ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಭದ್ರಕೋಟೆ ಕೋಲಾರದಲ್ಲಿ ಅರಳಿದ ಕಮಲ; ಸೋಲಿಲ್ಲದ ಸರದಾರನಿಗೆ ಮರ್ಮಾಘಾತ

‘ಕೈ’ಗೆ ಮುಳುವಾದ ಆಂತರಿಕ ಬೇಗುದಿ
Last Updated 23 ಮೇ 2019, 19:30 IST
ಅಕ್ಷರ ಗಾತ್ರ

ಕೋಲಾರ: ಕಾಂಗ್ರೆಸ್‌ನ ಭದ್ರಕೋಟೆ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯು ಇದೇ ಮೊದಲ ಬಾರಿಗೆ ಜಯದ ಖಾತೆ ತೆರೆದಿದ್ದು, ಕೈ ಪಾಳಯ ಧೂಳಿಪಟವಾಗಿದೆ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕೆ.ಎಸ್‌.ಮುನಿಯಪ್ಪ ಅವರು ಹೀನಾಯವಾಗಿ ಸೋತಿದ್ದು, ಕೈ ಪಾಳಯದಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ. ಕೇಸರಿ ಪಡೆ ಅಭ್ಯರ್ಥಿ ಎಸ್‌.ಮುನಿಸ್ವಾಮಿ 2,09,671 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಸಂತಸ ಮನೆ ಮಾಡಿದೆ.

ಸ್ವಾತಂತ್ರ್ಯ ನಂತರ ಕ್ಷೇತ್ರದಲ್ಲಿ ನಡೆದ 16 ಲೋಕಸಭಾ ಚುನಾವಣೆಗಳಲ್ಲಿ 15 ಬಾರಿ ಗೆದ್ದಿದ್ದ ಕಾಂಗ್ರೆಸ್‌ಗೆ ಈ ಬಾರಿ ತೀವ್ರ ಮುಖಭಂಗವಾಗಿದೆ. 1991ರಿಂದ ಸತತ 7 ಬಾರಿ ಗೆದ್ದು ಲೋಕಸಭೆ ಪ್ರವೇಶಿಸಿದ್ದ ಕಾಂಗ್ರೆಸ್‌ ಹುರಿಯಾಳು ಸೋಲಿಲ್ಲದ ಸರದಾರ ಮುನಿಯಪ್ಪ ಅವರಿಗೆ ಪಕ್ಷದೊಳಗಿನ ಆಂತರಿಕ ಬೇಗುದಿಯು ಮರ್ಮಾಘಾತ ನೀಡಿದೆ.

ಸ್ವಪಕ್ಷೀಯರ ಮುನಿಸು, ಕುಟುಂಬ ರಾಜಕಾರಣ, ಅಕ್ರಮ ಆಸ್ತಿ ಗಳಿಕೆ, ಭೂ ಅಕ್ರಮದ ಆರೋಪವು ಮುನಿಯಪ್ಪಗೆ ದೊಡ್ಡ ಪೆಟ್ಟು ಕೊಟ್ಟಿದೆ. ಕೆ.ಸಿ ವ್ಯಾಲಿ ನೀರಾವರಿ ಯೋಜನೆಗೆ ಅಡ್ಡಗಾಲು ಹಾಕಿದರೆಂಬ ಅಪವಾದವು ಫಲಿತಾಂಶದ ದಿಕ್ಕನ್ನೇ ಬದಲಿಸಿದೆ. ಕಾಂಗ್ರೆಸ್‌ನ ಅಬ್ಬರದ ಪ್ರಚಾರದ ನಡುವೆಯೂ ಕಮಲ ಪಾಳಯದ ಮುನಿಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅಲೆಯಲ್ಲಿ ಗೆಲುವಿನ ದಡ ಸೇರಿದ್ದಾರೆ. ಕ್ಷೇತ್ರಕ್ಕೆ ಅಪರಿಚಿತರಾದರೂ ಮತದಾರರು ಅವರ ಕೈ ಹಿಡಿದಿದ್ದಾರೆ.

7ರಲ್ಲಿ ಹಿನ್ನಡೆ: ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6ರಲ್ಲಿ ಕಾಂಗ್ರೆಸ್‌ ಶಾಸಕರು ಹಾಗೂ 2 ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದರೂ ಮುನಿಯಪ್ಪ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಮುನಿಯಪ್ಪರ ಪುತ್ರಿ ಹಾಗೂ ಶಾಸಕಿ ಎಂ.ರೂಪಕಲಾ ಅವರು ಪ್ರತಿನಿಧಿಸುವ ಕೆಜಿಎಫ್‌ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಏಳೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್‌ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿನ ಮುನಿಯಪ್ಪರ ವಿರೋಧಿಗಳು ನಡೆಸಿದ ಸಂಘಟಿತ ಹೋರಾಟಕ್ಕೆ ಕೈ ಪಾಳಯ ದೊಡ್ಡ ಬೆಲೆ ತೆತ್ತಿದೆ.

ಜೆಡಿಎಸ್‌ ವಿರುದ್ಧ ಅಪಸ್ವರ: ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಜೆಡಿಎಸ್‌ ಮುಖಂಡರು ಮೈತ್ರಿ ಧರ್ಮ ಪಾಲಿಸಿಲ್ಲ ಎಂಬ ಅಪಸ್ವರ ಕಾಂಗ್ರೆಸ್‌ ವಲಯದಲ್ಲಿ ಕೇಳಿಬಂದಿದೆ. ಕೋಲಾರ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ, ಮಾಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ಗೌಡ ಹಾಗೂ ಜೆಡಿಎಸ್‌ನ ಕೆಲ ಅಗ್ರ ನಾಯಕರು ಪಕ್ಷದ ವರಿಷ್ಠರ ಸೂಚನೆ ದಿಕ್ಕರಿಸಿ ಬಿಜೆಪಿ ಅಭ್ಯರ್ಥಿಯ ಬೆನ್ನಿಗೆ ನಿಂತಿದ್ದು ಮುನಿಯಪ್ಪರನ್ನು ಸೋಲಿನ ದವಡೆಗೆ ದೂಡಿದೆ.

ತಲೆಕೆಳಗಾದ ಲೆಕ್ಕಾಚಾರ: ಶ್ರೀನಿವಾಸಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಹಾಗೂ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌, ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ಹಾಗೂ ಕಾಂಗ್ರೆಸ್‌ನ ಹಾಲಿ ಶಾಸಕ ನಾಗೇಶ್‌, ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್‌ ಶಾಸಕ ವಿ.ಮುನಿಯಪ್ಪ, ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಎಂ.ಸಿ.ಸುಧಾಕರ್‌ರೆಡ್ಡಿ ಅವರನ್ನು ಒಳಗೊಂಡ ‘ಮಹಾ ಘಟಬಂಧನ’ದ ಚಕ್ರವ್ಯೂಹದಲ್ಲಿ ಸಿಲುಕಿದ ಮುನಿಯಪ್ಪರ ರಾಜಕೀಯ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿದೆ.

ಕ್ಷೇತ್ರದ ಅಭಿವೃದ್ಧಿ ಮರೆತದ್ದು ಹಾಗೂ ಅತಿಯಾದ ಆತ್ಮವಿಶ್ವಾಸ ಮುನಿಯಪ್ಪರ ಪಾಲಿಗೆ ಮುಳುವಾಗಿದೆ. ಜೆಡಿಎಸ್‌ ಬೆಂಬಲದ ನಡುವೆಯೂ ನೆಲಕಚ್ಚಿರುವ ಕೈ ಪಾಳಯದಲ್ಲಿ ಸೋಲಿನ ಆತ್ಮಾವಲೋಕನ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT