ಗುರುವಾರ , ಜುಲೈ 29, 2021
26 °C
ಲಾಕ್‌ಡೌನ್‌ನಿಂದ ನಡೆಯದ ಶುಭಕಾರ್ಯಗಳು, ಜೀವನಕ್ಕಾಗಿ ಪರದಾಟ

ಮುಳಬಾಗಿಲು: ಮಸುಕಾದ ಛಾಯಾಗ್ರಾಹಕರ ಬದುಕು

ಜಿ.ವಿ.ಪುರುಷೋತ್ತಮರಾವ್ Updated:

ಅಕ್ಷರ ಗಾತ್ರ : | |

prajavani

ಮುಳಬಾಗಿಲು: ಮದುವೆ, ಮತ್ತಿತರ ಶುಭ ಸಮಾರಂಭಗಳಲ್ಲಿ ಪೋಟೊ, ವಿಡಿಯೋ ತೆಗೆಯುವಲ್ಲಿ ನಿರತರಾಗಬೇಕಿದ್ದ ಛಾಯ ಗ್ರಾಹಕರು ಇದೀಗ ಕೆಲಸವಿಲ್ಲದೆ ಜೀವನ ನಿರ್ವಹಣೆ ಕಷ್ಟಕರವಾಗಿದೆ.

ಮದುವೆ, ನಿಶ್ಚಿತಾರ್ಥ, ನಾಮಕರಣ, ಹುಟ್ಟುಹಬ್ಬ ಇತರೆ ಸಮಾರಂಭಗಳನ್ನು ನೆಚ್ಚಿಕೊಂಡ ಛಾಯಾಗ್ರಾಹಕರು ಅನೇಕರಿದ್ದಾರೆ. ಈ ಸಮಾರಂಭಗಳಿಂದ ಸಿಗುವ ಅಲ್ಪ ಆದಾಯ ಜೀವನಕ್ಕೆ ನೆರವಾಗುತ್ತಿದೆ. ಆದರೆ, ಲಾಕ್‌ಡೌನ್‌ ಘೋಷಣೆ ನಂತರ ತಾಲ್ಲೂಕಿನಲ್ಲಿ ಯಾವೊಂದು ಸಮಾರಂಭಗಳು ನಡೆಯುತ್ತಿಲ್ಲ. ಹಾಗಾಗಿ ಛಾಯಾಗ್ರಾಹಕರ ಕೈ ಬರಿದಾಗಿದೆ.

ತಾಲ್ಲೂಕಿನಲ್ಲಿ ಸುಮಾರ 360ಕ್ಕೂ ಹೆಚ್ಚು ಕುಟುಂಬಗಳು ಛಾಯಾಗ್ರಹಣವನ್ನು ನೆಚ್ಚಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿವೆ. 180 ಛಾಯಾಗ್ರಹಕರಿದ್ದು ಅವರಿಗೆ ಕನಿಷ್ಠ ಒಬ್ಬರು ಸಹಾಯಕರಿದ್ದಾರೆ.

ಸಾಮಾನ್ಯವಾಗಿ ಛಾಯಾಗ್ರಾಹಕರು ಮಾರ್ಚ್‌ ಏಪ್ರಿಲ್‌, ಮೇ ತಿಂಗಳು ಬರುವದನ್ನೇ ಕಾಯುತ್ತಾರೆ. ಈ ತಿಂಗಳಿನಲ್ಲಿಯೇ ಶೇ 50ರಷ್ಟು ಮದುವೆ, ಇತರೆ ಶುಭ ಸಮಾರಂಭಗಳು ನಡೆಯುವುದರಿಂದ ಒಂದಿಷ್ಟು ಆದಾಯ ನೋಡುತ್ತಾರೆ. ಇಂತಹ ಸಂದರ್ಭದಲ್ಲಿ ಲಾಕ್‌ಡೌನ್‌ ಘೋಷಣೆಯಾಗಿರುವುದರಿಂದ ಛಾಯಾಗ್ರಾಹಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮಾರ್ಚ್‌ನಲ್ಲಿ ಸಾಮಾನ್ಯವಾಗಿ ಹೊಸ ಕ್ಯಾಮೆರಾ ಖರೀಸಿಸುತ್ತೇವೆ. ಈ ವರ್ಷ ಖರೀದಿಸಿದ ಕ್ಯಾಮೆರಾಗಳು ಬಳಕೆಯಾಗಿಲ್ಲ. ಕೆಲ ಗ್ರಾಹಕರ ಬಳಿ ಮುಂಗಡ ಹಣ ಪಡೆದಿದ್ದೆವು ಅದನ್ನು ಹಿಂದಿರುಗಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಛಾಯಾಗ್ರಾಹಕ ಮತ್ತು ವಿಡಿಯೊಗ್ರಾಫರ್‌ ಸಂಘದ ಅಧ್ಯಕ್ಷ ಜಮಿನಿ ರಮೇಶ್‌.

ಛಾಯಾಗ್ರಾಹಕ ಮುರಳಿ ಮಾತನಾಡಿ, ಕೆಲವರು ಛಾಯಾಗ್ರಾಹಕ ವೃತ್ತಿ ಬಿಟ್ಟು ಬೇರೆ ವೃತ್ತಿ ಕಲಿತಿಲ್ಲ. ನೂರಾರು ಮಂದಿ ಹತ್ತಾರು ವರ್ಷಗಳಿಂದ ಈ ಉದ್ಯೋಗದಿಂದ ಬರುವ ಆದಾಯದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಲಕ್ಷಾಂತರ ರೂಪಾಯಿ ವ್ಯಯಿಸಿ ಕ್ಯಾಮೆರಾ ಖರೀದಿಸಿದ್ದಾರೆ. ಕೆಲವರು ಸಾಲ ಮಾಡಿ ಕ್ಯಾಮೆರಾ, ಇತರೆ ಪರಿಕರಗಳನ್ನು ಖರೀದಿಸಿದ್ದಾರೆ. ಕೆಲವು ಮಾಲೀಕರು ತಮ್ಮ ಸ್ಟೂಡಿಯೋಗಳಲ್ಲಿ ಕೆಲವು ಹುಡುಗರನ್ನು ಉದ್ಯೋಗಕ್ಕೆ ನೇಮಿಸಿಕೊಂಡಿದ್ದಾರೆ. ಆದರೆ, ಇವರೆಲ್ಲರಿಗೆ ಸಂಬಳ ನೀಡುವುದಕ್ಕೂ ತೊಂದರೆಯಾಗಿದೆ. ಲಾಕ್‌ಡೌನ ಸಡಿಲಿಕೆ ನಂತರವೂ ಪರಿಸ್ಥಿತಿ ಸುಧಾರಿಸಿಲ್ಲ. ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು ಸರ್ಕಾರ ಸಹಾಯಕ್ಕೆ ಬರಬೇಕು ಎಂದು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು