ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾ ಮನೋಭಾವದಿಂದ ವೃತ್ತಿ ಪರಿಣತಿ ಸಾಧಿಸಿ

ಬೆಂಗಳೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಕಸ್ತೂರಿ ಕಿವಿಮಾತು
Last Updated 12 ಮೇ 2022, 14:29 IST
ಅಕ್ಷರ ಗಾತ್ರ

ಕೋಲಾರ: ‘ಶುಶ್ರೂಷಕಿಯರು ವೃತ್ತಿ ಜೀವನದಲ್ಲಿ ನಿಸ್ವಾರ್ಥ ಸೇವಾ ಮನೋಭಾವ ಮೈಗೂಡಿಸಿಕೊಂಡು ವೃತ್ತಿಯಲ್ಲಿ ಪರಿಣತಿ ಸಾಧಿಸಬೇಕು’ ಎಂದು ಬೆಂಗಳೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ.ಜಿ.ಕಸ್ತೂರಿ ಕಿವಿಮಾತು ಹೇಳಿದರು.

ನಗರದ ದೇವರಾಜ ಅರಸು ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ನಡೆದ ಅಂತರರಾಷ್ಟ್ರೀಯ ನರ್ಸ್‍ಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ‘ರೋಗಿಗಳು ನರ್ಸ್‌ಗಳಿಂದ ಪ್ರೀತಿ, ಮಮತೆ ಮತ್ತು ನಗು ಮೊಗದ ಸೇವೆ ನಿರೀಕ್ಷಿಸುತ್ತಾರೆ ಇದಕ್ಕೆ ಲೋಪವಾಗದಂತೆ ನರ್ಸ್‍ಗಳು ಕರ್ತವ್ಯ ನಿರ್ವಹಿಸಬೇಕು’ ಎಂದು ತಿಳಿಸಿದರು.

‘ರೋಗಿಗಳ ಜೀವ ಉಳಿಸುವಲ್ಲಿ ವೈದ್ಯರಷ್ಟೇ ನರ್ಸ್‌ಗಳ ಪಾತ್ರವೂ ಮುಖ್ಯ. ತಾಳ್ಮೆ, ಸಹನೆ ಮತ್ತು ಪ್ರೀತಿಯಿಂದ ರೋಗಿಗಳ ಆರೈಕೆ ಮಾಡುವ ನರ್ಸ್‌ಗಳ ಸೇವೆಗೆ ಬೆಲೆ ಕಟ್ಟಲಾಗುವುದಿಲ್ಲ. ಆಸ್ಪತ್ರೆ ಯಾವುದೇ ಇರಲಿ ನರ್ಸ್‌ಗಳ ಪಾತ್ರ ನಿರ್ಣಾಯಕ’ ಎಂದು ಅಭಿಪ್ರಾಯಪಟ್ಟರು.

‘ದಿನದ 24 ತಾಸೂ ರೋಗಿಗಳ ಆರೈಕೆ ಮಾಡುವ ನರ್ಸ್‌ಗಳ ಹುದ್ದೆ ಪವಿತ್ರವಾದದ್ದು. ಇವರ ಸೇವೆ ಮತ್ತು ಪರಿಶ್ರಮವನ್ನು ಸಮಾಜ ಗುರುತಿಸಬೇಕು. ಕೆಲವರು ಮಾಡುವ ತಪ್ಪನ್ನು ನೆಪ ಮಾಡಿಕೊಂಡು ಇಡೀ ನರ್ಸ್‌ಗಳಿಗೆ ಕಳಂಕ ತರುವುದು ತಪ್ಪು’ ಎಂದು ಹೇಳಿದರು.

ಸವಾಲಿಗೆ ಸಜ್ಜಾಗಿ: ‘ಫ್ಲಾರೆನ್ಸ್ ನೈಟಿಂಗೇಲ್, ಮದರ್ ಥೆರೆಸಾ ಸೇರಿದಂತೆ ಅನೇಕರು ಆರೋಗ್ಯ ಸೇವೆಯನ್ನು ನಿಸ್ವಾರ್ಥವಾಗಿ ನೀಡಿದ್ದಕ್ಕಾಗಿ ವಿಶ್ವಕ್ಕೆ ಮಾದರಿಯಾಗಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ನರ್ಸ್‍ಗಳ ಪಾತ್ರ ಮಹತ್ವದಾಗಿದ್ದು, ಆಧುನಿಕ ವೈದ್ಯಕೀಯ ಲೋಕದ ಆರೋಗ್ಯದ ಸವಾಲುಗಳನ್ನು ಎದುರಿಸಲು ನರ್ಸ್‍ಗಳು ಸಜ್ಜಾಗಬೇಕು’ ಎಂದು ದೇವರಾಜ ಅರಸು ವೈದ್ಯಕೀಯ ಕಾಲೇಜಿನ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಶೀಲಾ ಸಲಹೆ ನೀಡಿದರು.

‘ಸುಪ್ರೀಂ ಕೋರ್ಟ್‌ ಆರೋಗ್ಯ ಸೇವೆಯು ಪ್ರತಿಯೊಬ್ಬರ ಮೂಲಭೂತ ಹಕ್ಕು ಎಂದು ಆದೇಶ ನೀಡಿದೆ. ಜೀವನದಲ್ಲಿ ಅನೇಕ ಸಂದರ್ಭಗಳಲ್ಲಿ ವೈದ್ಯಕೀಯ ಸೇವೆ, ಚಿಕಿತ್ಸೆ ಬೇಕಾಗುತ್ತದೆ. ಅದನ್ನು ಆರೋಗ್ಯ, ವೈದ್ಯಕೀಯ ಕ್ಷೇತ್ರದವರಿಂದ ಮಾತ್ರ ಪೂರೈಸಲು ಸಾಧ್ಯ’ ಎಂದರು.

ತಂತ್ರಜ್ಞಾನ ಅರ್ಥೈಸಿಕೊಳ್ಳಿ: ‘ದೈಹಿಕ ದುರ್ಬಲರು ಹಾಗೂ ನೊಂದ ಜೀವಗಳಿಗೆ ಸ್ಪಂದಿಸುವ ಜತೆಗೆ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ಸಹನೆ, ಸಹಾನುಭೂತಿ ಮತ್ತು ಬದ್ಧತೆಯ ಜತೆಗೆ ಆಧುನಿಕ ತಂತ್ರಜ್ಞಾನ ಅರ್ಥೈಸಿಕೊಳ್ಳುವುದನ್ನು ನರ್ಸ್‍ಗಳು ಅಭ್ಯಾಸ ಮಾಡಬೇಕು’ ಎಂದು ದೇವರಾಜ ಅರಸು ವೈದ್ಯಕೀಯ ಕಾಲೇಜಿನ ಉಪ ವೈದ್ಯಕೀಯ ಸೂಪರಿಂಟೆಂಡೆಂಟ್‌ ಡಾ.ಕೆ.ದಿನೇಶ್ ತಿಳಿಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಹಾಗೂ ದೇವರಾಜ ಅರಸು ವೈದ್ಯಕೀಯ ಕಾಲೇಜಿನ ವಿವಿಧ ವಿಭಾಗಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸಾಧಕ ನರ್ಸ್‍ಗಳನ್ನು ಗೌರವಿಸಲಾಯಿತು. ದೇವರಾಜ ಅರಸು ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ಜಿ.ವಿಜಯಲಕ್ಷ್ಮೀ, ಉಪ ಪ್ರಾಂಶುಪಾಲೆ ಡಾ.ಲಾವಣ್ಯ, ಆಡಳಿತಾಧಿಕಾರಿ ಡಾ.ಸಿ.ಜೆ.ಜೀನತ್, ಸಹಾಯಕ ಪ್ರಾಧ್ಯಾಪಕಿ ಸುಮನಾ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT