ಭಾನುವಾರ, ಏಪ್ರಿಲ್ 2, 2023
23 °C
ಕಾಂಗ್ರೆಸ್‌ ಸಿಎಲ್‌ಪಿ ನಾಯಕರ ಕಟ್ಟಿಹಾಕಲು ಬಿಜೆಪಿ, ಜೆಡಿಎಸ್‌ನಿಂದ ‘ಚಕ್ರವ್ಯೂಹ’ ರಚನೆ

Karnataka Elections | ಕೋಲಾರ: ಸಿದ್ದರಾಮಯ್ಯ ಮಣಿಸಲು ‘ವಿವಿಧಾಸ್ತ್ರ’ ಪ್ರಯೋಗ!

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಕೋಲಾರದಲ್ಲೇ ಸ್ಪರ್ಧೆ ಮಾಡುವುದಾಗಿ ಘೋಷಿಸಿರುವ ಸಿದ್ದರಾಮಯ್ಯ ಅವರತ್ತ ಕ್ಷೇತ್ರದಲ್ಲಿ ನಿತ್ಯ ‘ವಿವಿಧಾಸ್ತ್ರ’ ಪ್ರಯೋಗ ನಡೆಯುತ್ತಿದ್ದು, ಇಡೀ ರಾಜ್ಯದ ಚಿತ್ತವೆಲ್ಲಾ ಈ ಕ್ಷೇತ್ರದತ್ತ ನೆಟ್ಟಿದೆ. 

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌, ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಸೇರಿದಂತೆ ಪ್ರಮುಖ ನಾಯಕರು ಕೋಲಾರಕ್ಕೆ ಭೇಟಿ ನೀಡುತ್ತಾ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರನ್ನು ಕಟ್ಟಿ ಹಾಕಲು ‘ಚಕ್ರವ್ಯೂಹ’ ರಚಿಸಿಸುತ್ತಿದ್ದಾರೆ. ತಂತ್ರ, ಪ್ರತಿತಂತ್ರದಿಂದಾಗಿ ಚುನಾವಣೆ ಘೋಷಣೆಗೆ ಮುನ್ನವೇ ಕೋಲಾರದ ಅಖಾಡ ರಂಗೇರಿದೆ.

ಕುರುಬ ಸಂಘದಲ್ಲಿ ಭಿನ್ನಾಭಿಪ್ರಾಯ: ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುವ ವಿಚಾರವಾಗಿ ಜಿಲ್ಲಾ ಕುರುಬರ ಸಂಘದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಸಂಘದ ಪದಾಧಿಕಾರಿಗಳ ನಡುವೆಯೇ ಮಾತಿನ ಚಕಮಕಿ ನಡೆಯುತ್ತಿದೆ. ಸಂಘದ ಅಧ್ಯಕ್ಷ ತಂಬಹಳ್ಳಿ ಮುನಿಯಪ್ಪ ಬಿಜೆಪಿ ಟಿಕೆಟ್‌ ಆಕಾಂಕ್ಷಿ ವರ್ತೂರು ಪ್ರಕಾಶ್‌ ಅವರನ್ನು ಬೆಂಬಲಿಸಿದರೆ, ಕಾರ್ಯಾಧ್ಯಕ್ಷ ಜೆ.ಕೆ.ಜಯರಾಂ ಕಾಂಗ್ರೆಸ್‌ಗೂ, ಮಾಜಿ ನಿರ್ದೇಶಕ ಕೆ.ಟಿ.ಅಶೋಕ್‌ ಜೆಡಿಎಸ್‌ಗೂ ಬಹಿರಂಗವಾಗಿ ಬೆಂಬಲ ಘೋಷಿಸಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಕರಪತ್ರ: ಇದರ ನಡುವೆ ಪರಿಶಿಷ್ಟ ಜಾತಿ, ಪಂಗಡದ ಕೆಲ ಮುಖಂಡರು ಸಿದ್ದರಾಮಯ್ಯ ವಿರುದ್ಧ ‘ದಲಿತ ಮತದಾರರ ಜಾಗೃತಿ ಅಭಿಯಾನ’ ಆರಂಭಿಸಿ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಕರಪತ್ರ ಹಂಚುತ್ತಿದ್ದಾರೆ. ‘ಕಾಂಗ್ರೆಸ್‌ ಗೆದ್ದರೆ ದಲಿತರಿಗೆ ಮುಖ್ಯಮಂತ್ರಿ ಪಟ್ಟ ನೀಡಬೇಕು’ ಎಂಬ ಆಗ್ರಹದ ದಾಳ ಹರಿಬಿಟ್ಟಿದ್ದಾರೆ. ಇದರ ಹಿಂದೆಯೂ ಎದುರಾಳಿ ಪಕ್ಷಗಳ ಕೈವಾಡವಿದೆ ಎಂಬ ಆರೋಪವೂ ಕೇಳಿಬಂದಿದೆ.

ವರ್ತೂರು ಹೊಗಳಿದ ಇಬ್ರಾಹಿಂ: ಈ ಮಧ್ಯೆ, ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಈಚೆಗೆ ಕೋಲಾರಕ್ಕೆ ಭೇಟಿ ನೀಡಿ ಬಿಜೆಪಿಯ ವರ್ತೂರು ಪ್ರಕಾಶ್‌ ಅವರನ್ನು ಹೊಗಳಿರುವ ಹಿಂದೆ ಹಲವಾರು ಸಾಧ್ಯತೆಗಳ ಹುಡುಕಾಟ ನಡೆದಿದೆ. ಈ ನಡೆಯು 2018ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಮಾದರಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ನಡುವೆ ಒಳಒಪ್ಪಂದ ಏರ್ಪಟ್ಟಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ. ಆದರೆ, ಈ ಸಾಧ್ಯತೆಯನ್ನು ಜೆಡಿಎಸ್‌ ಹಾಗೂ ಬಿಜೆಪಿ ಕಡ್ಡಿಮುರಿದಂತೆ ಅಲ್ಲಗಳೆದಿವೆ.

‘ಬಿಜೆಪಿ ರಾಷ್ಟ್ರೀಯ ಪಕ್ಷ. ಕೋಲಾರ ಕ್ಷೇತ್ರದಲ್ಲಿ ಗೆಲ್ಲಲು ನಮ್ಮ ಶಕ್ತಿ, ಸರ್ಕಾರದ ಯೋಜನೆಯೇ ಸಾಕು. ಯಾರ ಜೊತೆ ಒಳ ಒಪ್ಪಂದ ನಮಗೆ ಬೇಕಿಲ್ಲ. ಜೆಡಿಎಸ್‌ ಸಹಾಯದ ಅವಶ್ಯಕತೆಯೂ ಇಲ್ಲ. ನಮ್ಮ ಸರ್ಕಾರದ ಯೋಜನೆ ಮೆಚ್ಚಿ ಜೆಡಿಎಸ್‌ ಮುಖಂಡ ಇಬ್ರಾಹಿಂ ಹೊಗಳಿದ್ದಾರೆ ಅಷ್ಟೆ. ಸಿದ್ದರಾಮಯ್ಯ ಅವರ ಸೋಲು ಖಚಿತ’ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ.ಕೆ.ಎನ್‌.ವೇಣುಗೋಪಾಲ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಬಣನಕಹಳ್ಳಿ ನಟರಾಜ್‌, ‘ಕಾಂಗ್ರೆಸ್‌ ಪಕ್ಷವನ್ನು ಕೋಲಾರ ಕ್ಷೇತ್ರದಲ್ಲಿ ದುರ್ಬಿನ್‌ ಹಾಕಿಕೊಂಡು ಹುಡುಕಬೇಕು. ಬಿಜೆಪಿ ಒಮ್ಮೆಯೂ ಗೆದ್ದಿಲ್ಲ. ಗೆಲ್ಲುವ ಅವಕಾಶ ನಮಗಿರುವಾಗ ನಾವ್ಯಾಕೇ ಬಿಜೆಪಿ ಜೊತೆ ಒಳಒಪ್ಪಂದ ಮಾಡಿಕೊಳ್ಳಬೇಕು’ ಎಂದು ಪ್ರಶ್ನಿಸಿದರು.

ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಲಕ್ಷ್ಮಿನಾರಾಯಣ, ‘ಸಿದ್ದರಾಮಯ್ಯ ರಾಜ್ಯಮಟ್ಟದ ನಾಯಕ. ಜೊತೆಗೆ ಅಹಿಂದ ನಾಯಕ. ಹೀಗಾಗಿ, ಎದುರಾಳಿಗಳ ಹೊಂದಾಣಿಕೆಗೆ ಭಯಪಡುವ ಅಗತ್ಯವಿಲ್ಲ. ಒಂದು ಲಕ್ಷ ಮತಗಳ ಅಂತರದಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರೆ. ಜಿಲ್ಲಾ ಕಾಂಗ್ರೆಸ್‌ ಒಗ್ಗಟ್ಟಾಗಿದೆ’ ಎಂದರು.

ಮುನಿಯಪ್ಪ ಬಣ ಮೌನ: ಈ ನಡುವೆ, ಕೆ.ಎಚ್‌.ಮುನಿಯಪ್ಪ ಬಣದ ಸದಸ್ಯರು ಕ್ಷೇತ್ರದಲ್ಲಿ ಇನ್ನೂ ಸಕ್ರಿಯವಾಗಿ ತೊಡಗಿಸಿಕೊಂಡಿಲ್ಲ. ಕೆ.ಆರ್‌.ರಮೇಶ್‌ ಕುಮಾರ್‌ ಬಣದಿಂದ ಅಂತರ ಕಾಯ್ದುಕೊಂಡು ಮೌನಕ್ಕೆ ಶರಣಾಗಿದ್ದಾರೆ. ರಮೇಶ್‌ ಕುಮಾರ್‌ ಬೆಂಬಲಿಗರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಸ್ವಾಗತಿಸಲು ‘ಪ್ರಜಾಧ್ವನಿ’ ವೇದಿಕೆ ನಿರ್ಮಿಸಲು ಹುರುಪಿನಿಂದ ಓಡಾಡುತ್ತಿದ್ದಾರೆ.

ವಿರೋಧಿಗಳ ದಾರಿ ತಪ್ಪಿಸಲು ತಂತ್ರವೇ?

ಚುನಾವಣೆಗೆ ಇನ್ನೂ 3–4 ತಿಂಗಳು ಇರುವಂತೆ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಘೋಷಣೆ ಮಾಡಿರುವುದರ ಹಿಂದೆ ವಿರೋಧಿಗಳ ದಾರಿ ತಪ್ಪಿಸುವ ತಂತ್ರಗಾರಿಕೆ ಅಡಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಬಿಜೆಪಿ ಹಾಗೂ ಜೆಡಿಎಸ್‌ನ ಮುಖಂಡರು ಸದ್ಯ ಕೋಲಾರ ಕ್ಷೇತ್ರದ ಬಗ್ಗೆಯೇ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಸಂಬಂಧವೇ ಪ್ರಶ್ನೆಗಳು ತೂರಿಬರುತ್ತಿವೆ. ಬಹುತೇಕ ಮುಖಂಡರು ಕೋಲಾರಕ್ಕೆ ಭೇಟಿ ನೀಡುತ್ತಿದ್ದಾರೆ.

‘ಎದುರಾಳಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಕೋಲಾರ ಕ್ಷೇತ್ರದತ್ತ ಗಮನ ಹರಿಯುವಂತೆ ಮಾಡುವುದು ಸಿದ್ದರಾಮಯ್ಯ ಯೋಜನೆ. ಅದೀಗ ನಿಜವಾಗುತ್ತಿದೆ. ಇಲ್ಲದಿದ್ದರೆ ನಾಲ್ಕು ತಿಂಗಳ ಮುನ್ನವೇ ಅವರು ಕ್ಷೇತ್ರ ಘೋಷಿಸುತ್ತಿರಲಿಲ್ಲ. ಕೊನೆ ಕ್ಷಣದಲ್ಲಿ ಸಿದ್ದರಾಮಯ್ಯ ವರುಣಾದಿಂದ ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ’ ಎಂಬ ಮಾತು ಕಾಂಗ್ರೆಸ್‌ ಪಾಳಯದಲ್ಲೇ ಕೇಳಿಬರುತ್ತಿದೆ.

ಸಂತೋಷ್‌ ತಂತ್ರಗಾರಿಕೆ!

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಈಚೆಗೆ ಕೋಲಾರಕ್ಕೆ ಭೇಟಿ ನೀಡಿದ ವೇಳೆ ಪಕ್ಷದ ಸ್ಥಳೀಯ ಮುಖಂಡರ ಜೊತೆ ಗುಪ್ತವಾಗಿ ಮಾತುಕತೆ ನಡೆಸಿ, ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವ ತಂತ್ರಗಾರಿಕೆ ಹೇಳಿಕೊಟ್ಟು ಹೋಗಿರುವುದು ಗೊತ್ತಾಗಿದೆ.

ನಗರದ ಹೊರವಲಯದ ರತ್ನ ಕಲ್ಯಾಣ ಮಂಟಪದ ಕೊಠಡಿಯಲ್ಲಿ ಅಂದು ಸಚಿವ ಮುನಿರತ್ನ, ಸಂಸದ ಮುನಿಯಪ್ಪ ಸೇರಿದಂತೆ ಜಿಲ್ಲಾ ಕೋರ್‌ ಸಮಿತಿ ಸದಸ್ಯರನ್ನು ಕರೆದು ಗುಟ್ಟಾಗಿ ಚರ್ಚಿಸಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು