ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಕ್ವ ಆರ್ಥಿಕ ನೀತಿಯಿಂದ ದೇಶದಲ್ಲಿ ಅರಾಜಕತೆ: ಶಾಸಕ ಕೆ.ಶ್ರೀನಿವಾಸಗೌಡ

ಕೇಂದ್ರ–ರಾಜ್ಯ ಸರ್ಕಾರದ ವಿರುದ್ಧ ಶಾಸಕ ಶ್ರೀನಿವಾಸಗೌಡ ಗುಡುಗು
Last Updated 1 ಮಾರ್ಚ್ 2021, 14:33 IST
ಅಕ್ಷರ ಗಾತ್ರ

ಕೋಲಾರ: ‘ತೈಲೋತ್ಪನ್ನಗಳು ಹಾಗೂ ಅಡುಗೆ ಅನಿಲದ ಬೆಲೆ ಏರಿಕೆಯಿಂದ ದೇಶದ ಜನ ತತ್ತರಿಸಿದ್ದಾರೆ. ಕೇಂದ್ರ ಸರ್ಕಾರದ ಅಪಕ್ವ ಆರ್ಥಿಕ ನೀತಿಗಳಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಗುಡುಗಿದರು.

ತಾಲ್ಲೂಕಿನ ಕೂಟೇರಿ, ಬೆಳ್ಳೂರು, ಹಾರ್ಜೇನಹಳ್ಳಿ ಹಾಗೂ ಹೊಗರಿ ಗ್ರಾಮದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ‘ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಖಜಾನೆಯಲ್ಲಿ ದುಡ್ಡಿಲ್ಲದಿದ್ದರೂ ಬಿಜೆಪಿ ಮುಖಂಡರು ಜನರಿಗೆ ಪೊಳ್ಳು ಭರವಸೆ ನೀಡುತ್ತಾ ಯಾಮಾರಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಪೆಟ್ರೋಲ್ ಬೆಲೆ ₹ 100ರ ಗಡಿ ದಾಟಲಿದೆ. ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ತೈಲೋತ್ಪನ್ನಗಳ ದರ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕು ಬರ್ಬರವಾಗಿದೆ. ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಜನರು ಉದ್ಯೋಗವಿಲ್ಲದೆ ಹಸಿವಿನಿಂದ ನರಳುತ್ತಿದ್ದಾರೆ’ ಎಂದು ಹೇಳಿದರು.

‘ರಸಗೊಬ್ಬರ, ಕೀಟನಾಶಕ ಸೇರಿದಂತೆ ಕೃಷಿ ಸಲಕರಣೆಗಳ ಮೇಲೆ ಕೃಷಿ ನಿರ್ವಹಣೆ ಕಷ್ಟವಾಗಿದೆ. ರೈತರು ಬೆಲೆ ಕುಸಿತ ಮತ್ತು ಬೆಳೆ ನಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರವು ಬಡ ಜನರು, ರೈತರು ಹಾಗೂ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸುವುದನ್ನು ಬಿಟ್ಟು ತೈಲೋತ್ಪನ್ನಗಳ ಬೆಲೆ ಹೆಚ್ಚಿಸುತ್ತಿರುವುದು ದುರಂತ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದ ಕಾರಣ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾಗಿದ್ದ ಹಣವನ್ನು ಸರ್ಕಾರ ಹಿಂಪಡೆದಿದೆ. ಇದರಿಂದ ಕಾಮಗಾರಿಗಳು ಅರ್ಧಕ್ಕೆ ಸ್ಥಗಿತಗೊಂಡಿವೆ. ಸರ್ಕಾರದ ಕಾಮಗಾರಿಗಳ ನಿರ್ವಹಣೆಗೆ ಗುತ್ತಿಗೆದಾರರು ಮುಂದೆ ಬರುತ್ತಿಲ್ಲ. ಸರ್ಕಾರದ ಕೂಡಲೇ ಕ್ರಮ ತೆಗೆದುಕೊಂಡು ಕಾಮಗಾರಿಗಳು ಅನುದಾನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ನೀರಿನ ಸಮಸ್ಯೆ: ‘ಬೇಸಿಗೆ ಆರಂಭವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಸಮಸ್ಯೆ ಕಂಡುಬಂದ ಕೂಡಲೇ ಅಧಿಕಾರಿಗಳು ಸ್ಪಂದಿಸಿ ಜನರಿಗೆ ನೀರು ಒದಗಿಸಬೇಕು. ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗಬಾರದು’ ಎಂದು ಸೂಚಿಸಿದರು.

‘ಕೆ.ಸಿ ವ್ಯಾಲಿ ಯೋಜನೆ ನೀರಿನಿಂದ ಕೋಲಾರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸಾಕಷ್ಟು ಕೆರೆಗಳು ಭರ್ತಿ ಆಗಿರುವುದರಿಂದ ಈ ಬಾರಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಗಂಭೀರವಾಗುವುದಿಲ್ಲ. ಆದರೆ, ಕೆಲವೆಡೆ ನೀರಿನ ಸಮಸ್ಯೆ ಆಗುವ ಸಾಧ್ಯತೆಯಿದೆ. ಮುಖ್ಯವಾಗಿ ಗ್ರಾಮೀಣ ಭಾಗದಲ್ಲಿ ನೀರಿನ ಸೌಕರ್ಯಕ್ಕೆ ಹೆಚ್ಚು ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.

‘ನೀರಿನ ಸಮಸ್ಯಾತ್ಮಕ ಗ್ರಾಮಗಳು ಮತ್ತು ವಾರ್ಡ್‌ಗಳನ್ನು ಗುರುತಿಸಿ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಬೇಕು. ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಕೊಡಬೇಕು. ವಿನಾಕಾರಣ ಹೊಸದಾಗಿ ಕೊಳವೆ ಬಾವಿ ಕೊರೆಸಿ ದುಂದು ವೆಚ್ಚ ಮಾಡಬಾರದು’ ಎಂದು ತಿಳಿಸಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ಜೆಡಿಎಸ್‌ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT