ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವು ನೀಗಿಸುವುದು ರೈತರ ಜವಾಬ್ದಾರಿ

ರೈತ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಹೇಳಿಕೆ
Last Updated 23 ಡಿಸೆಂಬರ್ 2019, 15:30 IST
ಅಕ್ಷರ ಗಾತ್ರ

ಕೋಲಾರ: ‘ದೇಶದ ಹಸಿವು ನೀಗಿಸುವ ಜವಾಬ್ದಾರಿ ರೈತರ ಮೇಲಿದ್ದು, ಅಗತ್ಯ ಆಹಾರ ಪದಾರ್ಥ ಬೆಳೆಯಲು ಒತ್ತು ನೀಡಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಕಿವಿಮಾತು ಹೇಳಿದರು.

ಇಲ್ಲಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ರೈತ ದಿನಾಚರಣೆಯಲ್ಲಿ ಮಾತನಾಡಿ, ‘ದೇಶದ ಅಭಿವೃದ್ಧಿಯಲ್ಲಿ ರೈತರು ಪ್ರಮುಖ ಪಾತ್ರ ವಹಿಸುತ್ತಾರೆ. ರೈತರು ಸಂಕಷ್ಟದ ನಡುವೆಯೂ ಆಹಾರ ಉತ್ಪಾದನೆ ಮಾಡುವುದು ಶ್ಲಾಘನೀಯ’ ಎಂದು ಸ್ಮರಿಸಿದರು.

‘ಸರ್ಕಾರಗಳು ರೈತರ ಸಬಲೀಕರಣಕ್ಕಾಗಿ ಅನೇಕ ಯೋಜನೆ ಜಾರಿಗೆ ತಂದಿವೆ. ಜಿಲ್ಲಾಡಳಿತ ಈ ಯೋಜನೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಕೆಲ ರೈತರು ಅಪನಂಬಿಕೆಯಿಂದ ಬೆಳೆ ವಿಮೆ ಮಾಡಿಸದಿರುವುದು ವಿಷಾದಕರ’ ಎಂದು ಕಳವಳ ವ್ಯಕ್ತಪಡಿಸಿದರು.

‘ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರೈತರು ಬಿತ್ತನೆ ಮಾಡಿರುವ ಬೆಳೆ ನಷ್ಟವಾದರೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಫಸಲ್ ಭೀಮಾ ಯೋಜನೆ ಜಾರಿಗೆ ತಂದಿದೆ. ಆದರೆ, ಈ ಯೋಜನೆಗೆ ರೈತರು ನಿರೀಕ್ಷಿತ ಮಟ್ಟದಲ್ಲಿ ಹೆಸರು ನೋಂದಾಯಿಸುತ್ತಿಲ್ಲ’ ಎಂದು ವಿಷಾದಿಸಿದರು.

‘ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಒಂದು ಎಕರೆಗೆ ವರ್ಷಕ್ಕೆ ಕೇಂದ್ರ ಸರ್ಕಾರದಿಂದ ₹ 6 ಸಾವಿರ ಹಾಗೂ ರಾಜ್ಯ ಸರ್ಕಾರದಿಂದ ₹ 4 ಸಾವಿರ ಪ್ರೋತ್ಸಾಹಧನ ಪಾವತಿಸಲಾಗುತ್ತಿದೆ. ಬಾಕಿ ಇರುವ ರೈತರಿಗೆ ಹೆಸರು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಗ್ರಾಮ ಪಂಚಾಯಿತಿ ಕಚೇರಿ, ಸೇವಾ ಕೇಂದ್ರ ಹಾಗೂ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಾಯಿಸಬೇಕು’ ಎಂದು ಹೇಳಿದರು.

ಅಂತರ್ಜಲ ಸುಧಾರಣೆ: ‘ಜಿಲ್ಲೆಯ ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿದು ಬರುತ್ತಿದ್ದು, ನೀರು ಬತ್ತಿದ್ದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ. ಇದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ರೈತರು ಕೆರೆಯಿಂದ ಅಥವಾ ಕಾಲುವೆಯಿಂದ ಕೃಷಿಗೆ ನೇರವಾಗಿ ನೀರು ಬಳಕೆ ಮಾಡಬಾರದು’ ಎಂದು ಮನವಿ ಮಾಡಿದರು.

‘ಜಿಲ್ಲೆಯ ರೈತರು ಹಲವು ವರ್ಷಗಳಿಂದ ಅನುಭವಿಸುತ್ತಿದ್ದ ಪಿ ನಂಬರ್‌ ಸಮಸ್ಯೆ ಬಗೆಹರಿಸಲು ಆಂದೋಲನ ಹಮ್ಮಿಕೊಂಡಿದ್ದು, ಈಗಾಗಲೇ ತಾಲ್ಲೂಕುವಾರು ಪಿ ನಂಬರ್ ಒಗ್ಗೂಡಿಸುವ ಕೆಲಸ ಶುರುವಾಗಿದೆ. ಕಾಲಮಿತಿಯೊಳಗೆ ಪೋಡಿ ಮಾಡಿ ರೈತರಿಗೆ ದಾಖಲೆಪತ್ರ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

ಬೆಂಬಲ ಬೆಲೆ: ‘ರೈತರು ಬೆಳೆದಿರುವ ರಾಗಿಗೆ ಇಲಾಖೆಯಿಂದ ಕ್ವಿಂಟಾಲ್‌ಗೆ ₹ 3,150 ಬೆಂಬಲ ಬೆಲೆ ಕೊಟ್ಟು ಖರೀದಿ ಮಾಡಲಾಗುವುದು. ರೈತರು ಬೆಂಬಲ ಬೆಲೆಯ ಪ್ರಯೋಜನ ಪಡೆಯಬೇಕು’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಸಲಹೆ ನೀಡಿದರು.

ತೋಟಗಾರಿಕೆ ಮಹಾವಿದ್ಯಾಲಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಮಂಜುನಾಥ್‌ಗೌಡ, ಡೀನ್ ಪ್ರೊ.ಪ್ರಕಾಶ್, ಎಪಿಎಂಸಿ ಅಧ್ಯಕ್ಷ ಡಿ.ಎಲ್.ನಾಗರಾಜ್, ಕೃಷಿಕ ಸಮಾಜ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಪ್ರೊ.ತುಳಸಿರಾಮ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT