ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಹಿವಾಟು– ಜನ ಜೀವನಕ್ಕೆ ದೊಡ್ಡ ಪೆಟ್ಟು

ಜಿಲ್ಲೆಯ ಕೋವಿಡ್‌–19 ಆತಂಕ: ಜನರ ಓಡಾಟ ವಿರಳ
Last Updated 14 ಮಾರ್ಚ್ 2020, 16:25 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಜನರಲ್ಲಿ ಕೋವಿಡ್‌–19 ಆತಂಕ ಮನೆ ಮಾಡಿದ್ದು, ಕೊರೊನಾ ಸೋಂಕಿನ ಭೀತಿಯು ದೈನಂದಿನ ವಹಿವಾಟು ಹಾಗೂ ಜನ ಜೀವನಕ್ಕೆ ದೊಡ್ಡ ಪೆಟ್ಟು ಕೊಟ್ಟಿದೆ.

ಜಿಲ್ಲಾ ಕೇಂದ್ರ, ತಾಲ್ಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಭಾಗದಲ್ಲಿ ಜನರು ಕೊರೊನಾ ಸೋಂಕಿನ ಭಯಕ್ಕೆ ಮನೆಯಿಂದ ಹೊರ ಬರಲು ಭಯಪಡುತ್ತಿದ್ದು, ವಾಣಿಜ್ಯ ಚಟುವಟಿಕೆಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ.

ಜಿಲ್ಲಾಡಳಿತದ ಆದೇಶದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಾದ್ಯಂತ ಶನಿವಾರದಿಂದ ಶಾಲಾ ಕಾಲೇಜುಗಳನ್ನು ಬಂದ್‌ ಮಾಡಲಾಗಿದೆ. ಜತೆಗೆ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಉದ್ಯಾನ ಹಾಗೂ ದೇವಸ್ಥಾನಗಳನ್ನು ಮುಚ್ಚಲಾಗಿದೆ. ಜಿಲ್ಲೆಯಲ್ಲಿ ನಡೆಯುಬೇಕಿದ್ದ ಜಾತ್ರೆ, ದೇವರ ಉತ್ಸವ ಸೇರಿದಂತೆ ಎಲ್ಲಾ ಬಗೆಯ ಧಾರ್ಮಿಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲಾಗಿದೆ.

ಹೆಚ್ಚು ಜನ ಸೇರುವ ಸಂತೆ, ಸಭೆ, ಸಮಾರಂಭ, ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳನ್ನು ನಡೆಸದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಕೆಲ ದೇವಸ್ಥಾನಗಳಲ್ಲಿ ಭಕ್ತರ ಆರೋಗ್ಯದ ದೃಷ್ಟಿಯಿಂದ ತೀರ್ಥ ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯನ್ನು ಸ್ಥಗಿತಗೊಳಿಸಲಾಗಿದೆ.

ಜಿಲ್ಲಾ ಕೇಂದ್ರದ ಎಪಿಎಂಸಿ ಮಾರುಕಟ್ಟೆ, ವಾಣಿಜ್ಯ ಪ್ರದೇಶಗಳು, ರೈಲು ಹಾಗೂ ಬಸ್‌ ನಿಲ್ದಾಣದಲ್ಲಿ ಜನಸಂದಣಿ ವಿರಳವಾಗಿತ್ತು. ಮತ್ತೊಂದಡೆ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ವಾಹನ ಸಂಚಾರ ಸಹ ಕಡಿಮೆಯಿತ್ತು. ವಾಣಿಜ್ಯ ಪ್ರದೇಶಗಳಲ್ಲಿ ಸಾಕಷ್ಟು ಅಂಗಡಿಗಳು ಬಂದ್‌ ಆಗಿದ್ದವು. ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಹೋಟೆಲ್‌ಗಳು, ವಾಣಿಜ್ಯ ಸಮುಚ್ಚಯಗಳು ಹಾಗೂ ಅಂಗಡಿಗಳು ಗ್ರಾಹಕರಿಲ್ಲದೆ ಭಣಗುಡುತ್ತಿದ್ದವು.

ಪ್ರಯಾಣಿಕರಿಲ್ಲ: ಬೆಂಗಳೂರು, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧೆಡೆಗೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಈ ಕಾರಣಕ್ಕೆ ಕೆಎಸ್‌ಆರ್‌ಟಿಸಿಯು ಹಲವು ಮಾರ್ಗಗಳಲ್ಲಿನ ಬಸ್‌ ಸಂಚಾರ ಪ್ರಮಾಣವನ್ನು ಕಡಿಮೆ ಮಾಡಿದೆ. ಜಿಲ್ಲಾ ಕೇಂದ್ರದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು.

ನೆಲಕಚ್ಚಿದ ವಹಿವಾಟು: ಬೀದಿ ಬದಿಯ ವ್ಯಾಪಾರ ಸಹ ಸ್ಥಗಿತಗೊಂಡಿದ್ದು, ಹಣ್ಣು, ಚಾಟ್ಸ್‌, ಫಾಸ್ಟ್‌ಫುಡ್‌ ಮಳಿಗೆಗಳಲ್ಲಿ ಗ್ರಾಹಕರೇ ಇರಲಿಲ್ಲ. ಕೋವಿಡ್‌–19 ಭೀತಿಗೆ ಕೋಳಿ, ಮೊಟ್ಟೆ, ಮೀನು ಹಾಗೂ ಕುರಿ ಮಾಂಸದ ವಹಿವಾಟು ಸಂಪೂರ್ಣ ನೆಲಕಚ್ಚಿದ್ದು, ಅಂಗಡಿಗಳನ್ನು ಸಾಮೂಹಿಕವಾಗಿ ಬಂದ್ ಮಾಡಲಾಗಿದೆ. ಕೋಳಿ, ಮೊಟ್ಟೆ, ಮೀನು ಹಾಗೂ ಮಾಂಸವನ್ನು ಕೇಳುವವರೇ ಇಲ್ಲದಂತಾಗಿದೆ.

ಜಿಲ್ಲೆಯ ವಿವಿಧೆಡೆ ಆಯೋಜನೆಯಾಗಿದ್ದ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಮದುವೆ, ಆರತಕ್ಷತೆ, ಬೀಗರ ಔತಣ, ನಾಮಕರಣ, ಗೃಹಪ್ರವೇಶ ಸೇರಿದಂತೆ ಶುಭ ಸಮಾರಂಭಗಳಿಗೆ ಕೋವಿಡ್‌–19 ಬಿಸಿ ತಟ್ಟಿದೆ.

ಜೀವಂತ ಸಮಾಧಿ: ತರಕಾರಿ, ಸೊಪ್ಪು, ಕೋಳಿ, ಮೀನು ಹಾಗೂ ಮೊಟ್ಟೆಯ ಬೆಲೆ ಪಾತಾಳಕ್ಕೆ ಕುಸಿದಿದ್ದು, ಅಂಗಡಿ ಮಾಲೀಕರು ಹಾಗೂ ಪೌಲ್ಟ್ರಿ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಳಿ ಮಾಂಸದಿಂದ ಕೊರೊನಾ ಸೋಂಕು ತಗುಲುತ್ತದೆ ಎಂಬ ವದಂತಿ ಹಬ್ಬಿರುವ ಕಾರಣಕ್ಕೆ ಜನರು ಮಾಂಸಾಹಾರ ಸೇವನೆಗೆ ಹಿಂದೇಟು ಹಾಕುತ್ತಿದ್ದಾರೆ. ಪೌಲ್ಟ್ರಿ ಉದ್ಯಮದಲ್ಲಿ ತೊಡಗಿರುವ ಕಂಪನಿಗಳು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದು, ಕಂಪನಿ ಪ್ರತಿನಿಧಿಗಳು ಕೋಳಿ ಫಾರಂಗಳತ್ತ ತಿರುಗಿಯೂ ನೋಡುತ್ತಿಲ್ಲ.

ಕಂಪನಿಗಳು ಫಾರಂಗಳಿಗೆ ಕೋಳಿ ಆಹಾರ ಪೂರೈಕೆ ಸ್ಥಗಿತಗೊಳಿಸಿವೆ. ಫಾರಂ ಮಾಲೀಕರು ಕೋಳಿಗಳಿಗೆ ನೀರನ್ನಷ್ಟೇ ನೀಡುತ್ತಿದ್ದಾರೆ. ಕೋಳಿಗಳು ಆಹಾರವಿಲ್ಲದೆ ನಿತ್ರಾಣಗೊಂಡು ಸಾಯುತ್ತಿವೆ. ಹಲವೆಡೆ ಪೌಲ್ಟ್ರಿ ಮಾಲೀಕರೇ ಬೆಲೆ ಕುಸಿತದ ಕಾರಣಕ್ಕೆ ಕೋಳಿಗಳನ್ನು ಜೀವಂತ ಸಮಾಧಿ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT