ಶನಿವಾರ, ಫೆಬ್ರವರಿ 4, 2023
28 °C
ಆರೋಪಿಗಳ ಗಡಿಪಾರಿಗೆ ಆಗ್ರಹ: ಪೆತ್ತಾಂಡ್ಲಹಳ್ಳಿ ಚಲೋ ಎಚ್ಚರಿಕೆ

ಕೋಲಾರ| ಎಸ್‌.ಸಿ ಯುವಕನ ಆತ್ಮಹತ್ಯೆ: ಒಬ್ಬನ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂಗಲಿ (ಕೋಲಾರ ಜಿಲ್ಲೆ): ಬೇವಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಯ ಯುವಕ ಉದಯ್‌ ಕಿರಣ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ  ಮುನಿವೆಂಕಟಪ್ಪ ಎಂಬಾತನನ್ನು ನಂಗಲಿ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 

‘ತಲೆಮರೆಸಿಕೊಂಡಿರುವ ಪೆತ್ತಾಂಡ್ಲಹಳ್ಳಿ ಗ್ರಾಮದ ಉಳಿದ ಆರೋಪಿಗಳಾದ ರಾಜು, ಶಿವರಾಜ್‌ ಹಾಗೂ ಗೋಪಾಲಕೃಷ್ಣಪ್ಪ ಅವರ ಪ‍ತ್ತೆಗೆ ಶೋಧ ಮುಂದುವರಿಸಿದ್ದೇವೆ. ತನಿಖೆ ತೀವ್ರಗೊಳಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ದೇವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗಡಿಪಾರಿಗೆ ಆಗ್ರಹ: ಸಿಪಿಎಂ, ಎಸ್ಎಫ್ಐ, ದಲಿತ ಸಂಘರ್ಷ ಸಂಯೋಜಕ ಸಮಿತಿ, ಬಹುಜನ ಚಳವಳಿ ಹಾಗೂ ಡಿವೈಎಫ್‌ಐ ಸಂಘಟನೆಗಳು ಶುಕ್ರವಾರ ಬೇವಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಘಟನೆಯನ್ನು ಖಂಡಿಸಿವೆ. ‘ಉದಯ್ ಕಿರಣ್ ಸಾವಿಗೆ ನ್ಯಾಯ ಸಿಗಬೇಕು, ಜಾತಿ ದೌರ್ಜನ್ಯ ನಿಲ್ಲಬೇಕು’ ಎಂದು ಘೋಷಣೆ ಕೂಗಿದರು.

‘ಆರೋಪಿಗಳನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಆಗ್ರಹಿಸಿದರು.

ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ಮಾತನಾಡಿ, ‘ಉದಯ್ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು. ಆತನ ತಾಯಿಗೆ ಸರ್ಕಾರಿ ಉದ್ಯೋಗ, ಮನೆ ನೀಡಬೇಕು. ಆರೋಪಿಗಳನ್ನು 24 ಗಂಟೆಗೊಳಗೆ ಬಂಧಿಸಬೇಕು. ಇಲ್ಲದಿದ್ದರೆ ಬೃಹತ್‌ ಸಂಖ್ಯೆಯಲ್ಲಿ ಪೆತ್ತಾಂಡ್ಲಹಳ್ಳಿ ಚಲೋ ಹಮ್ಮಿಕೊಂಡು ಹೋರಾಟವನ್ನು ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಸಿದರು. 

ಮುನ್ನೆಚ್ಚರಿಕೆ ಕ್ರಮವಾಗಿ ಬೇವಹಳ್ಳಿ ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.  

ಬೈಕ್‌ ಹಿಂದಿಕ್ಕಿದ ಎಂಬ ಕಾರಣಕ್ಕಾಗಿ ಪರಿಶಿಷ್ಟ ಸಮುದಾಯದ ಯುವಕನನ್ನು ಒಕ್ಕಲಿಗ ಸಮುದಾಯದ ಯುವಕರು ಬುಧವಾರ ಪೆತ್ತಾಂಡ್ಲಹಳ್ಳಿ ಗ್ರಾಮದಲ್ಲಿ ಥಳಿಸಿದ್ದರು. ಇದರಿಂದ ಮನನೊಂದ  ಆತ ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಮಧ್ಯೆ, ಉದಯ್‌ ಕಿರಣ್‌ ವಿರುದ್ಧ  2019ರ ಏಪ್ರಿಲ್‌ನಲ್ಲಿ ಕೊಲೆ ಪ‍್ರಕರಣ ದಾಖಲಾಗಿತ್ತು ಎಂಬುದು ಗೊತ್ತಾಗಿದೆ. ಬುಧವಾರ ಆರೋಪಿಗಳು ಈ ವಿಚಾರ ಪ್ರಸ್ತಾಪಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಬಂಧನಕ್ಕೆ ಆಗ್ರಹ: ಉದಯ್ ಕಿರಣ್ ಅವರ ಆತ್ಮಹತ್ಯೆಗೆ ಕಾರಣವಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ವಿವಿಧ ಸಂಘಟನೆಗಳು ಆಗ್ರಹಿಸಿವೆ. 

’ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದಲಿತರನ್ನು ಮನುಷ್ಯರಂತೆ ಕಾಣುತ್ತಿಲ್ಲ.  ಪಾಳೇಗಾರಿಕೆ ಮನಸ್ಥಿತಿಯೇ ಉದಯ್ ಸಾವಿಗೆ ಕಾರಣ. ಜಿಲ್ಲೆಯಲ್ಲಿ ದಲಿತ ಸಂಸದರು, ಶಾಸಕರು ಇದ್ದರೂ ದಲಿತರ ಮೇಲೆ ದಾಳಿ, ದೌರ್ಜನ್ಯ ನಿರಂತರವಾಗಿ ನಡೆಯುತ್ತಿವೆ‘ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಗಾಂಧಿನಗರ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ಪುಣ್ಯಹಳ್ಳಿ ಶಂಕರ್, ಸಂಗಸಂದ್ರ ವಿಜಯ್ ಕುಮಾರ್, ಮೆಕಾನಿಕ್ ಶ್ರೀನಿವಾಸ್, ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ನಾಗರಾಜ್ ಬೇವಹಳ್ಳಿ, ಡಿವೈಎಫ್ಐ ಮುಖಂಡ ಕೇರಳ ಶ್ರೀನಿವಾಸ್, ಎಸ್ಎಫ್ಐ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಬಾಬು, ತಾಲ್ಲೂಕು ಅಧ್ಯಕ್ಷ ಶಶಿಕುಮಾರ್, ತಾಲ್ಲೂಕು ಕಾರ್ಯದರ್ಶಿ ಸುದರ್ಶನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು