ಶುಕ್ರವಾರ, ಮಾರ್ಚ್ 5, 2021
28 °C
ಖಾತ್ರಿಯುಕ್ತ ಲಾಭದಾಯಕ ಬೆಲೆ ಹಕ್ಕು ಮಸೂದೆ ಜಾರಿಗೆ ಒತ್ತಾಯ

ಜಿಲ್ಲಾಡಳಿತ ಭವನದ ಎದುರು ಕೆಪಿಆರ್‌ಎಸ್‌ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೃಷಿ ಉತ್ಪನ್ನಗಳಿಗೆ ಖಾತ್ರಿಯುಕ್ತ ಲಾಭದಾಯಕ ಬೆಲೆ ಹಕ್ಕು ಮಸೂದೆ ಹಾಗೂ ರೈತರ ಸಾಲ ಮುಕ್ತಿ ಮಸೂದೆ- ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‌ಎಸ್‌) ಸದಸ್ಯರು ಇಲ್ಲಿ ಶನಿವಾರ ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಮತ್ತು ವಾಣಿಜ್ಯ ಸಂಸ್ಥೆಗಳ ಒತ್ತಡಕ್ಕೆ ಮಣಿದು ದೇಶವನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಅಡವಿಟ್ಟಿವೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರಗಳು ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದ ಲೂಟಿಕೋರ ನೀತಿ ಜಾರಿಗೊಳಿಸಿದ್ದು, ಇದರಿಂದ ದೇಶ ನಲುಗಿ ಹೋಗಿದೆ. ಈ ಅವೈಜ್ಞಾನಿಕ ಆರ್ಥಿಕ ನೀತಿಗಳು ದೇಶದ ಅಭಿವೃದ್ಧಿ ಹಾಗೂ ಕೃಷಿ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದರೂ ಸರ್ಕಾರಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಕೆಪಿಆರ್‌ಎಸ್‌ ರಾಜ್ಯ ಘಟಕದ ಅಧ್ಯಕ್ಷ ಜಿ.ಸಿ.ಬಯ್ಯಾರೆಡ್ಡಿ ಆರೋಪಿಸಿದರು.

‘ಲೂಟಿಕೋರ ಆರ್ಥಿಕ ನೀತಿಯಿಂದ ಕೃಷಿ ಕೂಲಿಕಾರರು, ಕಸುಬುದಾರರು ಮತ್ತು ದಲಿತರು ನೆಲೆ ಕಳೆದುಕೊಂಡು ಬೀದಿಗೆ ಬೀಳುತ್ತಿದ್ದಾರೆ. ಈ ಹಿಂದೆ ರೈತರು ಹಾಗೂ ಕೃಷಿಗೆ ನೀಡುತ್ತಿದ್ದ ಸಹಾಯಧನವನ್ನು ಬಹುತೇಕ ಕಡಿತಗೊಳಿಸಲಾಗಿದೆ. ಸರ್ಕಾರಗಳು ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಕೃಷಿ ಉಪಕರಣಗಳ ಬೆಲೆ ನಿಯಂತ್ರಿಸದೆ ಉತ್ಪಾದನಾ ಕಂಪನಿಗಳ ಹಿತ ಕಾಯುತ್ತಿವೆ’ ಎಂದು ಟೀಕಿಸಿದರು.

ಅಂಗೀಕರಿಸಿಲ್ಲ: ‘ಕೃಷಿ ಉತ್ಪನ್ನಗಳಿಗೆ ಖಾತ್ರಿಯುಕ್ತ ಲಾಭದಾಯಕ ಬೆಲೆ ಹಕ್ಕು ಮಸೂದೆ ಹಾಗೂ ರೈತರ ಸಾಲ ಮುಕ್ತಿ ಮಸೂದೆ ಜಾರಿಗೆ ಆಗ್ರಹಿಸಿ ಹಿಂದಿನ ಸರ್ಕಾರದ ಅವಧಿಯಲ್ಲೇ ಸಂಸತ್ತಿನಲ್ಲಿ ಖಾಸಗಿ ಮಸೂದೆ ಮಂಡಿಸಲಾಗಿತ್ತು. ಆದರೆ, ಈವರೆಗೂ ಮಸೂದೆ ಅಂಗೀಕರಿಸಿಲ್ಲ. 2ನೇ ಅವಧಿಗೆ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ಬಜೆಟ್‌ನಲ್ಲೂ ಈ ಮಸೂದೆಗಳ ವಿಚಾರ ಪ್ರಸ್ತಾಪಿಸಿಲ್ಲ’ ಎಂದು ಧರಣಿನಿರತರು ದೂರಿದರು.

‘ಕೇಂದ್ರವು ವಿವಿಧ ಬೆಳೆಗಳಿಗೆ ನಿಗದಿಪಡಿಸಿರುವ ಬೆಂಬಲ ಬೆಲೆ ಅವೈಜ್ಞಾನಿಕವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷವಾದರೂ ರೈತರ ಪರಿಸ್ಥಿತಿ ಸುಧಾರಿಸಿಲ್ಲ. ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಕೆಲಸ ಆಗಿಲ್ಲ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ನಿತ್ಯವೂ ರೈತರ ಆತ್ಮಹತ್ಯೆಗಳಾಗುತ್ತಿವೆ. ಇದಕ್ಕೆಲ್ಲಾ ಸರ್ಕಾರಗಳ ಹೊಣೆಗೇಡಿತನ ಕಾರಣ’ ಎಂದು ಕಿಡಿಕಾರಿದರು.

ಬಡ್ಡಿರಹಿತ ಸಾಲ: ‘ಕೃಷಿ ಉತ್ಪನ್ನಗಳ ಸಮಗ್ರ ಉತ್ಪಾದನಾ ವೆಚ್ಚಕ್ಕೆ ಸ್ವಾಮಿನಾಥನ್ ಆಯೋಗದ ಸಲಹೆಯಂತೆ ಶೇ 50ರಷ್ಟು ಲಾಭಾಂಶ ಸೇರಿಸಿದ ಕನಿಷ್ಠ ಬೆಂಬಲ ಬೆಲೆ ದೊರೆಯುವಂತೆ ಮಾಡಲು ಕಾಯ್ದೆ ಜಾರಿಗೆ ತರಬೇಕು. ರೈತರು, ಕೃಷಿ ಕೂಲಿಕಾರರು, ಸಣ್ಣ ಗೇಣಿದಾರರು ಮತ್ತು ಕಸಬುದಾರರಿಗೆ ಬ್ಯಾಂಕ್‌ಗಳು ಬಡ್ಡಿರಹಿತ ಸಾಲ ನೀಡಬೇಕು. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಸಾಲ ಮನ್ನಾ ಆಗುವಂತೆ ಕ್ರಮ ವಹಿಸುವ ಸಾಲ ನೀತಿಯಿರುವ ಋಣ ಮುಕ್ತ ಕಾಯ್ದೆ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಉದ್ಯೋಗ ಖಾತ್ರಿಯಡಿ ದುಡಿಯಲು ಕುಟುಂಬಗಳ ಸದಸ್ಯರಿಗೆ ನಗರ ಪ್ರದೇಶ ಸೇರಿದಂತೆ ಕನಿಷ್ಠ 200 ದಿನದ ಉದ್ಯೋಗ ನೀಡಬೇಕು. ಕೂಲಿ ಮೊತ್ತವನ್ನು ₹ 600ಕ್ಕೆ ಹೆಚ್ಚಿಸಬೇಕು. ಕಾಯಕ ಬಂಧುಗಳಿಗೆ ಹೆಚ್ಚುವರಿ ವೇತನ ನೀಡಬೇಕು. ಕೇರಳ ಸರ್ಕಾರ ಋಣ ಮುಕ್ತ ಕಾಯಿದೆ ಜಾರಿಗೊಳಿಸಿದ ಸಂದರ್ಭದಲ್ಲಿ ಸಾಲ ನೀಡಿದ ಸಂಸ್ಥೆಗಳಿಗೆ ಹಾಗೂ ವ್ಯಕ್ತಿಗಳಿಗೆ ಸರ್ಕಾರವೇ ಹಣ ಪಾವತಿಸಿತ್ತು. ದೇಶದೆಲ್ಲೆಡೆ ಅದೇ ಮಾದರಿ ಅನುಸರಿಸಬೇಕು’ ಎಂದು ಮನವಿ ಮಾಡಿದರು.

ಕೆಪಿಆರ್‌ಎಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್, ಪದಾಧಿಕಾರಿಗಳಾದ ಪಿ.ಶ್ರೀನಿವಾಸ್, ವಿ.ನಾರಾಯಣರೆಡ್ಡಿ, ನವೀನ್‌ಕುಮಾರ್, ಗಂಗಮ್ಮ, ಆರ್.ವೆಂಕಟೇಶ್, ದೇವರಾಜ್, ವೆಂಕಟಲಕ್ಷ್ಮಮ್ಮ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.