ಸೋಮವಾರ, ಜುಲೈ 4, 2022
21 °C
ಆರೋಗ್ಯವಂತ ಸಮಾಜ ನಿರ್ಮಾಣ ಮಾಡಿ: ಜಿಲ್ಲಾಧಿಕಾರಿ ವೆಂಕಟ್‌ರಾಜಾ ಮನವಿ

ಕೋಲಾರ ಜಿಲ್ಲೆಯಲ್ಲಿ 27ಕ್ಕೆ ಪೋಲಿಯೊ ಲಸಿಕೆ ನೀಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿ ಫೆ.27ರಂದು ಮೊದಲ ಸುತ್ತಿನ ಪೋಲಿಯೊ ಲಸಿಕೆ ನೀಡಲಾಗುವುದು. ಪೋಷಕರು ಪ್ರತಿ ಮಗುವಿಗೂ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು’ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಮನವಿ ಮಾಡಿದರು.

ಇಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಪೋಲಿಯೊ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ಪೋಲಿಯೊ ನಿರ್ಮೂಲನೆಯಲ್ಲಿ ಭಾರತವು ಗಣನೀಯ ಪ್ರಗತಿ ಸಾಧಿಸಿದ್ದು, 2014ರಲ್ಲೇ ‍ಪೋಲಿಯೊ ಮುಕ್ತ ರಾಷ್ಟ್ರವಾಗಿದೆ' ಎಂದು ತಿಳಿಸಿದರು.

‘ಪೋಲಿಯೊ ಲಸಿಕೆ ಅಭಿಯಾನದ ಯಶಸ್ಸಿಗೆ ಆರೋಗ್ಯ ಇಲಾಖೆ ಜತೆಗೆ ಇತರೆ ಇಲಾಖೆ ಸಿಬ್ಬಂದಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಬೇಕು. ಮಕ್ಕಳ ಆರೋಗ್ಯಕರ ಬೆಳವಣಿಗೆ ಹಾಗೂ ಬಾಲ್ಯಾವಸ್ಥೆಯಲ್ಲಿ ಯಾವುದೇ ದೈಹಿಕ ನ್ಯೂನತೆ ಬಾರದಂತೆ ತಡೆಯಲು ಸರ್ಕಾರ ಉಚಿತವಾಗಿ ಈ ಅಭಿಯಾನ ನಡೆಸುತ್ತಿದೆ’ ಎಂದು ಹೇಳಿದರು.

‘ಕರ್ನಾಟಕದಲ್ಲಿ ಕೊನೆಯ ಪೋಲಿಯೊ ಪ್ರಕರಣ 2007ರಲ್ಲಿ ರಾಜ್ಯಕ್ಕೆ ವಲಸೆ ಬಂದಿದ್ದ ಗುಂಪಿನಲ್ಲಿ ಪತ್ತೆಯಾಗಿತ್ತು. ಆ ನಂತರ ಈವರೆಗೆ ಪೋಲಿಯೊ ಪ್ರಕರಣ ಪತ್ತೆಯಾಗಿಲ್ಲ. ಪೋಷಕರು ಯಾವುದೇ ವದಂತಿಗೆ ಕಿವಿಗೊಡದೆ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು’ ಎಂದು ಸಲಹೆ ನೀಡಿದರು.

ಪೋಲಿಯೊ ಮುಕ್ತ ರಾಷ್ಟ್ರ: ‘ಭಾರತದಲ್ಲಿ 2011ರಿಂದ ಹೊಸದಾಗಿ ಯಾವುದೇ ಪೋಲಿಯೊ ಪ್ರಕರಣ ವರದಿಯಾಗಿಲ್ಲ. ಭಾರತವು ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಪೋಲಿಯೊ ಮುಕ್ತ ರಾಷ್ಟ್ರವೆಂಬ ಪ್ರಮಾಣಪತ್ರ ಪಡೆದಿದೆ. ನೆರೆಯ ದೇಶಗಳಾದ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಪೋಲಿಯೊ ಪ್ರಕರಣ ಕಂಡುಬಂದಿರುವುದರಿಂದ ಹಾಗೂ ಪೋಲಿಯೊ ಮತ್ತೆ ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆ ಇರುವುದರಿಂದ ಲಸಿಕೆ ಅಭಿಯಾನ ಮುಂದುವರಿಸಲಾಗಿದೆ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ವಿಜಯಕುಮಾರಿ ವಿವರಿಸಿದರು.

‘ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿ 743 ಬೂತ್‌ಗಳಲ್ಲಿ ಪೋಲಿಯೊ ಲಸಿಕೆ ನೀಡಲಾಗುವುದು. ಲಸಿಕೆ ನೀಡುವ 3 ದಿನ ವಿದ್ಯುತ್ ಸಂಪರ್ಕವಿರಬೇಕು. ಬೆಸ್ಕಾಂ ಇಲಾಖೆಯವರು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಬಾರದು’ ಎಂದು ಕೋರಿದರು.

ಶೇ 84ರಷ್ಟು ಪ್ರಗತಿ: ‘ಹಿಂದಿನ ವರ್ಷ ಮೊದಲನೇ ದಿನ ಲಸಿಕೆ ನೀಡಿಕೆಯಲ್ಲಿ ಶೇ 84ರಷ್ಟು ಪ್ರಗತಿ ಸಾಧಿಸಿದ್ದೆವು. ಈ ಬಾರಿ ಅಂಗನವಾಡಿ ಕೇಂದ್ರಗಳ ಮೂಲಕವೂ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಲಸಿಕೆ ಬಗ್ಗೆ ಎಲ್ಲಾ ಶಾಲೆಗಳಲ್ಲಿ ಅರಿವು ಕಾರ್ಯಕ್ರಮ ನಡೆಸಿದ್ದೇವೆ. ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್‌ ವಿದ್ಯಾರ್ಥಿಗಳು ಲಸಿಕೆ ಹಾಕುತ್ತಾರೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯುಕೇಶ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌.ಎನ್‌.ವಿಜಯ್‌ಕುಮಾರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.