ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀಶಕ್ತಿ ಸಂಘಗಳಿಗೆ ಅನುದಾನ ಸೌಲಭ್ಯ

ಸಮಾವೇಶದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್‌ ಭರವಸೆ
Last Updated 14 ಡಿಸೆಂಬರ್ 2019, 9:56 IST
ಅಕ್ಷರ ಗಾತ್ರ

ಕೋಲಾರ: ‘ಸ್ತ್ರೀಶಕ್ತಿ ಸಂಘಗಳಿಗೆ ಹಣಕಾಸಿನ ಕೊರತೆ ಆಗದಂತೆ ಜಿ.ಪಂ ಅನುದಾನದಲ್ಲಿ ಸೌಲಭ್ಯ ಕಲ್ಪಿಸಿಕೊಡಲು ಬದ್ಧ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್.ವೆಂಕಟೇಶ್ ಭರವಸೆ ನೀಡಿದರು.

ಜಿಲ್ಲಾಡಳಿತ, ಜಿ.ಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಜಿಲ್ಲಾ ಮಟ್ಟದ ಸಮಾವೇಶ, ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.

‘ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಸಾಲ ಮರು ಪಾವತಿಯಲ್ಲೂ ಸ್ತ್ರೀಶಕ್ತಿ ಸಂಘಗಳು ಬದ್ಧತೆ ತೋರುತ್ತಿವೆ. ಜಿಲ್ಲೆಯಲ್ಲಿ ಸಾಕಷ್ಟು ಸ್ತ್ರೀಶಕ್ತಿ ಸಂಘಗಳ ಸದಸ್ಯರು ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆದು ಸ್ವಂತ ಉದ್ದಿಮೆ ಆರಂಭಿಸಿದ್ದಾರೆ. ಆದಾಯೋತ್ಪನ್ನ ಚಟುವಟಿಕೆ ಕೈಗೊಂಡು ಆದಾಯ ಗಳಿಸಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಸದಸ್ಯರು ಮಹಿಳೆಯರಿಗೆ ಮಾದರಿ’ ಎಂದರು.

‘ಸ್ತ್ರೀಶಕ್ತಿ ಸಂಘಗಳು ರಚನೆಯಾದ ಆರಂಭದಲ್ಲಿ ಪುರುಷರು ಕುಟುಂಬ ಮಹಿಳೆಯರನ್ನು ಸಂಘಕ್ಕೆ ಕಳುಹಿಸಿಕೊಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದ್ದು, ಸಂಘಕ್ಕೆ ಸೇರಿದರೆ ತಮಗೂ ಅನುಕೂಲ ಆಗುತ್ತದೆ ಎಂದು ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಜಿ.ಪಂ ಉಪಾಧ್ಯಕ್ಷೆ ಯಶೋದಾ ಅಭಿಪ್ರಾಯಪಟ್ಟರು.

‘ಹೆಣ್ಣು ಮಾತು ತಪ್ಪುವುದಿಲ್ಲ. ಹೆಣ್ಣು ಬೆಂಕಿ ಇದ್ದಂತೆ. ತೆಲಂಗಾಣದಲ್ಲಿ ನಡೆದ ಪಶು ವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಒಂದೇ ವಾರದಲ್ಲಿ ಎನ್‌ಕೌಂಟರ್ ಮಾಡಿದ ಪೊಲೀಸರಿಗೆ ಧನ್ಯವಾದ ಹೇಳಬೇಕು. ಪೊಲೀಸರ ಈ ಕ್ರಮ ಮಹಿಳೆಯರಿಗೆ ನೀಡುವ ಗೌರವ ಸೂಚಿಸುತ್ತದೆ’ ಎಂದು ತಿಳಿಸಿದರು.

‘ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕೋಲಾರ ತಾಲ್ಲೂಕಿನ ಮೂರಾಂಡಹಳ್ಳಿಯ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮಮ್ಮ ಅನನ್ಯ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ. ಇದೇ ರೀತಿ ಮಹಿಳೆಯರು ತಮ್ಮ ಪ್ರತಿಭೆ ಪ್ರದರ್ಶಿಸಿ ಸಾಧನೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು.

ಜಾಗೃತರಾಗಿದ್ದಾರೆ: ‘ಅಭಿವೃದ್ಧಿ ಮತ್ತು ವಿನಾಶಕ್ಕೆ ಹೆಣ್ಣು ಕಾರಣ ಎಂಬುದು ರಾಮಾಯಣ, ಮಹಾಭಾರತದಿಂದ ಗೊತ್ತಾಗುತ್ತದೆ. ಸ್ತ್ರೀಶಕ್ತಿ ಸಂಘಗಳು ರಚನೆ ಆದಾಗ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನೆ ಮಾಡಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲೆಗೆ ಬಂದ ಮೇಲೆ ಮಹಿಳೆಯರಲ್ಲೂ ಆರ್ಥಿಕ ಚಿಂತನೆ ಹೆಚ್ಚಿತು. ಮಹಿಳೆಯರು ಎಲ್ಲಾ ವಿಚಾರದಲ್ಲೂ ಜಾಗೃತರಾಗಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ತಿಳಿಸಿದರು.

‘ಭಾರತವು ಜಾಗತಿಕವಾಗಿ ವಿಶೇಷ ಸ್ಥಾನಮಾನ ಪಡೆದಿದೆ. ತೆಲಂಗಾಣದಲ್ಲಿ ನಡೆದ ಪಶು ವೈದ್ಯ ಮೇಲಿನ ಅತ್ಯಾಚಾರ ಪ್ರಕರಣದಿಂದ ದೇಶವು ತಲೆ ತಗ್ಗಿಸುವಂತಾಗಿದೆ. ಮಹಿಳೆಯರ ಅಪೌಷ್ಟಿಕತೆ, ಗರ್ಭಿಣಿಯರ ಮತ್ತು ಮಕ್ಕಳ ಸಾವು ಮಾನವ ಅಭಿವೃದ್ಧಿ ಸೂಚ್ಯಂಕದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಪೌಷ್ಟಿತೆ ತಡೆಗಟ್ಟುವುದು ಅತಿ ಮುಖ್ಯ’ ಎಂದು ಸಲಹೆ ನೀಡಿದರು.

ಆತ್ಮವಿಶ್ವಾಸ ಮೂಡಿದೆ: ‘೨೦೦೦ದಲ್ಲಿ ಸ್ತ್ರೀಶಕ್ತಿ ಸಂಘಗಳು ಆರಂಭವಾದ ಮೇಲೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿದೆ. ಜತೆಗೆ ಮಹಿಳೆಯರ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಮಹಿಳೆ ದುಡಿಮೆ ಮಾಡಿ ಹಣ ಉಳಿತಾಯ ಮಾಡಬಲ್ಲವಳಾಗಿದ್ದಾಳೆ. ಮಹಿಳಾ ಚಳವಳಿಯೇ ಆರಂಭವಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜಿ ಪಾಲಿ ಅಭಿಪ್ರಾಯಪಟ್ಟರು.

‘ಜಿಲ್ಲೆಯಲ್ಲಿ ಸುಮಾರು 4 ಸಾವಿರ ಸ್ತ್ರೀಶಕ್ತಿ ಸಂಘಗಳಿವೆ. ಈ ಪೈಕಿ 3,331 ಸಂಘಗಳು ಬ್ಯಾಂಕ್‌ನಲ್ಲಿ ಆರ್ಥಿಕ ವ್ಯವಹಾರ ನಡೆಸುತ್ತಿವೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಾತೃವಂದನಾ ಯೋಜನೆಯಡಿ ಗರ್ಭಿಣಿಯರಿಗೆ ₹ 6 ಸಾವಿರ ಮತ್ತು ರಾಜ್ಯ ಸರ್ಕಾರದ ಮಾತೃಶ್ರೀ ಯೋಜನೆಯಡಿ ₹ 5 ಸಾವಿರ ನೀಡಲಾಗುತ್ತಿದೆ. ಜನನಿ ಸುರಕ್ಷಾ ಯೋಜನೆಯಡಿ ನೀಡುವ ಆರ್ಥಿಕ ಧನಸಹಾಯದ ಪ್ರಯೋಜನ ಪಡೆಯಬೇಕು’ ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಜಯದೇವಿ, ಅಭಿವೃದ್ಧಿ ಅಧಿಕಾರಿ ರೋಸಲಿನ್ ಸತ್ಯ, ಸಿಡಿಪಿಒಗಳಾದ ಕೆ.ರಮೇಶ್, ವಂಶಿಕೃಷ್ಣ, ಪ್ರಭಾವತಿ, ಜಿಲ್ಲಾ ಸಂಯೋಜಕ ವಿಶ್ವನಾಥ್, ಮಹಿಳಾ ಅಭಿವೃದ್ಧಿ ನಿಗಮದ ಅಧಿಕಾರಿ ಶೀಲಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT