ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್ಇಪಿ ತಿರಸ್ಕರಿಸಿ: ಎಸ್ಎಫ್ಐ ಪಾರ್ಲಿಮೆಂಟ್ ಚಲೋ

Published 6 ಜನವರಿ 2024, 15:45 IST
Last Updated 6 ಜನವರಿ 2024, 15:45 IST
ಅಕ್ಷರ ಗಾತ್ರ

ಕೋಲಾರ: ‘ದೇಶವನ್ನು ರಕ್ಷಿಸಿ ಬಿಜೆಪಿ ತಿರಸ್ಕರಿಸಿ’ ಘೋಷಣೆಯಡಿ ಎಸ್ಎಫ್ಐ ಹಾಗೂ ಜಾತ್ಯತೀತ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಜ.12ರಂದು ಪಾರ್ಲಿಮೆಂಟ್ ಚಲೋ ಕಾರ್ಯಕ್ರಮ ಕುರಿತು ಪೋಸ್ಟರ್‌ಗಳನ್ನು ಎಸ್‌ಎಫ್‌ಐ ವಿದ್ಯಾರ್ಥಿನಿಯರ ಉಪಸಮಿತಿಯಿಂದ ನಗರದಲ್ಲಿ ಬಿಡುಗಡೆ ಮಾಡಲಾಯಿತು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಅಂಬ್ಲಿಕಲ್ ಎನ್.ಶಿವಪ್ಪ ಮಾತನಾಡಿ, ‘ಶಿಕ್ಷಣದ ಖಾಸಗೀಕರಣ, ವಾಣಿಜ್ಯೀಕರಣದ ಮತ್ತು ಕೇಂದ್ರೀಕರಣವನ್ನು ನಿಲ್ಲಿಸಬೇಕು. ಸ್ನಾತಕೋತ್ತರ ಹಂತದವರೆಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡುವ ಕಾಯ್ದೆ ಜಾರಿಗೊಳಿಸಬೇಕು. ಸರ್ವರಿಗೂ ಶಿಕ್ಷಣ ಹಾಗೂ ಉದ್ಯೋಗ ಖಾತರಿಪಡಿಸಲು ರಾಷ್ಟ್ರೀಯ ಉದ್ಯೋಗ ಖಾತರಿ ಕಾಯ್ದೆ ರೂಪಿಸಲು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

‘ದೇಶದ ಅಭಿವೃದ್ಧಿಗೆ ಸರ್ವರಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಒದಗಿಸಬೇಕು. ಪ್ರತಿ ವರ್ಷವೂ ಶಿಕ್ಷಣದ ಬಜೆಟ್ ಶೇ 3ರಷ್ಟು ಮಾತ್ರ ಮೀಸಲಿಡಲಾಗುತ್ತಿದೆ. ಇದು ಸಾಲುವುದಿಲ್ಲ. ಕನಿಷ್ಠ ಶೇ 20ರಷ್ಟನ್ನು ಶಿಕ್ಷಣಕ್ಕೆ ಮೀಸಲಿಡಬೇಕು. ಪ್ರತಿ ವರ್ಷ ಸುಮಾರು ಎರಡು ಲಕ್ಷ ಉದ್ಯೋಗ ಸೃಷ್ಟಿ ಮಾಡಲಾಗುವುದೆಂದು ಹೇಳಿದ್ದ ಪ್ರಧಾನಿ ಮೋದಿ ಈಗ ಆ ಬಗ್ಗೆ ಮಾತನಾಡುತ್ತಿಲ್ಲ’ ಎಂದರು.

‘ದೇಶದಲ್ಲಿ ಹೊಸ ಶಿಕ್ಷಣ ನೀತಿ, 2020ರ ನೀಟ್ ಮತ್ತು ಇತ್ತೀಚೆಗೆ ಜಾರಿಗೆ ತಂದ ಸಾಮಾನ್ಯ ವಿಶ್ವವಿದ್ಯಾಲಯ ಕಾಯ್ದೆಯನ್ನು ರದ್ದುಗೊಳಿಸಬೇಕು. ಹಾಸ್ಟೆಲ್‌ಗಳ ಸಂಖ್ಯೆ ಹೆಚ್ಚಿಸಬೇಕು. ನಿಯಮಿತವಾಗಿ ವಿದ್ಯಾರ್ಥಿ ವೇತನ, ಫೆಲೋಶಿಪ್‌ ನೀಡಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಇತರ ಸರ್ಕಾರಿ ವಲಯಗಳಲ್ಲಿ ಖಾಲಿ ಇರುವ ಶಿಕ್ಷಕರ ಮತ್ತು ಉಪನ್ಯಾಸಕರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ನಿರುದ್ಯೋಗಿಗಳಿಗೆ ಕನಿಷ್ಠ ₹ 5 ಸಾವಿರ ಮಾಸಿಕ ನಿರುದ್ಯೋಗ ಭತ್ಯೆ ನೀಡಬೇಕು ಎಂಬ ಬೇಡಿಕೆಗಳ ಈಡೇರಿಕೆಗೆ ಪಾರ್ಲಿಮೆಂಟ್ ಚಲೋ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಈ ವೇಳೆ ಎಸ್‌ಎಫ್‌ಐ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಬಾಬು, ಜಿಲ್ಲಾ ಮುಖಂಡರಾದ ತೇಜ, ಹರೀತಾ, ಅರ್ಜುನ, ಅನುಷಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT