ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ದೇಶ ಬಿಟ್ಟು ಹೋಗುತ್ತಾರೆ: ಕೆ.ಚಂದ್ರಾರೆಡ್ಡಿ ಲೇವಡಿ

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಾರೆಡ್ಡಿ ಲೇವಡಿ
Last Updated 9 ಜೂನ್ 2021, 16:14 IST
ಅಕ್ಷರ ಗಾತ್ರ

ಕೋಲಾರ: ‘ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರದ ದುರಾಡಳಿತದಿಂದ ಜನರು ನಲುಗಿದ್ದಾರೆ. ಮೋದಿ ಹೆಸರಿನ ಅನೇಕರು ಈಗಾಗಲೇ ಲೂಟಿ ಮಾಡಿ ದೇಶ ಬಿಟ್ಟಿದ್ದು, ಮುಂದೆ ಪ್ರಧಾನಿ ಮೋದಿಯೂ ದೇಶ ಬಿಟ್ಟು ಓಡಿ ಹೋಗುತ್ತಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಲೇವಡಿ ಮಾಡಿದರು.

ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕವು ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಡ ಜನರಿಗೆ ಆಹಾರ ವಿತರಿಸಿ ಮಾತನಾಡಿ, ‘ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೂ 7 ಕೆ.ಜಿ ಅಕ್ಕಿ ನೀಡಿದ್ದರು. ಆದರೆ, ಈಗ ಅಕ್ಕಿ ಪ್ರಮಾಣ 2 ಕೆ.ಜಿಗೆ ಇಳಿದಿದೆ. ತೈಲೋತ್ಪನ್ನಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಬದುಕು ಬರ್ಬರವಾಗಿದೆ’ ಎಂದರು.

‘ಪ್ರಧಾನಿ ಮೋದಿ ಜನರಿಗೆ ಸಹಾಯವಾಗುವ ಯಾವುದೇ ಕೆಲಸ ಮಾಡುತ್ತಿಲ್ಲ. ಬದಲಿಗೆ ಜನರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಕೋವಿಡ್‌ 2ನೇ ಅಲೆಯ ತೀವ್ರತೆ ಬಗ್ಗೆ ರಾಹುಲ್‌ಗಾಂಧಿ ಎಚ್ಚರಿಕೆ ನೀಡಿದಾಗ ಬಿಜೆಪಿ ಮುಖಂಡರು ನಕ್ಕಿದ್ದರು. ಈಗ ಕೋವಿಡ್‌ 2ನೇ ಅಲೆ ಸೃಷ್ಟಿಸಿರುವ ಕಷ್ಟವನ್ನು ಎಲ್ಲರೂ ನೋಡುತ್ತಿದ್ದೇವೆ. ಕೋವಿಡ್‌ ಲಸಿಕೆ ವಿಚಾರದಲ್ಲಿ ತಾರತಮ್ಯ ಮಾಡಿದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿದೆ’ ಎಂದು ಹೇಳಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರ ಕಣ್ಣೊರೆಸುವ ತಂತ್ರದ ಭಾಗವಾಗಿ ಕೋವಿಡ್‌ ಪ್ಯಾಕೇಜ್‌ ಘೋಷಿಸಿದ್ದಾರೆ. ಅಧಿಕಾರಿಗಳು ಆಟೊ ಚಾಲಕರಿಗೆ ಪ್ಯಾಕೇಜ್‌ನ ಹಣಕಾಸು ನೆರವು ನೀಡಲು ಬ್ಯಾಡ್ಜ್‌ ಕೇಳುತ್ತಿದ್ದಾರೆ. ಕಟ್ಟಡ ಕಾರ್ಮಿಕರು ಹಣಕಾಸು ನೆರವಿಗೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕಬೇಕೆಂದು ಅಧಿಕಾರಿಗಳು ಹೇಳುತ್ತಾರೆ. ಪ್ಯಾಕೇಜ್ ಘೋಷಣೆಯು ಗಿಮಿಕ್ ರಾಜಕಾರಣ’ ಎಂದು ಕುಟುಕಿದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು, ಮುಖಂಡರು ಹಲವೆಡೆ ಬಡ ಜನರಿಗೆ ದಿನಸಿ ವಿತರಿಸುತ್ತಿದ್ದಾರೆ. ಪಕ್ಷದಿಂದ ಜನರಿಗಾಗಿ ಆಂಬುಲೆನ್ಸ್‌ ಕೊಡುಗೆಯಾಗಿ ನೀಡಲಾಗಿದೆ. ವೈದ್ಯಕೀಯ ಕಿಟ್ ನೀಡಲು ಕ್ರಮ ಕೈಗೊಳ್ಳುತ್ತೇವೆ. ಅಲ್ಪಸಂಖ್ಯಾತರ ಘಟಕದ ವತಿಯಿಂದ ಅನ್ನದಾನ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ನಿಸ್ಸೀಮರು: ‘ಬಿಜೆಪಿಯವರು ಹಣ ಮಾಡುವುದರಲ್ಲಿ ನಿಸ್ಸೀಮರು. ಆದರೆ, ಜನಪರವಾಗಿ ಕೆಲಸ ಮಾಡುವುದಿಲ್ಲ. ಕಾಂಗ್ರೆಸ್ ವತಿಯಿಂದ ಸಾಕಷ್ಟು ಜನಪರ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಮುಖಂಡರು ದೇಶವನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಈ ಸತ್ಯ ಜನರಿಗೆ ಅರ್ಥವಾಗುತ್ತಿಲ್ಲ. ಭವಿಷ್ಯದಲ್ಲಿ ಜನರಿಗೆ ಎಲ್ಲವೂ ಗೊತ್ತಾಗುತ್ತದೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‌ಬಾಬು ಹೇಳಿದರು.

‘ಪಕ್ಷದ ಅಲ್ಪಸಂಖ್ಯಾತರ ಘಟಕದ ವತಿಯಿಂದ ಜೂನ್ 9ರಂದು ಫುಡ್ ಡಿಸ್ಟ್ರಿಬ್ಯೂಷನ್ ಡೇ ಆಚರಿಸಲಾಗುತ್ತಿದ್ದು, ಇದರ ಭಾಗವಾಗಿ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಏಕಕಾಲಕ್ಕೆ ಹಸಿದ ಜನರಿಗೆ ಆಹಾರ ನೀಡಲಾಗುತ್ತಿದೆ’ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಪ್ಯಾರೇಜಾನ್ ಮಾಹಿತಿ ನೀಡಿದರು.

ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಮುಖಂಡರಾದ ಏಕ್ಬಾಲ್, ಅಬ್ದುಲ್ ಲತೀಫ್, ಜನಾರ್ದನ್, ಜೆ.ಕೆ.ಜಯರಾಂ, ತಬ್ರೇಜ್, ಕೃಷ್ಣೇಗೌಡ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT