ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಲಾರ| ಮುನಿಸು ಬಿಟ್ಟ ಮುನಿಯಪ್ಪ: ಸಿದ್ದರಾಮಯ್ಯ ನಿರಾಳ

ರಮೇಶ್‌ ಕುಮಾರ್‌–ಕೆಎಚ್‌ಎಂ ಬೆಂಬಲಿಗರ ಒಂದುಗೂಡಿಸಲು ಪ್ರಯತ್ನ
Published : 21 ಫೆಬ್ರುವರಿ 2023, 5:43 IST
ಫಾಲೋ ಮಾಡಿ
Comments

ಕೋಲಾರ: ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿರುವ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಆರಂಭಿಕ ದಿನಗಳಲ್ಲಿ ಮುನಿಸಿಕೊಂಡಿದ್ದ ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಈಗ ಏಕಾಏಕಿ ಹೊಗಳಿಕೆಯ ಮಾತನ್ನಾಡುತ್ತಿದ್ದಾರೆ. ಇದು ಕಾಂಗ್ರೆಸ್‌ ಶಾಸಕಾಂಗ ‍ಪಕ್ಷದ ನಾಯಕನಿಗೆ ಮತ್ತಷ್ಟು ಬಲ ತುಂಬಿದೆ.

ಶಾಸಕ ಕೆ.ಆರ್‌. ರಮೇಶ್‌ ಕುಮಾರ್‌ ಹಾಗೂ ಮುನಿಯಪ್ಪ ಬೆಂಬಲಿಗರ ನಡುವಿನ ಮುನಿಸು ತುಸು ಶಮನವಾಗಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದ್ದು, ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಮೇಶ್‌ ಕುಮಾರ್‌ ಬೆಂಬಲಿಗರಿಗೆ ಹೆಚ್ಚು ಮಣೆ ಹಾಕುತ್ತಿದ್ದಕ್ಕೆ ಆರಂಭಿಕ ದಿನಗಳಲ್ಲಿ ಮುನಿಯಪ್ಪ ಹಾಗೂ ಅವರ ಬೆಂಬಲಿಗರು ತಕರಾರು ಎತ್ತಿದ್ದರು. ಸಭೆ, ಸಮಾರಂಭಗಳಲ್ಲಿ ಭಿನ್ನಾಭಿಪ್ರಾಯ ಎದ್ದು ಕಾಣುತಿತ್ತು.

ಈ ಬೆನ್ನಲ್ಲೇ ಸಿದ್ದರಾಮಯ್ಯ ಎರಡು ಬಾರಿ ಮುನಿಯಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಜನವರಿ 9ರಂದು ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡುವ ಮುನ್ನ ಬೆಂಗಳೂರಿನ ಮುನಿಯಪ್ಪ ನಿವಾಸಕ್ಕೆ ತೆರಳಿದ್ದರು. ‌ಕೆಲ ದಿನಗಳ ಹಿಂದೆ ಮುನಿಯಪ್ಪ ಅವರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಚರ್ಚಿಸಿದ್ದಾರೆ.

ಆ ಬಳಿಕ ಸಿದ್ದರಾಮಯ್ಯ ಅವರನ್ನು ಹೊಗಳಲು ಆರಂಭಿಸಿದ್ದಾರೆ. ಕೋಲಾರದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಹಾಗೂ ವೇಮಗಲ್‌ನಲ್ಲಿ ನಡೆದ ರೈತ ಮಹಿಳಾ ಸಮಾವೇಶದಲ್ಲಿ ಎರಡೂ ಬಣದವರು ವೇದಿಕೆ ಹಂಚಿಕೊಂಡಿರುವುದು ಅದಕ್ಕೆ ಸಾಕ್ಷಿ.

‘ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುತ್ತಿರುವುದು ನಮ್ಮ ಅದೃಷ್ಟ‌. ಅವರ ಸ್ಪರ್ಧೆಯಿಂದ ಬಯಲುಸೀಮೆಗೆ ಅನುಕೂಲವಾಗಲಿದೆ. ನಾನು ಸಂಪೂರ್ಣ ಬೆಂಬಲ‌ ನೀಡುತ್ತೇನೆ’ ಎಂಬುದಾಗಿ ಮುನಿಯಪ್ಪ ಹೇಳಿದ್ದಾರೆ.

ಸಿದ್ದರಾಮಯ್ಯ ಭೇಟಿ ಹಾಗೂ ಮುನಿಯಪ್ಪ ಅವರ ಹೊಗಳಿಕೆ ಹಿಂದೆ ರಾಜಕೀಯ ಲಾಭ–ನಷ್ಟದ ಲೆಕ್ಕಾಚಾರಗಳು ಇವೆ ಎಂದು ವಿಶ್ಲೇಷಿಸಲಾಗುತ್ತಿದೆ. ಪರಸ್ಪರ ಕೊಡು–ಕೊಳ್ಳುವಿಕೆಯ ಒಪ್ಪಂದ ಏರ್ಪಟ್ಟಿರುವಂತಿದೆ.

ದಲಿತರೇ ಅಧಿಕ ಸಂಖ್ಯೆಯಲ್ಲಿರುವ ಈ ಜಿಲ್ಲೆಯಲ್ಲಿ ಮುನಿಯಪ್ಪ ಬೆಂಬಲವಿಲ್ಲದೆ ಆರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಅಸಾಧ್ಯ ಎಂಬುದನ್ನು ಚೆನ್ನಾಗಿ ಅರಿತಿರುವ ಸಿದ್ದರಾಮಯ್ಯ ಖುದ್ದಾಗಿ ಎರಡು ಬಣಗಳನ್ನು ಒಂದು ಗೂಡಿಸಲು ಕೈ ಹಾಕಿದ್ದಾರೆ. ಜೊತೆಗೆ ಶಾಸಕರನ್ನು ಎದುರು ಹಾಕಿಕೊಂಡಿದ್ದರಿಂದಲೇ 2019ರ ಲೋಕಸಭೆ ಚುನಾವಣೆಯಲ್ಲಿ ತಮಗೆ ಸೋಲುಂಟಾಯಿತು ಎಂಬ ಅರಿವು ಮುನಿಯಪ್ಪ ಅವರಿಗಿದೆ.

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಹೊಂದಿರುವ ಮುನಿಯಪ್ಪ ಅರ್ಜಿ ಸಲ್ಲಿಸಿದ್ದು, ಕ್ಷೇತ್ರ ನಮೂದಿಸಿಲ್ಲ. ದೇವನಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅವರ ಪುತ್ರಿ ರೂಪಕಲಾ ಈಗಾಗಲೇ ಕೆಜಿಎಫ್‌ನಲ್ಲಿ ಹಾಲಿ ಶಾಸಕಿಯಾಗಿದ್ದು, ಮತ್ತೆ ಸ್ಪರ್ಧಿಸುವುದು ಖಚಿತ.

ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಜಿಲ್ಲೆಯ ಕೆಲಸ ಶಾಸಕರು, ಮುಖಂಡರು ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣರಾದವರು ಎಂಬ ಸಿಟ್ಟು ಮುನಿಯಪ್ಪ ಅವರಿಗೆ ಇನ್ನೂ ಇದೆ. ಸಮಾವೇಶಗಳಲ್ಲಿ ರಮೇಶ್‌ ಕುಮಾರ್‌ ಜೊತೆ ವೇದಿಕೆ ಹಂಚಿಕೊಂಡರೂ ಪರಸ್ಪರ ಮಾತನಾಡಿರಲಿಲ್ಲ. ಆದರೆ, ಈಚೆಗೆ ರಮೇಶ್‌ ಕುಮಾರ್‌ ಪತ್ನಿ ನಿಧನರಾದಾಗ ಶ್ರೀನಿವಾಸಪುರಕ್ಕೆ ತೆರಳಿ ಸಾಂತ್ವನ ಹೇಳಿದ್ದಾರೆ. ಈ ಭೇಟಿ ಮಾನವೀಯ ನೆಲೆಯಲ್ಲಿದ್ದರೂ ರಾಜಕೀಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.

‘ರಾಜಕೀಯದಲ್ಲಿ ಮುನಿಸು ಸಹಜ. ಪಕ್ಷದ ಹಿತಕ್ಕಾಗಿ ಭಿನ್ನಾಭಿಪ್ರಾಯ ಬದಿಗಿಟ್ಟು ಕೆಲಸ ಮಾಡಬೇಕಾಗುತ್ತದೆ. ರಾಜಿಯಾಗುವುದರಲ್ಲಿ ಸಾರ್ವಜನಿಕ, ಪಕ್ಷ ಹಾಗೂ ತಮ್ಮ ಹಿತವೂ ಅಡಗಿರುತ್ತದೆ’ ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ವಿ.ಆರ್‌.ಸುದರ್ಶನ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT