ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ರಾಮನ ಕಾರ್ಯಕ್ರಮಕ್ಕೆ ಅನುಮತಿ ರದ್ದು

Published 21 ಜನವರಿ 2024, 20:24 IST
Last Updated 21 ಜನವರಿ 2024, 20:24 IST
ಅಕ್ಷರ ಗಾತ್ರ

ಮುಳಬಾಗಿಲು: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಪ್ರಯುಕ್ತ ಮುಳಬಾಗಿಲಿನಲ್ಲಿ ಜ.21 ಮತ್ತು 22ರಂದು ಆಯೋಜಿಸಿದ್ದ ಶೋಭಾಯಾತ್ರೆ, ಸೀತಾರಾಮ ಕಲ್ಯಾಣೋತ್ಸವ ಹಾಗೂ ಇನ್ನಿತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ರದ್ದಾಗಿವೆ. 

ನಗರದಲ್ಲಿ ಎರಡು ದಿನ ನಡೆಯಬೇಕಾಗಿದ್ದ ಕಾರ್ಯಕ್ರಮಗಳಿಗೆ ತಹಶೀಲ್ದಾರ್ ಮತ್ತು ಪೊಲೀಸರು ಅನುಮತಿ ನೀಡಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.

ಇನ್ನೂ ಒಂದು ವರ್ಷ ಈ ರೀತಿಯ ಯಾವುದೇ ಕಾರ್ಯಕ್ರಮ ನಡೆಸದಂತೆ ಆಯೋಜಕರಿಗೆ ಸೂಚನೆ ನೀಡಿರುವ ತಹಶೀಲ್ದಾರ್‌, ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. 

ಕಾರ್ಯಕ್ರಮವನ್ನು ನೆರೆಯ ಆಂಧ್ರಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಪಲಮನೇರು ಪಟ್ಟಣದ ಮದನಪಲ್ಲಿ ರಸ್ತೆಯ ಮಧು ಕಾಲೇಜು ಆವರಣದಲ್ಲಿ ಜ.22ರಿಂದ 24ರವರೆಗೆ ಕಾರ್ಯಕ್ರಮ ನಡೆಯಲಿವೆ ಎಂದು ಕಾರ್ಯಕ್ರಮ ಆಯೋಜಕ, ಧ್ರುವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿ. ನಾಗರಾಜ್ ತಿಳಿಸಿದ್ದಾರೆ. 

ಲವಕುಶ ಸೇವಾ ಟ್ರಸ್ಟ್ ಅಧ್ಯಕ್ಷ ಸಿ. ಚಂದ್ರಶೇಖರ್ ಹಾಗೂ ಧ್ರುವ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿ. ನಾಗರಾಜ್ ನೇತೃತ್ವದಲ್ಲಿ ಜ. 21 ಮತ್ತು 22ರಂದು ರಾಮ ಪಟ್ಟಾಭಿಷೇಕ, ಶೋಭಾಯಾತ್ರೆ ಹಾಗೂ ಕಲ್ಯಾಣೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕರಪತ್ರ ಹಂಚಿ ಪ್ರಚಾರ ಮಾಡಲಾಗಿತ್ತು. 

ಪಟ್ಟಣದ ವಿವಿಧೆಡೆ ಅಳವಡಿಸಲಾಗಿದ್ದ ರಾಮನ ಫ್ಲೆಕ್ಸ್‌ ಹಾಗೂ ಕಟೌಟ್‌ಗಳನ್ನು ಈಚೆಗೆ ವ್ಯಕ್ತಿಯೊಬ್ಬ ಬ್ಲೇಡ್‌ನಿಂದ ಹರಿದು ಹಾಕಿದ ಕಾರಣ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮೂರು ವರ್ಷದ ಹಿಂದೆ ನಗರದಲ್ಲಿ ಶೋಭಾಯಾತ್ರೆ ನಡೆದ ವೇಳೆ ಕಲ್ಲು ತೂರಾಟದಿಂದಾಗಿ ಗಲಭೆ ನಡೆದಿತ್ತು.

ಅನುಮತಿ ಇಲ್ಲ: ಇತ್ತೀಚಿಗೆ ನಗರದಲ್ಲಿ ಶ್ರೀರಾಮನ ಫ್ಲೆಕ್ಸುಗಳನ್ನು ಕೆಲವು ಕಡೆ ಕಿಡಿಗೇಡಿಗಳು ಹರಿದು ಹಾಕಿದ್ದರಿಂದ ಕೆಲವು ದಿನ ನಗರದಲ್ಲಿ ಶೋಭಯಾತ್ರೆ ಅಥವಾ ಇನ್ನಿತರೆ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ. ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಾಗೂ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಎಲ್ಲಾ ಆಚರಣೆಗಳಿಗೆ ಕೆಲವು ದಿನಗಳ ಕಾಲ ಅನುಮತಿ ನೀಡುವುದನ್ನು ನಿಷೇಧಿಸಲಾಗಿದೆ ಎಂದು  ಗ್ರೇಡ್-2 ತಹಶೀಲ್ದಾರ್ ಬಿಬಿ.ಆರ್. ಮುನಿವೆಂಕಟಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT