ಕೋಲಾರ: ಜೆಡಿಎಸ್ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಸ್ಥಾನಕ್ಕೆ ಅಂಜುಮನ್ ಎ ಇಸ್ಲಾಮಿಯಾ ಸಂಸ್ಥೆ ಅಧ್ಯಕ್ಷ ಕೆ.ಎಂ.ಜಮೀರ್ ಅಹಮ್ಮದ್ ರಾಜೀನಾಮೆ ಘೋಷಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನಾನು ಈವರೆಗೆ ಜೆಡಿಎಸ್ ಪಕ್ಷಕ್ಕೆ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆದರೆ, ಮುಂಬರುವ ಲೋಕಸಭಾ ಚುನಾವಣೆಗೆ ಅವರು ಕೋಮುವಾದಿ ಬಿಜೆಪಿಗೆ ಬೆಂಬಲ ನೀಡಿರುವುದು ನನಗೆ ಬೇಸರ ಉಂಟು ಮಾಡಿದೆ. ಜೆಡಿಎಸ್ ಜಾತ್ಯತೀತ ಪಕ್ಷ. ಹೀಗಾಗಿ, ಕೋಮುವಾದಿ ಪಕ್ಷದ ಜೊತೆ ಸೇರುವುದು ನಮಗೆ ಇಷ್ಟವಿಲ್ಲ. ಬಿಜೆಪಿ ಜೊತೆ ಸೇರುವ ಮುನ್ನ ಅಲ್ಪಸಂಖ್ಯಾತರ ನಾಯಕರೊಂದಿಗೆ ಚರ್ಚೆಯನ್ನೂ ನಡೆಸಿಲ್ಲ. ಹೀಗಾಗಿ, ಜೆಡಿಎಸ್ ಪಕ್ಷ ನನಗೆ ನೀಡಿದ್ದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದರು.
‘ಜೆಡಿಎಸ್ ಪಕ್ಷದ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ನನಗೆ ಬಹಳ ವರ್ಷಗಳಿಂದ ಪರಿಚಯ. ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಸ್ಥಾನ ನೀಡಿದರು. ಅವರು ನಮ್ಮ ಅಂಜುಮನ್ ಎ ಇಸ್ಲಾಮಿಯಾ ಸಂಸ್ಥೆಗೆ 56 ಎಕರೆ ಜಮೀನು ನೀಡಿದ್ದಾರೆ. ಅದರಲ್ಲಿ ಎಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜು, ಹೆಣ್ಣು ಮಕ್ಕಳಿಗೆ ಕಾಲೇಜು ನಿರ್ಮಿಸುವ ಉದ್ದೇಶವಿತ್ತು. ಎಚ್.ಡಿ.ಕುಮಾರಸ್ವಾಮಿ ಜೊತೆಗೆ ಕೂಡ ಮಾತನಾಡಿಸಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಜೆಡಿಎಸ್ ಸರ್ಕಾರ ರಚಿಸಲಿದ್ದು, ತಮಗೆ ಬೆಂಬಲ ನೀಡಬೇಕೆಂದು ಕೋರಿದ್ದರು. ಅದರಂತೆ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಕೆಲಸ ಮಾಡಿದೆವು. ಆದರೆ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಕಡಿಮೆ ಸ್ಥಾನಗಳು ಬಂದವು’ ಎಂದು ಹೇಳಿದರು.
‘ನಾನು ಹುಟ್ಟಿನಿಂದಲೂ ಕಾಂಗ್ರೆಸ್ ಪಕ್ಷದವನು. ಆದರೆ, ಮತ್ತೆ ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರವನ್ನು ಇನ್ನೂ ಮಾಡಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚಿಸುತ್ತೇನೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.