ರಿಕ ಸಲಹೆಯಂತೆ ಆಧುನಿಕ ಶೈಲಿಯಲ್ಲಿ ವಿನ್ಯಾಸ ಮಾಡಿರುವ ಅನಿಲ ಚಿತಾಗಾರ ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಈ ಚಿತಾಗಾರದಲ್ಲಿ ಒಂದು ಶವ ಸುಡಲು ಕನಿಷ್ಠ 1 ತಾಸು ಬೇಕು. ಕಟ್ಟಿಗೆ ಅಥವಾ ಮರದ ತುಂಡುಗಳಲ್ಲಿ ಶವ ಸುಡಲು ಹೆಚ್ಚಿನ ಕಾಲಾವಕಾಶ ಬೇಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ವಿದ್ಯುತ್ ಚಿತಾಗಾರಕ್ಕೆ ನಿರಂತರ ವಿದ್ಯುತ್‌ ಪೂರೈಕೆ ಅತ್ಯಗತ್ಯ. ಶವ ಸುಡುವಾಗ ವಿದ್ಯುತ್‌ ಕಡಿತಗೊಂಡರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಆದರೆ, ಅನಿಲ ಚಿತಾಗಾರದಲ್ಲಿ ಈ ಕಿರಿಕಿರಿ ಇಲ್ಲ. ಮರದ ತುಂಡುಗಳು ಅಥವಾ ಕಟ್ಟಿಗೆಯಲ್ಲಿ ಶವ ಸುಡುವ ಕ್ರಮವು ದುಬಾರಿ ವೆಚ್ಚದ್ದು. ಈ ವಿಧಾನವು ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆರ್ಥಿಕ ಹೊರೆಯಾಗಿದೆ. ಅಲ್ಲದೇ, ಕಟ್ಟಿಗೆಯಲ್ಲಿ ಶವ ಸುಡುವುದರಿಂದ ಪರಿಸರ ಮಾಲಿನ್ಯವಾಗುತ್ತದೆ’ ಎಂದು ಹೇಳಿದರು.

‘ಸದ್ಯ ಶವ ಸುಡುವ ಕಾರ್ಯ ವಿಧಾನದ ಬಗ್ಗೆ ತರಬೇತಿ ಪಡೆದ ಸಿಬ್ಬಂದಿಯಿಲ್ಲ. ಚಿತಾಗಾರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ತರಬೇತಿಯ ಅಗತ್ಯವಿದ್ದು, ನಿರ್ಮಿತಿ ಕೇಂದ್ರದ ಅಧಿಕಾರಿಗಳು 2 ತಿಂಗಳು ತರಬೇತಿ ಕೊಡಿಸಲು ಒಪ್ಪಿದ್ದಾರೆ’ ಎಂದು ತಿಳಿಸಿದರು.

ಫಲಕ ಅಳವಡಿಕೆ: ‘ನಗರಸಭೆಯಿಂದ ದರ ನಿಗದಿಪಡಿಸಿ ಚಿತಾಗಾರದ ಬಳಿ ನಗರಸಭೆಯ ದೂರವಾಣಿ ಸಂಖ್ಯೆಯೊಂದಿಗೆ ಫಲಕ ಅಳವಡಿಸಲಾಗುತ್ತದೆ. ಸಂಸ್ಕಾರದ ಸಂದರ್ಭದಲ್ಲಿ ಸಮಸ್ಯೆಯಾದರೆ ನಾಗರೀಕರು ನಗರಸಭೆ ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು’ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.