ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಪಕ್ಕದಲ್ಲಿದ್ದರೂ ಕೋಲಾರದತ್ತ ಸಚಿವರ ಗಮನವಿಲ್ಲ!

Published 7 ನವೆಂಬರ್ 2023, 7:15 IST
Last Updated 7 ನವೆಂಬರ್ 2023, 7:15 IST
ಅಕ್ಷರ ಗಾತ್ರ

ಕೋಲಾರ: ಒಂದೆಡೆ ತೀವ್ರ ಬರ, ಇನ್ನೊಂದೆಡೆ ಲೋಡ್‌ ಶೆಡ್ಡಿಂಗ್‌, ಬೆಳೆ ನಷ್ಟದಿಂದ ಹೈರಾಣಾಗಿರುವ ರೈತರು, ಹದಗೆಟ್ಟಿರುವ ರಸ್ತೆಗಳು. ಜೊತೆಗೆ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿರುವುದು ಸೇರಿದಂತೆ ಜಿಲ್ಲೆಯಲ್ಲಿ ಕಾಡುತ್ತಿರುವ ಹತ್ತಾರು ಸಮಸ್ಯೆಗಳು!

ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟ ರಚನೆಯಾಗಿ 34 ಸಚಿವರು ಇದ್ದರೂ ಕೋಲಾರ ಜಿಲ್ಲೆ ಕಂಡಿರುವುದು ಬೆರಳೆಣಿಕೆ ಸಚಿವರಿಗಷ್ಟೇ.

ಬೆಂಗಳೂರಿನ ವಿಧಾನಸೌಧದಿಂದ ಕೇವಲ 70 ಕಿ.ಮೀ ದೂರವಿರುವ ಕೋಲಾರ ಜಿಲ್ಲಾ ಕೇಂದ್ರಕ್ಕೆ ಬಂದು ಸಮಸ್ಯೆ ಆಲಿಸುವುದು, ಸಭೆ ನಡೆಸಿ ಅಧಿಕಾರಿಗಳಿಗೆ ಸಲಹೆ ಸೂಚನೆ ನೀಡುವುದೇ ಹಲವು ಸಚಿವರಿಗೆ ಕಷ್ಟವಾಗಿದೆ ಎಂಬುದು ಜಿಲ್ಲೆಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಐದು ತಿಂಗಳ ಅವಧಿಯಲ್ಲಿ ಉಸ್ತುವಾರಿ ಸಚಿವ ಬೈರತಿ ಸುರೇಶ್‌ ಸೇರಿದಂತೆ ಆರು ಸಚಿವರು ಜಿಲ್ಲೆಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.  ಇನ್ನುಳಿದವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಹೋಗಿದ್ದಾರೆ. 

ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಗುರುತಿಸಿದ್ದ ಜಾಗವನ್ನು ಕೇಂದ್ರ ಅರಣ್ಯ ಇಲಾಖೆ ತಿರಸ್ಕರಿಸಿದೆ. ಹತ್ತು ವರ್ಷಗಳಿಂದ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಲೋಡ್‌ ಶೆಡ್ಡಿಂಗ್‌ನಿಂದ ರೈತರು, ವಿದ್ಯಾರ್ಥಿಗಳು, ಸಾಮಾನ್ಯರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಬರದಿಂದಾಗಿ ರೈತರು, ಹೈನುಗಾರರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಜಿಲ್ಲೆಯ ಪ್ರಮುಖ ಬೆಳೆಯಾದ ಟೊಮೆಟೊಗೆ ವೈರಸ್‌ ಏಕೆ ಬಂತು ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಇನ್ನು ಕೋಲಾರ ನಗರ ಕಸದ ತೊಟ್ಟಿಯಾಗಿದೆ. ಹಲವೆಡೆ ಶಾಲಾ ಕಾಲೇಜುಗಳಲ್ಲಿ ಸಮಸ್ಯೆ ತುಂಬಿ ತುಳುಕುತ್ತಿದೆ. ಮೂಲಸೌಲಭ್ಯಗಳೂ ಇಲ್ಲ.

ಕೋಲಾರ‌ದಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕ್ಷೇತ್ರದ ಅಭಿವೃದ್ಧಿ ಸಂಬಂಧ ಹಲವಾರು ಯೋಜನೆ ರೂಪಿಸಿದ್ದರು. ಜೊತೆಗೆ ಪ್ರಚಾರ ಸಭೆಗಳಲ್ಲಿ ಕೋಲಾರ ಹಾಗೂ ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿಗಳ ಪಟ್ಟಿಯನ್ನೇ ನೀಡಿದ್ದರು. ಆದರೆ, ಅವರೇ ಮುಖ್ಯಮಂತ್ರಿ ಆದ ಮೇಲೆ ಜಿಲ್ಲೆಗೆ ಕಾಲಿಟ್ಟಲ್ಲ. ನ.11ರಂದು ಯರಗೋಳ್‌ ಜಲಾಶಯ ಉದ್ಘಾಟನೆಗೆ ಬರುವುದಾಗಿ ಜಿಲ್ಲೆಯ ಶಾಸಕರಿಗೆ ಭರವಸೆ ಕೊಟ್ಟಿದ್ದಾರೆ. ಅಲ್ಲಿಗೆ ಆರು ತಿಂಗಳಾಗುತ್ತದೆ. ಕಳೆದ ಬಜೆಟ್‌ನಲ್ಲೂ ಕೋಲಾರಕ್ಕೆ ಉತ್ತಮ ಯೋಜನೆ ಲಭಿಸಿರಲಿಲ್ಲ.

ಇನ್ನು ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ಡಿಸಿಎಫ್‌ ವಿ.ಏಡುಕೊಂಡಲು ಸೇರಿ ಪ್ರಮುಖ ಅಧಿಕಾರಿಗಳನ್ನು ಹೊರತುಪಡಿಸಿ ಉಳಿದವರು ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ಜನರ ಸಮಸ್ಯೆ ಆಲಿಸುತ್ತಿರುವುದು ಕಡಿಮೆ. ಅಕ್ರಂ ಪಾಷ ನಿತ್ಯ ಒಂದಲ್ಲ ಒಂದು ಇಲಾಖೆಗೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿದ್ದಾರೆ. 

ನಳಿನಿ‌ಗೌಡ
ನಳಿನಿ‌ಗೌಡ
ಪ್ರವೀಣ್‌ ಗೌಡ
ಪ್ರವೀಣ್‌ ಗೌಡ
ಒಮ್ಮೆಯೂ ಭೇಟಿ ನೀಡದ ಮುಖ್ಯಮಂತ್ರಿ ಬರ, ಬೆಳೆ ನಷ್ಟ, ಲೋಡ್ ಶೆಡ್ಡಿಂಗ್‌ ಸೇರಿ ಜಿಲ್ಲೆಯಲ್ಲಿ ಹತ್ತಾರು ಸಮಸ್ಯೆ ಹದಗೆಟ್ಟಿರುವ ರಸ್ತೆಗಳು–ಕೇಳುವವರೇ ಇಲ್ಲ!
ಪರಿಶೀಲನೆಗೆಂದು ಕೋಲಾರಕ್ಕೆ ಭೇಟಿ ನೀಡಿರುವ ಕಾಂಗ್ರೆಸ್‌ ಸರ್ಕಾರದ ಸಚಿವರು
* ಶಿವಾನಂದ ಎಸ್‌.ಪಾಟೀಲ್‌; ಕೃಷಿ ಮಾರುಕಟ್ಟೆ ಸಚಿವ * ಎನ್‌.ಚಲುವರಾಯಸ್ವಾಮಿ; ಕೃಷಿ ಸಚಿವ * ಎನ್‌.ಎಸ್‌.ಬೋಸರಾಜು; ಸಣ್ಣ ನೀರಾವರಿ ಸಚಿವ * ದಿನೇಶ್‌ ಗುಂಡೂರಾವ್‌; ಆರೋಗ್ಯ ಸಚಿವ * ಕೆ.ಎಚ್‌.ಮುನಿಯಪ್ಪ; ಆಹಾರ ಸಚಿವ * ಬೈರತಿ ಸುರೇಶ್‌– ನಗರಾಭಿವೃದ್ಧಿ+ಉಸ್ತುವಾರಿ ಸಚಿವ (ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕಂದಾಯ ಸಚಿವ ಕೃಷ್ಣಬೈರೇಗೌಡ ಕ್ರೀಡಾ ಸಚಿವ ಬಿ.ನಾಗೇಂದ್ರ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಹಾಗೂ ಡಾ.ಜಿ.ಪರಮೇಶ್ವರ ಜಿಲ್ಲೆಗೆ ಭೇಟಿ ನೀಡಿದ್ದರಾದರೂ ಅಧಿಕೃತವಾಗಿ ಸಭೆ ನಡೆಸಿಲ್ಲ)
ಆರೂ ತಾಲ್ಲೂಕು ಬರಪೀಡಿತ!
ಜಿಲ್ಲೆಯ ಆರು ತಾಲ್ಲೂಕುಗಳನ್ನು ತೀವ್ರ ಬರಪೀಡಿತ ಎಂಬುದಾಗಿ ಘೋಷಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಹಾಗೂ ಬರದಿಂದ ಉಂಟಾದ ಬೆಳೆ ಹಾನಿಯಿಂದ ಸುಮಾರು ₹ 219.87 ಕೋಟಿ ನಷ್ಟವಾಗಿದೆ. ಒಟ್ಟು 35974 ಹೆಕ್ಟೇರ್‌ ಕೃಷಿ ಪ್ರದೇಶದಲ್ಲಿ ವಿವಿಧ ಬೆಳೆ ಹಾನಿಯಾಗಿದೆ. ಅಧಿಕಾರಿಗಳು ಅಂದಾಜಿಸಿರುವುದಕ್ಕಿಂತಲೂ ಹೆಚ್ಚು ಹಾನಿ ಜಿಲ್ಲೆಯಲ್ಲಿ ಉಂಟಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಉಸ್ತುವಾರಿ ಸಚಿವರಿಗೆ ಆಸಕ್ತಿ ಇಲ್ಲವೇ?
ಕೋಲಾರದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಗೈರಾಗಿದ್ದಕ್ಕೆ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸೆ.25ರಂದು ಜನತಾ ದರ್ಶನಕ್ಕೆ ಹಾಜರಾದವರು ಮತ್ತೆ ಜಿಲ್ಲೆಗೆ ಬಂದಿಲ್ಲ. ‘ಅನಾರೋಗ್ಯದ ಕಾರಣ ಜಿಲ್ಲಾ ಉಸ್ತುವಾರಿ ಸಚಿವರು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ’ ಎಂಬುದಾಗಿ ಶಾಸಕ ಕೊತ್ತೂರು ಮಂಜುನಾಥ್‌ ಹೇಳಿದರು. ಆದರೆ ಅದೇ ದಿನ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾರನೇ ದಿನ ಮುಖ್ಯಮಂತ್ರಿ ಜೊತೆಗೂಡಿ ಹಂಪಿ ಕೊಪ್ಪಳಕ್ಕೆ ಭೇಟಿ ನೀಡಿದ್ದರು.
‘ಕೋಲಾರ ಕಡೆಗಣಿಸಿದ ಸರ್ಕಾರ’
ಕೋಲಾರ ಜಿಲ್ಲೆಯಲ್ಲಿ ಮಳೆಯಿಂದ ರಾಗಿ ಬೆಳೆಗೆ ಭಾರಿ ಹಾನಿ ಉಂಟಾಗಿದ್ದು ದರ ಏರಿಕೆ ಆಗುವ ಸಂಭವವಿದೆ. ರಾಜ್ಯ ಸರ್ಕಾರದ ಮುಖ್ಯಮಂತ್ರಿ ಸಚಿವರು ಇತ್ತ ಗಮನ ಹರಿಸದೆ ಟ್ರಿಪ್ ಡಿನ್ನರ್‌ ಬ್ರೇಕ್‌ ಫಾಸ್ಟ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ. ಉಸ್ತುವಾರಿ ಸಚಿವರು ಗಡಿನಾಡಿನ ಜಿಲ್ಲೆಯ ಕರ್ನಾಟಕ ರಾಜ್ಯೋತ್ಸವಕ್ಕೆ ಬರಲಿಲ್ಲ. ಅನಾರೋಗ್ಯ ಎನ್ನುತ್ತಾರೆ. ಆದರೆ ಅಂದೇ ಸಂಜೆ ಮುಖ್ಯಮಂತ್ರಿ ಜೊತೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಕೋಲಾರ ಜಿಲ್ಲೆಗೆ ಯಾರ ಶಾಪ ತಟ್ಟಿದೆಯೋ ಏನೋ. ಈ ಸರ್ಕಾರವೂ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ –ಇಂಚರ ಗೋವಿಂದರಾಜು ವಿಧಾನ ಪರಿಷತ್‌ ಸದಸ್ಯ ಜೆಡಿಎಸ್‌ ‌ಮುಖಂಡ ****** ‘ಕೋಲಾರ ಎಂದರೆ ನಿರ್ಲಕ್ಷ್ಯ’ ಕೋಲಾರ ಎಂದರೆ ನಿರ್ಲಕ್ಷ್ಯ ಮಾಡುತ್ತಾರೆ. ಅನುದಾನ ನೀಡುವಲ್ಲಿ ಬಜೆಟ್‌ಗಳಲ್ಲಿ ಯೋಜನೆ ನೀಡುವಲ್ಲಿ ಹಿಂದೇಟು ಹಾಕುತ್ತಾರೆ. ಇಲ್ಲಿನ ಶಾಸಕರು ಕೂಡ ಒತ್ತಡ ಹಾಕುತ್ತಿಲ್ಲ. ಇನ್ನು ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಬಗ್ಗೆ ಆಸಕ್ತಿ ಇಲ್ಲವಾಗಿದೆ. ರೈತರ ಸಮಸ್ಯೆ ಆಲಿಸುವವರೇ ಇಲ್ಲವಾಗಿದ್ದಾರೆ. ಕನಿಷ್ಠ ಧೈರ್ಯ ತುಂಬುತ್ತಿಲ್ಲ ಬ್ಯಾಂಕ್‌ಗಳಿಂದ ನೋಟಿಸ್‌ ಬರುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಏಳು ಗಂಟೆ ವಿದ್ಯುತ್‌ ಪೂರೈಕೆ ಆಗುತ್ತಿಲ್ಲ. ಪಶು ಆಹಾರ ದರ ಹೆಚ್ಚಿದೆ. ಕಂದಾಯ ಇಲಾಖೆಗಳಲ್ಲಿ ಲಂಚ ತಾಂಡವವಾಡುತ್ತಿದೆ ನಳಿನಿಗೌಡ ರೈತ ಮುಖಂಡರು ಕೋಲಾರ ****** ‘ಇದು ಟೀಸರ್‌ ಮುಂದೆ ಸಿನಿಮಾ’ ಕೋಲಾರ ಉಸ್ತುವಾರಿ ಸಚಿವರಿಗೆ ಬಗ್ಗೆ ಬದ್ಧತೆ ಇಲ್ಲ. ಉಳಿದ ಸಚಿವರನ್ನೂ ಕರೆದುಕೊಂಡು ಬರಲಿಲ್ಲ. ಅವರೂ ಬರುತ್ತಿಲ್ಲ. ಲೋಡ್‌ ಶೆಡ್ಡಿಂಗ್‌ ಆಗಿದ್ದು ರೈತರಿಗೆ ಸಮಸ್ಯೆ ಉಂಟಾಗಿದೆ. ಬರ ಪರಿಸ್ಥಿತಿ ಇದೆ ಅಪರಾಧ ಪ್ರಕರಣ ಹೆಚ್ಚುತ್ತಿವೆ. ಆದರೂ ನಿರ್ಲಕ್ಷ್ಯ ಮುಂದುವರಿದಿದೆ. ಈ ಸರ್ಕಾರ ಐದು ತಿಂಗಳಲ್ಲಿ ಟೀಸರ್‌ ತೋರಿಸಿದೆ‌ ಮುಂದೆ ಸಿನಿಮಾ ತೋರಿಸಲಿದೆ. ಹಿಂದೆಯೂ ಇದೇ ಸಮಸ್ಯೆ ಇತ್ತು. ಈಗಲೂ ಆ ಸಮಸ್ಯೆ ಮುಂದುವರಿದಿದೆ. –ಪ್ರವೀಣಗೌಡ ನಗರಸಭೆ ಸದಸ್ಯ ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT