ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ | ಗುರುಭವನ: ಒಂದು ಇಟ್ಟಿಗೆಯನ್ನೂ ಇಟ್ಟಿಲ್ಲ!

ಮತ್ತೊಂದು ವರ್ಷ ಭರವಸೆಯಲ್ಲೇ ಕಳೆದ ಹೋದ ಕಟ್ಟಡ ನಿರ್ಮಾಣ ವಿಚಾರ -ಇನ್ನೆಷ್ಟು ದಿನ ಕಾಯಬೇಕು?
Published : 5 ಸೆಪ್ಟೆಂಬರ್ 2024, 7:15 IST
Last Updated : 5 ಸೆಪ್ಟೆಂಬರ್ 2024, 7:15 IST
ಫಾಲೋ ಮಾಡಿ
Comments

ಕೋಲಾರ: ಈಗಾಗಲೇ ಏಳೆಂಟು ಬಾರಿ ಶಂಕುಸ್ಥಾಪನೆ ಕಂಡಿರುವ ಗುರುಭವನ ಕಟ್ಟಡ ನಿರ್ಮಾಣ ಕಾಮಗಾರಿ ಮತ್ತೊಂದು ವರ್ಷ ಭರವಸೆಯಲ್ಲೇ ಕಳೆದು ಹೋಗಿದೆ. ನಿಗದಿಪಡಿಸಿರುವ ಜಾಗ ಪಾಳುಬಿದ್ದಿದ್ದು, ಈ ವರೆಗೆ ಒಂದು ಇಟ್ಟಿಗೆಯನ್ನೂ ಕಂಡಿಲ್ಲ.

ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಗುರುಭವನ ನಿರ್ಮಾಣ ಮಾಡುವುದು 35 ವರ್ಷಗಳಿಂದ ಕನಸಾಗಿಯೇ ಉಳಿದಿದೆ. ಕಾಮಗಾರಿ ಆರಂಭವಾಗಲು ಇನ್ನೆಷ್ಟು ವರ್ಷ ಕಾಯಬೇಕು, ಮತ್ತೆಷ್ಟು ಬಾರಿ ಶಂಕುಸ್ಥಾಪನೆ ನೆರವೇರಬೇಕು ಎಂಬುದು ಶಿಕ್ಷಕರು ಹಾಗೂ ಸಾರ್ವಜನಿಕರ ಪ್ರಶ್ನೆ. 

ನಗರದಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಕಚೇರಿ ಪಕ್ಕದಲ್ಲಿ ಜಾಗ ನಿಗದಿಪಡಿಸಿದ್ದು, ಮಾರ್ಚ್‌ನಲ್ಲಿ ಜೆಸಿಬಿ ಮೂಲಕ ಅಡಿಪಾಯ ತೆಗೆಸಲು ಚಾಲನೆ ನೀಡಲಾಗಿತ್ತು. ಆದರೆ, ಈವರೆಗೆ ಯಾವುದೇ ರೀತಿಯ ಕಾಮಗಾರಿ ನಡೆದಿಲ್ಲ. ಶಿಕ್ಷಕರ ಸಂಘಟನೆಗಳಲ್ಲಿನ ಭಿನ್ನಾಭಿಪ್ರಾಯ, ಗುಂಪುಗಾರಿಕೆ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.‌ ಅಧಿಕಾರಿಗಳು ತಾಂತ್ರಿಕ ಅಡಚಣೆಯ ನೆಪ ಹೇಳುತ್ತಿದ್ದಾರೆ. ಹಣ ನೀಡಲಾಗಿದೆ ಎನ್ನುವ ಜನಪ್ರತಿನಿಧಿಗಳು ಕೂಡ ಪ್ರಗತಿ ಪರಿಶೀಲನೆ ನಡೆಸಿಲ್ಲ.

ಈ ಹಿಂದಿನ ಅಂದರೆ 2023ರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದವರೆಲ್ಲಾ ಗುರುಭವನ ಕಟ್ಟಡ ಕಾಮಗಾರಿ ಬಗ್ಗೆಯೇ ಮಾತನಾಡಿದ್ದರು.

‘ಎಸ್‌.ಮುನಿಸ್ವಾಮಿ (ಮಾಜಿ ಸಂಸದ), ವೈ.ಎ.ನಾರಾಯಣಸ್ವಾಮಿ (ವಿಧಾನ ಪರಿಷತ್‌ ಮಾಜಿ ಸದಸ್ಯ) ತಲಾ ₹ 50 ಲಕ್ಷ ನೀಡಿದ್ದಾರೆ. ಉಳಿದಂತೆ ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು ಹಾಗೂ ಎಂ.ಎಲ್‌.‌ಅನಿಲ್ ಕುಮಾರ್ ಇಬ್ಬರೂ ತಲಾ ₹ 25 ಲಕ್ಷ ನೀಡಬೇಕು. ‌ನಾನು ₹ 50 ಲಕ್ಷ ಕೊಡುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅವರಿಂದ ₹ 50 ಲಕ್ಷ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌ ಅವರಿಂದಲೂ ಹಣ ಕೊಡಿಸುವೆ. ಶಿಕ್ಷಕರು ಈ ವರ್ಷ ಹಾಗೂ ಮುಂದಿನ ‌ವರ್ಷದ ಒಂದು ದಿನದ ವೇತನ ಕೊಡಿ. ಶಿಕ್ಷಕರ ಕಲ್ಯಾಣ ನಿಧಿಯ ₹ 1 ಕೋಟಿ ಸೇರಿದಂತೆ ಎಲ್ಲಾ ಹಣ ಬಳಸಿಕೊಂಡು ಕಟ್ಟಡ ಕಾಮಗಾರಿ ಶೀಘ್ರ ಆರಂಭಿಸಲಾಗುವುದು’ ಎಂದು ಶಾಸಕ ಕೊತ್ತೂರು ಮಂಜುನಾಥ್‌ ಆಗ ಹೇಳಿದ್ದರು.

ಅದಾಗಿ ಒಂದು ವರ್ಷವಾಗಿದ್ದು, ಈಗ ಮತ್ತೊಂದು ಶಿಕ್ಷಕರ ದಿನಾಚರಣೆ ಎದುರು ಬಂದು ನಿಂತಿದೆ. ಗುರುವಾರ ಟಿ.ಚನ್ನಯ್ಯ ರಂಗಮಂದಿರದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಬಾರಿ ಶಾಸಕರು, ಶಿಕ್ಷಕರ ಸಂಘಟನೆಗಳ ಮುಖಂಡರು, ಸಂಬಂಧಪಟ್ಟ ಅಧಿಕಾರಿಗಳು ಏನು ಹೇಳುತ್ತಾರೆ, ಯಾವ ರೀತಿ ಭರವಸೆ ಕೊಡುತ್ತಾರೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ನೆಲೆಸಿದೆ.

ಪ್ರತಿ ಬಾರಿ ಶಿಕ್ಷಕರ ದಿನಾಚರಣೆಯಂದು ಈ ವಿಚಾರ ಪ್ರಸ್ತಾಪವಾಗುತ್ತದೆ. ಅದಾಗಿ ಒಂದೆರಡು ದಿನಗಳಲ್ಲಿ ಶಂಕುಸ್ಥಾಪನೆ ನೆರವೇರುತ್ತದೆ. ಈ ವರ್ಷದೊಳಗೆ ನಿರ್ಮಿಸಿ ಮುಂದಿನ ಶಿಕ್ಷಕರ ದಿನಾಚರಣೆಯನ್ನು ಗುರುಭವನದಲ್ಲೇ ನಡೆಸಬೇಕು ಎಂದು ಜನಪ್ರತಿನಿಧಿಗಳು ಹೇಳಿ ಕೈತೊಳೆದುಕೊಂಡು ಬಿಡುತ್ತಾರೆ.

ಸುಮಾರು ₹ 5 ಕೋಟಿ ವೆಚ್ಚದಲ್ಲಿ ಗುರುಭವನ ನಿರ್ಮಿಸುವ ಯೋಜನೆ ಇದೆ. ಅದಕ್ಕಾಗಿ ಜನಪ್ರತಿನಿಧಿಗಳು ತಮ್ಮ ಅನುದಾನ ಘೋಷಿಸಿದ್ದಾರೆ. ಶಿಕ್ಷಕರಿಂದಲೂ ಹಣ ಸಂಗ್ರಹಿಸಲಾಗಿದೆ. ಗುರುಭವನ ನಿರ್ಮಾಣದ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರು, ಡಿಡಿಪಿಐ ಸದಸ್ಯ ಕಾರ್ಯದರ್ಶಿ.

‘ಕಾಮಗಾರಿ ಆರಂಭಕ್ಕೆ ಸಿದ್ಧತೆ ನಡೆದಿದೆ. ಕೆಲ ತಾಂತ್ರಿಕ ಅಡಚಣೆ ಸರಿಪಡಿಸಿಕೊಂಡು ಕಾಮಗಾರಿ ಆರಂಭಿಸಲಾಗುವುದು’ ಎಂದು ಡಿಡಿಪಿಐ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಶಿಕ್ಷಕರ ಸಂಘಟನೆಗಳ ಆಂತರಿಕ ಭಿನ್ನಾಬಿಪ್ರಾಯದ ಕಾರಣ ಗುರುಭವನ ಕಾಮಗಾರಿ ಆರಂಭವಾಗುತ್ತಿಲ್ಲ. ಹಣಕ್ಕೇನೂ ಕೊರತೆ ಇಲ್ಲ. ಜನಪ್ರತಿನಿಧಿಗಳ ಬೆಂಬಲವೂ ಇದೆ.
ಇಂಚರ ಗೋವಿಂದರಾಜು, ವಿಧಾನ ಪರಿಷತ್‌ ಸದಸ್ಯ
ಜನಪ್ರತಿನಿಧಿಗಳಿಂದ ಅನುದಾನ ಸಂಗ್ರಹ ಮಾಡಿದ್ದು ಕ್ರೆಡೆಲ್‌ ಬಳಿ ಹಣವಿದೆ. ತಾಂತ್ರಿಕ ಸಮಸ್ಯೆ ಸರಿಪಡಿಸಿಕೊಂಡು ಇನ್ನೊಂದು ವಾರದಲ್ಲಿ ಕಾಮಗಾರಿ ಆರಂಭಿಸುತ್ತೇವೆ.
ಕೃಷ್ಣಮೂರ್ತಿ, ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT