ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ | ಕಚೇರಿಗೆ ವಿಳಂಬವಾದರೆ ನೋಟಿಸ್, ಗೈರು

Published 11 ಜುಲೈ 2023, 17:02 IST
Last Updated 11 ಜುಲೈ 2023, 17:02 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಮಂಗಳವಾರ ಕೋಲಾರ ತಹಶೀಲ್ದಾರ್ ಕಚೇರಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬೆಳಿಗ್ಗೆ 10 ಗಂಟೆಗೆ ಧಾವಿಸಿದಾಗ ಇಡೀ ಕಚೇರಿಯಲ್ಲಿ ಮೂರು ಮಂದಿ ಇದ್ದುದ್ದನ್ನು ಕಂಡು ಅಚ್ಚರಿಗೆ ಒಳಗಾದರು.

ತಹಶೀಲ್ದಾರ್‌ ಹರ್ಷವರ್ಧನ್‌ ಅವರಿಗೆ ಕಚೇರಿಯ ಸಿಬ್ಬಂದಿ ಮೂಲಕ ಮಾಹಿತಿ ನೀಡಿ ತ್ವರಿತವಾಗಿ ಬರಲು ಸೂಚಿಸಿದರು. ತಹಶೀಲ್ದಾರ್ ಕಚೇರಿಗೆ ಬರುವಷ್ಟರಲ್ಲಿ 10.30 ಆಗಿತ್ತು. ಆ ವೇಳೆಗೆ 5-6 ಮಂದಿ ಇತರೆ ಸಿಬ್ಬಂದಿ ಮಾತ್ರ ಬಂದಿದ್ದರು.

‘ಕಚೇರಿಯ ಮುಖ್ಯಸ್ಥ ಸರಿ ಇದ್ದರೆ ಇತರೆ ಸಿಬ್ಬಂದಿ ಅದನ್ನು ಪಾಲಿಸುತ್ತಾರೆ. ರಾಜನಂತೆ ಪ್ರಜೆ. ಕಚೇರಿಯ ಮುಖ್ಯಸ್ಥರಾದವರು ನಿಗದಿತ ಅವಧಿಗಿಂತ ಮುಂಚೆ ಬಂದರೆ ಸಿಬ್ಬಂದಿಗೂ ನಿಗದಿತ ಅವಧಿಯೊಳಗೆ ಬರಬೇಕೆಂಬ ಪ್ರಾಮಾಣಿಕತೆ ಬರುತ್ತದೆ’ ಎಂದು ಅಕ್ರಂ ಪಾಷ ಕಿವಿಮಾತು ಹೇಳಿದರು.

ತಹಶೀಲ್ದಾರ್ ಮತ್ತು ಶಿರಸ್ತೇದಾರ್‌ ಜೊತೆ ಎಲ್ಲಾ ಕೊಠಡಿಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ನಿಗದಿತ ಅವಧಿಯೊಳಗೆ ಕಚೇರಿಗೆ ಹಾಜರಾಗಬೇಕೆಂಬ ಸೂಚನೆ ನೀಡಿದರು. ಇನ್ನು ಮುಂದೆ ಕಚೇರಿಗೆ ಸಿಬ್ಬಂದಿ ವಿಳಂಬವಾಗಿ ಬಂದರೆ ನೋಟಿಸ್ ಜಾರಿ ಮಾಡಿ ಗೈರು ಹಾಜರಾತಿ ಹಾಕಿ ಎಂದು ತಾಕೀತು ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಮನೆಯ ಮುಂದೇ ಕಚೇರಿ ಇದ್ದು, ಇಷ್ಟು ದಿನಗಳಿಂದ ನೋಡಿರಲಿಲ್ಲ. ಹೀಗಾಗಿ, ನಮ್ಮ ಕಚೇರಿಗೆ ಹೋಗುವ ಬದಲು ಇಲ್ಲಿಗೆ ಬಂದೆ. ಅನಿರೀಕ್ಷಿತ‌ ಭೇಟಿ ಇದು, ವಿಶೇಷ ಏನೂ ಇಲ್ಲ. ಮುಂದಿನ ದಿನಗಳಲ್ಲಿ ವಿವಿಧ ಕಚೇರಿಗಳಿಗೆ ಭೇಟಿ ನೀಡುತ್ತೇನೆ. ಎಂದರು.

‘ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗಲು ಸಿಬ್ಬಂದಿ ಕೊರತೆ ಇದೆ. ಕಟ್ಟಡದ ನಿರ್ವಹಣೆಯೂ ಸಮರ್ಪಕವಾಗಿ ಆಗದಿರುವುದಕ್ಕೆ ಆರ್ಥಿಕ ಸಂಪನ್ಮೂಲ ಕೊರತೆ ಇದೆ. ಇರುವ ಸಿಬ್ಬಂದಿಯಿಂದ ಪರಿಪೂರ್ಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದು’ ಎಂದು ತಿಳಿಸಿದರು.

‘ಸರ್ಕಾರವು ಜಾರಿ ಮಾಡಿರುವ ಸಕಾಲ, ಆನ್‍ಲೈನ್ ಸೇರಿದಂತೆ ಹಲವು ಸೌಲಭ್ಯಗಳು ನೀಡಿರುವುದನ್ನು ಸದ್ಬಳಿಕೆ ಮಾಡಿಕೊಳ್ಳಬೇಕು. ಆನ್‌ಲೈನ್ ಸೇವೆಯಲ್ಲಿ ಜಿಲ್ಲೆ 30ನೇ ಸ್ಥಾನದಲ್ಲಿದೆ. ಮೇಲೇರಲು ಪ್ರಯತ್ನಿಸಬೇಕು. ಆಗ ಮಾತ್ರ ಮಧ್ಯವರ್ತಿಗಳನ್ನು ನಿಯಂತ್ರಿಸಲು ಸಾಧ್ಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT